ADVERTISEMENT

ಕ್ರಿಸ್ ಗೇಲ್ ಆಟಕ್ಕೆ ತಲೆಬಾಗಿದ ಇಂಡಿಯನ್ಸ್

ರೋಚಕ ತಿರುವು ನೀಡಿದ ವಿನಯ್; ಪ್ರಶಸ್ತಿ ಜಯಿಸುವ ಕನಸಿಗೆ ಚಾಲೆಂಜರ್ಸ್ ಗೆಲುವಿನ ಮುನ್ನುಡಿ

ಕೆ.ಓಂಕಾರ ಮೂರ್ತಿ
Published 4 ಏಪ್ರಿಲ್ 2013, 19:44 IST
Last Updated 4 ಏಪ್ರಿಲ್ 2013, 19:44 IST

 ಬೆಂಗಳೂರು: ಕಷ್ಟಪಟ್ಟು ಟಿಕೆಟ್ ಖರೀದಿಸಿ ಒಳಬಂದಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮೋಸ ಆಗಲಿಲ್ಲ. ಅಂಗಳದೊಳಗೆ ಆರು ಬದಿಯಲ್ಲಿ ಹಾಕಿದ್ದ ವೇದಿಕೆ ಮೇಲೆ ಚಿಯರ್ ಬೆಡಗಿಯರ ಕುಣಿತದ ಮನರಂಜನೆಯ ಜೊತೆ ಸಿಕ್ಸರ್, ಬೌಂಡರಿಗಳ ವೈಭವವನ್ನು ಮನತುಂಬಿಕೊಂಡರು. ದಿಗ್ಗಜರಾದ ಸಚಿನ್, ಪಾಂಟಿಂಗ್ ಹಾಗೂ ಗೇಲ್ ಅವರ ಚಿತ್ರವನ್ನು ಕಣ್ಣಲ್ಲಿಯೇ ಸೆರೆ ಹಿಡಿದರು.

ಆದರೆ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಾಗಿದ ಪಂದ್ಯದಲ್ಲಿ ವಿಜಯಲಕ್ಷ್ಮಿ ಒಲಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ. ಈ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಆರ್‌ಸಿಬಿ ಕನಸಿಗೆ ಗೆಲುವಿನ ಮುನ್ನುಡಿ ಲಭಿಸಿತು.

ಕೊನೆಯ ಓವರ್‌ನಲ್ಲಿ ವೇಗಿ ಆರ್.ವಿನಯ್ ಕುಮಾರ್ ಎರಡು ವಿಕೆಟ್ ಪಡೆದು ಮಹತ್ವದ ತಿರುವು ನೀಡಿದರು. ಆ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗಾಗಿ 10 ರನ್‌ಗಳು ಬೇಕಿದ್ದವು. ಆದರೆ ಬಂದಿದ್ದು ಕೇವಲ 7 ರನ್.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಎರಡು ರನ್‌ಗಳಿಂದ ಗ್ದ್ದೆದು ಬೀಗಿತು. 157 ರನ್‌ಗಳ ಗುರಿ ಮುಂಬೈ ಇಂಡಿಯನ್ಸ್ ಕೈಗೆಟುಕಲೇ ಇಲ್ಲ. ಈ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು 154 ರನ್ ಮಾತ್ರ.

ಮುಂಬೈ ಇಂಡಿಯನ್ಸ್‌ಗೆ ಉತ್ತಮ ಆರಂಭವೇ ಲಭಿಸಿತ್ತು. ಸಚಿನ್ ಜೊತೆ  ಇನಿಂಗ್ಸ್ ಆರಂಭಿಸಿದ ಪಾಂಟಿಂಗ್ ಅಚ್ಚರಿ ಮೂಡಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 45 ಎಸೆತಗಳಲ್ಲಿ 52 ರನ್ ಸೇರಿಸಿದರು. ಸಚಿನ್ ವಿಕೆಟ್ ಪತನ ರನ್‌ವೇಗಕ್ಕೆ ಕಡಿವಾಣ ಹಾಕಿತು.

ಆದರೆ ಕ್ರಿಸ್ಟಿಯಾನ್ ಹಾಕಿದ 17ನೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಹ್ಯಾಟ್ರಿಕ್ ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದ್ದು ಪಂದ್ಯದ ಹಣೆಬರಹವನ್ನೇ ಬದಲಾಯಿಸುವ ಸೂಚನೆ ನೀಡಿತ್ತು. ಆ ಓವರ್‌ನಲ್ಲಿ 24 ರನ್‌ಗಳು ಬಂದವು. ಆದರೆ ಕೊನೆಯ ಓವರ್‌ಗಳಲ್ಲಿ ಮುರಳೀಧರನ್, ಉನದ್ಕತ್ ಹಾಗೂ ವಿನಯ್ (27ಕ್ಕೆ3)  ಕಡಿವಾಣ ಹಾಕಿದರು. ಹಾಗಾಗಿ ದಿನೇಶ್ (60; 37 ಎ, 3 ಬೌಂ., 4 ಸಿ.) ಆಟ ವ್ಯರ್ಥವಾಯಿತು.

ಆರ್‌ಸಿಬಿಗೆ ಗೇಲ್ ಆಟವೇ ಬಲ: ನಿರೀಕ್ಷೆಯಂತೆ ಗೇಲ್ ಸಿಕ್ಸರ್‌ಗಳ ಪಟಾಕಿಗೆ ಪ್ರೇಕ್ಷಕರ ಸಂಭ್ರಮವೂ ಹೆಚ್ಚಾಯಿತು. ಸಿಕ್ಸರ್‌ಗಳ ಗಮ್ಮತ್ತಿನ ಆಸ್ವಾದ ಅಭಿಮಾನಿಗಳಿಗೆ ಸಕತ್ತಾಗಿಯೇ ಲಭಿಸಿತು. ಗೇಲ್ (ಅಜೇಯ 92; 58 ಎಸೆತ, 11 ಬೌಂಡರಿ, 5 ಸಿಕ್ಸರ್) ಎಂದಿನಂತೆ ತಮ್ಮದೇ ಆದ ಗತ್ತಿನ ಶೈಲಿಯಲ್ಲಿ ಸಿಕ್ಸರ್ ಎತ್ತಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಡಗ್‌ಔಟ್‌ನಲ್ಲಿ ಕುಳಿತಿದ್ದ ಕೊಹ್ಲಿ ಸಿಕ್ಸರ್ ಬೇಕು ಎಂದು ಕೈಸನ್ಹೆ ಮಾಡುತ್ತಿದ್ದಂತೆ ಚೆಂಡನ್ನು ಗ್ಯಾಲರಿಯತ್ತ ಎತ್ತುತ್ತಿದ್ದರು. ಆಗ ಚಿಯರ್ ಬೆಡಗಿಯರ ಕುಣಿತವೂ ಹೆಚ್ಚಾಗುತಿತ್ತು. ಆದರೆ ಕೆರಿಬಿಯನ್ ಆಟಗಾರನ ಮೇಲೆ ಆರ್‌ಸಿಬಿ ವಿಪರೀತ ಅವಲಂಬಿಸಿರುವುದು ಮೊದಲ ಪಂದ್ಯದಲ್ಲೇ ಸಾಬೀತಾಯಿತು.

ನಿಧಾನವಾಗಿ ಆಡುತ್ತಿದ್ದ ಗೇಲ್ ಒಮ್ಮೆಲೇ ಅಬ್ಬರ ಶುರುವಚ್ಚಿಕೊಂಡರು. ಒಮ್ಮೆ ಭಜ್ಜಿ ಡಿಕ್ಕಿ ಹೊಡೆದ ಕಾರಣ ಕೆಳಗೆ ಬಿದ್ದ ಗೇಲ್ ಮಂಡಿಗೆ ಗಾಯವಾಯಿತು. ಈ ಕಾರಣ ಅವರು ನಿಂತಲ್ಲೇ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಶುರು ಮಾಡಿದರು. ಮುರಿಯದ ಆರನೇ ವಿಕೆಟ್‌ಗೆ ಗೇಲ್ ಹಾಗೂ ಕಾರ್ತಿಕ್ 76 ರನ್ (44 ಎಸೆತ) ಸೇರಿಸಿದರು. ಈ ಕಾರಣ ತಂಡದ ಮೊತ್ತ 150 ರನ್‌ಗಳ ಗೆರೆ ದಾಟಿತು.

ಆರ್‌ಸಿಬಿ ತಂಡದ ಇನ್ನುಳಿದ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಶ್ರೇಯ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಸಲ್ಲಬೇಕು. ಅದರಲ್ಲೂ ಈ ತಂಡದ ಹೊಸ ಮುಖ ಜಸ್‌ಪ್ರಿತ್ ಬುಮ್ರಾ (32ಕ್ಕೆ3) ಅವರು ಗಮನಾರ್ಹ ಪ್ರದರ್ಶನ ತೋರಿದರು. ಮಾಲಿಂಗ ಅನುಪಸ್ಥಿತಿಯನ್ನು ಸರಿದೂಗಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ರಾಯಲ್    ಚಾಲೆಂಜರ್ಸ್ ಆರಂಭ ಸಪ್ಪೆಯಾಗಿತ್ತು. ನಾಲ್ಕನೇ ಓವರ್‌ನಲ್ಲಿ ವಿರಾಟ್ ಸಿಕ್ಸರ್ ಎತ್ತಿದಾಗ ಕಿಕ್ಕಿರಿದು ತುಂಬಿದ್ದ ಅಂಗಳದಲ್ಲಿ ಮಿಂಚಿನ ಸಂಚಲನ ಶುರುವಾಗಿದ್ದು ನಿಜ. ಆದರೆ ಇದುವರೆಗೆ ಕ್ರಿಕೆಟ್ ಜಗತ್ತಿಗೆ ಗೊತ್ತಿರದ ಬೌಲರ್ ಜಸ್‌ಪ್ರಿತ್ ನಾಯಕ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು. ಗುಜರಾತ್ ಮೂಲದ ಈ ಆಟಗಾರನ ಖುಷಿಗೆ ಆಗ ಅಂತ್ಯವೇ ಇರಲಿಲ್ಲ.

ಕ್ರಿಕೆಟ್ ದಂತಕತೆ ಎನಿಸಿರುವ ಸಚಿನ್ ಹಾಗೂ ಪಾಂಟಿಂಗ್ ಈ ಆಟಗಾರನನ್ನು ತಬ್ಬಿಕೊಂಡು ಸಂಭ್ರಮಿಸಿದರು. ರಣಜಿ ಕ್ರಿಕೆಟ್‌ನಲ್ಲೂ ಆಡದ ಜಸ್‌ಪ್ರಿತ್‌ಗೆ ಈ ದಿಗ್ಗಜರೊಂದಿಗೆ ಆಡಲು ಅವಕಾಶ ಲಭಿಸಿದೆ. ಇದು ಐಪಿಎಲ್ ಕ್ರಿಕೆಟ್‌ನ ಮೋಡಿ. ಆ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಂಡರು.

ಸ್ಕೋರ್ ವಿವರ:

ADVERTISEMENT

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ  5 ವಿಕೆಟ್ ನಷ್ಟಕ್ಕೆ 156
ಕ್ರಿಸ್ ಗೇಲ್ ಔಟಾಗದೆ  92
ತಿಲಕರತ್ನೆ ದಿಲ್ಶಾನ್ ಬಿ ಮಿಷೆಲ್ ಜಾನ್ಸನ್  00
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರಿತ್ ಬುಮ್ರಾ  24
ಮಯಾಂಕ್ ಅಗರವಾಲ್ ಸಿ ಸಚಿನ್ ತೆಂಡೂಲ್ಕರ್ ಬಿ  ಜಸ್‌ಪ್ರಿತ್ ಬುಮ್ರಾ  01
ಡೇನಿಯಲ್ ಕ್ರಿಸ್ಟಿಯಾನ್ ಸಿ ಮಿಷೆಲ್ ಜಾನ್ಸನ್ ಬಿ   ಹರಭಜನ್ ಸಿಂಗ್  04
ಕರುಣ್ ನಾಯರ್ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರಿತ್ ಬುಮ್ರಾ  00
ಅರುಣ್ ಕಾರ್ತಿಕ್ ಔಟಾಗದೆ  19
ಇತರೆ (ಲೆಗ್‌ಬೈ-11, ವೈಡ್-5)  16
ವಿಕೆಟ್ ಪತನ: 1-3 (ದಿಲ್ಶಾನ್; 2.2); 2-28 (ಕೊಹ್ಲಿ; 4.5); 3-31    (ಮಯಾಂಕ್; 6.1); 4-75 (ಕ್ರಿಸ್ಟಿಯಾನ್; 11.4); 5-80 (ನಾಯರ್; 12.4).
ಬೌಲಿಂಗ್: ಮಿಷೆಲ್ ಜಾನ್ಸನ್ 3-0-15-1 (ವೈಡ್-2), ಮುನಾಫ್ ಪಟೇಲ್ 4-0-40-0, ಜಸ್‌ಪ್ರಿತ್ ಬುಮ್ರಾ 4-0-32-3, ಜೇಕಬ್ ಓರಮ್ 4-0-22-0 (ವೈಡ್-2), ಹರಭಜನ್ ಸಿಂಗ್ 4-0-21-1 (ವೈಡ್-1), ಕೀರನ್ ಪೊಲಾರ್ಡ್ 1-0-15-0
ಮುಂಬೈ ಇಂಡಿಯನ್ಸ್  20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154
ರಿಕಿ ಪಾಂಟಿಂಗ್ ಸ್ಟಂಪ್ಡ್ ಅರುಣ್ ಕಾರ್ತಿಕ್ ಬಿ ಮುರಳಿ ಕಾರ್ತಿಕ್  28
ಸಚಿನ್ ತೆಂಡೂಲ್ಕರ್ ರನ್‌ಔಟ್ (ಉನದ್ಕತ್/ಅರುಣ್)  23
ದಿನೇಶ್ ಕಾರ್ತಿಕ್ ಸಿ ಮಯಾಂಕ್ ಅಗರವಾಲ್ ಬಿ ಆರ್.ವಿನಯ್ ಕುಮಾರ್  60
ರೋಹಿತ್ ಶರ್ಮ ಬಿ ಆರ್.ವಿನಯ್ ಕುಮಾರ್  11
ಅಂಬಟಿ ರಾಯುಡು ಬಿ ಆರ್.ವಿನಯ್  ಕುಮಾರ್  18
ಕೀರನ್ ಪೊಲಾರ್ಡ್ ಔಟಾಗದೆ  05
ಹರಭಜನ್ ಸಿಂಗ್ ಔಟಾಗದೆ  01
ಇತರೆ (ಬೈ-1, ಲೆಗ್‌ಬೈ-4, ನೋಬಾಲ್-1, ವೈಡ್-2)  08
ವಿಕೆಟ್ ಪತನ: 1-52 (ಸಚಿನ್; 7.3); 2-62 (ಪಾಂಟಿಂಗ್; 9.5); 3-88 (ರೋಹಿತ್; 13.4); 4-148 (ದಿನೇಶ್; 19.2); 5-148 (ರಾಯುಡು; 19.3).
ಬೌಲಿಂಗ್: ಜಯದೇವ್ ಉನದ್ಕತ್ 4-0-26-0, ಡೇನಿಯಲ್ ಕ್ರಿಸ್ಟಿಯಾನ್ 4-0-42-0 (ನೋಬಾಲ್-1), ಆರ್.ವಿನಯ್ ಕುಮಾರ್ 4-0-27-3, ಮುತ್ತಯ್ಯ ಮುರಳೀಧರನ್ 4-0-30-0, ಮುರಳಿ ಕಾರ್ತಿಕ್ 4-0-24-1 (2 ವೈಡ್)
ಫಲಿತಾಂಶ: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 2 ರನ್‌ಗಳ ಜಯ.            
ಪಂದ್ಯ ಶ್ರೇಷ್ಠ: ಕ್ರಿಸ್ ಗೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.