ADVERTISEMENT

ಕ್ರೀಡೆ: ಚುಟುಕು- ಗುಟುಕು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಭಾರತದ ಸವಾಲು ಅಂತ್ಯ
ಸಿಡ್ನಿ (ಪಿಟಿಐ):
ಆರ್.ಎಂ.ವಿ. ಗುರುಸಾಯಿದತ್ ಹಾಗೂ ಆನಂದ್ ಪವಾರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಸೋಲು ಕಂಡರು. ಈ ಮೂಲಕ ಭಾರತದ ಹೋರಾಟ ಅಂತ್ಯ ಕಂಡಿತು.

ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಗುರುಸಾಯಿದತ್ 10-21, 21-18, 15-21ರಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ ಮಲೇಷ್ಯಾದ ಲೀ ಚೊಂಗ್ ವೇಯಿ ಎದುರು ನಿರಾಸೆ ಅನುಭವಿಸಿದರು.14 ಶ್ರೇಯಾಂಕದ ಆನಂದ್ 41 ನಿಮಿಷ ಹೋರಾಟ ನಡೆಸಿ 19-21, 15-21ರಲ್ಲಿ ಮಲೇಷ್ಯಾದ ವೇಯಿ ಫೆಂಗ್ ಚಾಂಗ್ ಎದುರು ಪರಾಭವಗೊಂಡರು.

`ನಾಡಾ ವರದಿ ಒಪ್ಪಿಕೊಳ್ಳುವುದು ಅಸಾಧ್ಯ'
ಚಂಡೀಗಡ (ಪಿಟಿಐ):
ಒಲಿಂಪಿಯನ್ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಉದ್ದೀಪನ ಮದ್ದು ಪರೀಕ್ಷೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ನೀಡುವ ವರದಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.`ನಾಡಾ ನೀಡುವ ವರದಿಗೆ ಕಾನೂನಿನ ಸಮರ್ಥನೆ ಇಲ್ಲ. ಆದ್ದರಿಂದ ಅದನ್ನು ಒಪ್ಪಿಕೊಳ್ಳಲು ಅಸಾಧ್ಯ' ಎಂದು ಫತೇಗಡ ಸಾಹಿಬ್ ಎಸ್‌ಎಸ್‌ಪಿ ಹೆಚ್.ಎಸ್. ಮನ್ನ್ ಗುರುವಾರ ತಿಳಿಸಿದರು.

ಹೆರಾಯಿನ್ ಸೇವಿಸಿದ ಆರೋಪ ಎದುರಿಸುತ್ತಿರುವ ವಿಜೇಂದರ್ ಪಂಜಾಬ್ ಪೊಲೀಸರಿಗೆ ತಮ್ಮ ರಕ್ತ ಮತ್ತು ಕೂದಲಿನ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ಮದ್ದು ಪರೀಕ್ಷೆಗೆ ಒಪ್ಪದಿದ್ದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಕೇಂದ್ರ ಕ್ರೀಡಾ ಇಲಾಖೆ ಎಚ್ಚರಿಸಿತ್ತು. ಇದರಿಂದ ವಿಜೇಂದರ್ ನಾಡಾಕ್ಕೆ ರಕ್ತ ಹಾಗೂ ಕೂದಲಿನ ಸ್ಯಾಂಪಲ್ ನೀಡಿದ್ದರು.

ಎನ್‌ಐಎಸ್ ಪಟಿಯಾಲದಲ್ಲಿ ವಿಜೇಂದರ್ ಜೊತೆಗೆ ಅಭ್ಯಾಸ ನಡೆಸುತ್ತಿದ್ದ ಇನ್ನೊಬ್ಬ ಬಾಕ್ಸರ್ ರಾಮ್‌ಸಿಂಗ್‌ನನ್ನು ಏಪ್ರಿಲ್ 7ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಮೂರು ವಾರಗಳ ವಿಚಾರಣೆಯ ಬಳಿಕ ರಾಮ್‌ಸಿಂಗ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದರು.

ಶೂಟಿಂಗ್: ಭಾರತಕ್ಕೆ ನಿರಾಸೆ
ನವದೆಹಲಿ (ಪಿಟಿಐ):
ಭಾರತದ ಶೂಟರ್‌ಗಳು ಕೊರಿಯಾದ ಚಾಂಗ್ವನ್‌ನಲ್ಲಿ ಆರಂಭವಾದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮೊದಲ ದಿನ ನಿಖರ ಗುರಿ ಹಿಡಿಯುವಲ್ಲಿ ವಿಫಲರಾದರು. ಆಭಿನವ್ ಬಿಂದ್ರಾ ಒಳಗೊಂಡಂತೆ ಪ್ರಮುಖ ಸ್ಪರ್ಧಿಗಳು 10 ಮೀ. ಏರ್ ರೈಫಲ್ ವಿಭಾಗದಲ್ಲಿ ಫೈನಲ್ ಪ್ರವೇಶಿಸುವಲ್ಲಿ ಎಡವಿದರು. ಬಿಂದ್ರಾ ಅರ್ಹತಾ ಹಂತದಲ್ಲಿ 15ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ಸಂಜೀವ್ ರಜಪೂತ್ ಮತ್ತು ಚಾಯನ್ ಸಿಂಗ್ ಇದೇ ವಿಭಾಗದಲ್ಲಿ ಕ್ರಮವಾಗಿ 19 ಮತ್ತು 25ನೇ ಸ್ಥಾನ ತಮ್ಮದಾಗಿಸಿಕೊಂಡರು. ಪುರುಷರ 50 ಮೀ. ಪಿಸ್ತೂಲ್ ವಿಭಾಗದಲ್ಲಿ ಪ್ರಕಾಶ್ ನಂಜಪ್ಪ         71.5 ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನ ಪಡೆದರು. ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಬಿಂದ್ರಾ ಒಟ್ಟು 619.9 ಪಾಯಿಂಟ್ (102.4 104.2 101.2 104.9 103.2 104.0) ಕಲೆಹಾಕಿದರು. ಸಂಜೀವ್ 618.2 ಹಾಗೂ ಚಾಯನ್ 616.2 ಪಾಯಿಂಟ್ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.