ADVERTISEMENT

ಕ್ವಾರ್ಟರ್‌ಗೆ ವಿಕಾಸ್‌ ಕೃಷ್ಣನ್‌

ಬಾಕ್ಸಿಂಗ್‌: ಇನ್ನೊಂದು ಜಯ ಪಡೆದರೆ ಪದಕ ಖಚಿತ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2016, 23:10 IST
Last Updated 13 ಆಗಸ್ಟ್ 2016, 23:10 IST
ಭಾರತದ  ವಿಕಾಸ್ ಕೃಷ್ಣನ್ (ಎಡಬದಿ) ಮತ್ತು ಟರ್ಕಿಯ  ಸೈಪಲ್‌ ಒಂಡೆರ್‌ ಅವರ ನಡುವಣ ಹಣಾಹಣಿ  ಎಎಫ್‌ಪಿ ಚಿತ್ರ
ಭಾರತದ  ವಿಕಾಸ್ ಕೃಷ್ಣನ್ (ಎಡಬದಿ) ಮತ್ತು ಟರ್ಕಿಯ ಸೈಪಲ್‌ ಒಂಡೆರ್‌ ಅವರ ನಡುವಣ ಹಣಾಹಣಿ ಎಎಫ್‌ಪಿ ಚಿತ್ರ   

ರಿಯೊ ಡಿ ಜನೈರೊ (ಪಿಟಿಐ):  ಭಾರತದ ಬಾಕ್ಸರ್‌ ವಿಕಾಸ್‌ ಕೃಷ್ಣನ್‌ ಪುರುಷರ ಮಿಡ್ಲ್‌ವೇಟ್‌ ವಿಭಾಗದ (75 ಕೆ.ಜಿ) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ರಿಯೊ ಕೂಟದಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ.

ಶುಕ್ರವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ವಿಕಾಸ್‌ 3–0 ರಲ್ಲಿ ಟರ್ಕಿಯ ಸೈಪಲ್‌ ಒಂಡೆರ್‌ ಅವರನ್ನು ಮಣಿಸಿದರು.
ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ  ಭಾರತದ ಬಾಕ್ಸರ್‌ ಮೂರು ಸುತ್ತುಗಳಲ್ಲೂ ಎದುರಾಳಿಯ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿದರು. ಮೊದಲ ಸುತ್ತು ಕೊನೆಗೊಳ್ಳಲು 38 ಸೆಕೆಂಡ್‌ಗಳು ಇರುವಾಗ ವಿಕಾಸ್‌ ಅವರ ಬಲವಾದ ‘ಪಂಚ್‌’ ನಿಂದ ಸೈಪಲ್‌ ಅವರ ಬಲಗಣ್ಣಿನ ಮೇಲಿನಿಂದ ರಕ್ತ ಸುರಿಯಿತು. ಇದರಿಂದ ಚಿಕಿತ್ಸೆಗಾಗಿ ಕೆಲ ನಿಮಿಷ ವಿಶ್ರಾಂತಿ ಪಡೆದರು.

ಎರಡನೇ ಸುತ್ತಿನಲ್ಲೂ ವಿಕಾಸ್‌ ಆಕ್ರಮಣಕಾರಿ ಪ್ರದರ್ಶನ ಮುಂದುವರಿಸಿದರು. ಮತ್ತೊಂದೆಡೆ ಸೈಪಲ್‌ ರಕ್ಷಣೆಗೆ ಹೆಚ್ಚು ಗಮನ ನೀಡಿದರು. ಭಾರತದ ಬಾಕ್ಸರ್‌ನಿಂದ ಅಂತರ ಕಾಯ್ದುಕೊಂಡು ಬಲವಾದ ‘ಪಂಚ್‌’ ಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ವಿಕಾಸ್‌ ಅವರು ರಕ್ಷಣೆಗೂ ಒತ್ತು ನೀಡಿ ಎದುರಾಳಿಯಿಂದ ಬಲವಾದ ಪಂಚ್‌ ಬೀಳದಂತೆ ಎಚ್ಚರಿಕೆ ವಹಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ವಿಕಾಸ್‌ ಉಜ್ಬೆಕಿಸ್ತಾನದ ಬೆಕ್ತೆಮಿರ್‌ ಮೆಲಿಕುಜೀವ್‌   ವಿರುದ್ಧ ಪೈಪೋಟಿ ನಡೆಸಲಿದ್ದು, ಪ್ರಬಲ ಸವಾಲು ಎದುರಾಗುವ ಸಾಧ್ಯತೆಯಿದೆ.

ಹೋದ ವರ್ಷ ನಡೆದ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಬೆಕ್ತೆಮಿರ್‌ ಭಾರತದ ಬಾಕ್ಸರ್‌ ವಿರುದ್ಧ ಜಯ ಪಡೆದಿದ್ದರು.
2015 ರಲ್ಲಿ ಏಷ್ಯನ್‌ ಬಾಕ್ಸಿಂಗ್ ಫೆಡರೇಷನ್‌ನ ‘ವರ್ಷದ ಅತ್ಯುತ್ತಮ ಬಾಕ್ಸರ್‌’ ಗೌರವಕ್ಕೆ ಪಾತ್ರರಾಗಿದ್ದ ಬೆಕ್ತೆಮಿರ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯದ ಡೇನಿಯಲ್‌ ಲೆವಿಸ್‌ ಅವರನ್ನು ಮಣಿಸಿದ್ದರು.

2014 ರಲ್ಲಿ ಯೂತ್‌ ಒಲಿಂಪಿಕ್ಸ್‌ ಮತ್ತು ಯೂತ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಉಜ್ಬೆಕಿಸ್ತಾನದ ಬಾಕ್ಸರ್‌, 2015ರಲ್ಲಿ ದೋಹಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪಡೆದಿದ್ದರು. ವಿಕಾಸ್‌ ಅವರು ಲಂಡನ್‌ ಒಲಿಂಪಿಕ್‌ ಕೂಟದಲ್ಲಿ ಪ್ರಾಥಮಿಕ ಸುತ್ತಿನಲ್ಲೇ ನಿರ್ಗಮಿಸಿದ್ದರು. ಆದರೆ ಈ ಬಾರಿ ಎಂಟರಘಟ್ಟ ಪ್ರವೇಶಿಸುವ ಮೂಲಕ ಹಿಂದಿನ ನಿರಾಸೆಯಿಂದ ಹೊರಬಂದಿದ್ದಾರೆ.

ಚಿನ್ನ ಗೆಲ್ಲುವೆ ಅಥವಾ ಬರಿಗೈಲಿ ಮರಳುವೆ: ‘ರಿಯೊದಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳಲ್ಲಿ ಬೆಕ್ತೆಮಿರ್‌ ಮೆಲಿಕುಜೀವ್‌ ಅವರೇ ಎಲ್ಲರಿಗಿಂತ ಬಲಿಷ್ಠ ಎನಿಸಿದ್ದಾರೆ.  ಅವರನ್ನು ಮಣಿಸಲು ಸಾಧ್ಯವಾದರೆ, ಚಿನ್ನದೊಂದಿಗೆ ತವರಿಗೆ ಮರಳುವೆ ಎಂದು ಖಚಿತವಾಗಿ ಹೇಳಬಲ್ಲೆ. ನನಗೆ ಬೆಳ್ಳಿ ಅಥವಾ ಕಂಚು ಲಭಿಸದು. ಒಂದೋ ಚಿನ್ನ ಗೆಲ್ಲುವೆ, ಇಲ್ಲದಿದ್ದರೆ ಬರಿಗೈಯಲ್ಲಿ ಮರಳುವೆ’ ಎಂದು ವಿಕಾಸ್‌ ಹೇಳಿದ್ದಾರೆ.

‘ಆತ (ಬೆಕ್ತೆಮಿರ್‌) ಯುವ ಬಾಕ್ಸರ್‌ ಆಗಿದ್ದು, ನನಗಿಂತ ಸ್ವಲ್ಪ ಹೆಚ್ಚು ತೂಕ ಹೊಂದಿದ್ದಾರೆ. ನನಗಿಂತಲೂ ಬಲವಾಗಿ ಪಂಚ್‌ ನೀಡಬಲ್ಲರು. ಆದರೆ ನಮ್ಮಿಬ್ಬರ ಎತ್ತರ ಒಂದೇ ಆಗಿದೆ’ ಎಂದಿದ್ದಾರೆ.

‘ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ ಷಿಪ್‌ ವೇಳೆ ಬೆಕ್ತೆಮಿರ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ನಾನು ಶ್ರೇಷ್ಠ ಫಾರ್ಮ್‌ನಲ್ಲಿರಲಿಲ್ಲ. ಆದರೆ ಇದೀಗ ಲಯವನ್ನು ಮರಳಿ ಪಡೆದುಕೊಂಡಿದ್ದು, ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಕ್ವಾರ್ಟರ್‌ ಫೈನಲ್‌ ಪಂದ್ಯ ಆಗಸ್ಟ್‌ 15ರಂದು ರಾತ್ರಿ 7 ಗಂಟೆಗೆ (ಭಾರತೀಯ ಕಾಲಮಾನ ಆಗಸ್ಟ್‌ 16ರ ಬೆಳಗಿನ ಜಾವ 3.30ಕ್ಕೆ) ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.