ADVERTISEMENT

ಕ್ವಾರ್ಟರ್‌ಫೈನಲ್‌ಗೆ ಪೇಸ್-ಭೂಪತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಮೆಲ್ಬರ್ನ್ (ಪಿಟಿಐ): ವಿಶ್ವಾಸಪೂರ್ಣ ಆಟವಾಡಿದ ಮೂರನೇ ಶ್ರೇಯಾಂಕಿತ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

ವರ್ಷದ ಮೊದಲ ಗ್ರಾಂಡ್‌ಸ್ಲ್ಯಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪೇಸ್-ಭೂಪತಿ ಜೋಡಿ ಸೋಮವಾರ ಇಲ್ಲಿ ನಡೆದ ಮೂರನೇ ಸುತ್ತಿನ ಆಕರ್ಷಕ ಪಂದ್ಯದಲ್ಲಿ 6-4, 4-6, 6-4ರಲ್ಲಿ ಸ್ಪೇನ್‌ನ 13ನೇ ಶ್ರೇಯಾಂಕದ ಮಾರ್ಕೆಲ್ ಗ್ರಾನೊಲ್ಲೆರ್ಸ್‌ ಹಾಗೂ ಟೊಮ್ಮಿ  ರೊಬ್ರೆಡೊ  ಜೋಡಿಯನ್ನು ಮಣಿಸಿತು.

33 ನಿಮಿಷ ನಡೆದ ಮೊದಲ ಸೆಟ್‌ನಲ್ಲಿ ಭಾರತದ ಜೋಡಿ ಎದುರಾಳಿ ಆಟಗಾರರಿಂದ ಪ್ರಬಲ ಪ್ರತಿರೋಧ ಎದುರಿಸಬೇಕಾಯಿತು. ಕರಾರುವಕ್ಕಾದ ಹೊಡೆತಗಳ ಮೂಲಕ ಮಾರ್ಕೆಲ್ ಹಾಗೂ ರೊಬ್ರೆಡೊ ಜೋಡಿ ಭಾರತದ ಆಟಗಾರರನ್ನು ಎರಡನೇ ಸೆಟ್‌ನಲ್ಲಿ ಮಣಿಸಿದರು.

ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಪೇಸ್-ಭೂಪತಿ ಎದುರಾಳಿ ಆಟಗಾರರಿಗೆ ‘ಶಾಕ್’ ನೀಡಿದರು. ಈ ಪಂದ್ಯವು ಒಟ್ಟು 77 ನಿಮಿಷಗಳವರೆಗೆ ನಡೆಯಿತು. ರೋಹನ್ ಬೋಪಣ್ಣ ಹಾಗೂ ಐಸಾಮ್-ಉಲ್-ಹಕ್-ಖುರೇಷಿ ಜೋಡಿ ಪುರುಷರ ಡಬಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿತು.

ಹತ್ತನೇ ಶ್ರೇಯಾಂಕದ ಬೋಪಣ್ಣ ಹಾಗೂ ಖುರೇಷಿ ಜೋಡಿ 6-3, 6-7, 6-7ರಲ್ಲಿ ಎಂಟನೇ ಶ್ರೇಯಾಂಕದ ಫ್ರಾನ್ಸ್‌ನ ಮೈಕಾಯಿಲ್ ಲೊಯಾಡ್ರಾ ಹಾಗೂ ಸರ್ಬಿಯಾದ ನೆನಾದ್ ಜಿಮೊಂಜಿಕ್ ವಿರುದ್ಧ ಪರಾಭವಗೊಂಡಿತು.ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ‘ಇಂಡೋ ಪಾಕ್ ಎಕ್ಸಪ್ರೆಸ್’ ಮುಂದಿನ ಎರಡೂ ಸೆಟ್‌ಗಳಲ್ಲಿ ಎದುರಾಳಿ ಆಟಗಾರರಿಗೆ ಪ್ರಬಲ ಪೈಪೋಟಿ ನೀಡಿದರಾದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

ರಿಷಿಕಾ, ಕ್ರಿಸ್‌ಜಿನಾಗೆ ಸೋಲು: ಭಾರತದ ರಿಷಿಕಾ ಸುಂಕರ್ ಹಾಗೂ ಹಂಗೇರಿಯಾದ ಕ್ರಿಸ್‌ಜಿನಾ ಕಪಿಟಾನಿ ಜೋಡಿ ಜೂನಿಯರ್ ಬಾಲಕಿಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿತು.

ಈ ಜೋಡಿ 4-6, 6-4, 3-10ರಲ್ಲಿ ಆತಿಥೇಯ ಆಸ್ಟ್ರೇಲಿಯಾದ ಕಾಸ್ಸಂದ್ರ ಡುನ್ಸೆರ್ ಹಾಗೂ ಅಜ್ರಾ ಡುನ್ಸೆರ್ ಜೋಡಿ ಎದುರು ಪರಾಭವಗೊಂಡರು. ರಿಷಿಕಾ, ಕ್ರಿಸ್‌ಜಿನಾ ಜೋಡಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ, ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡು ಮುನ್ನಡೆ ಪಡೆಯಿತು. ಆದರೆ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಸುಲಭವಾಗಿ ಸೋಲು ಅನುಭವಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.