ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಭಾರತ ‘ಎ’

ಏಷ್ಯನ್‌ ಸ್ನೂಕರ್‌ ತಂಡ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಕ್ವಾರ್ಟರ್‌ ಫೈನಲ್‌ಗೆ ಭಾರತ ‘ಎ’
ಕ್ವಾರ್ಟರ್‌ ಫೈನಲ್‌ಗೆ ಭಾರತ ‘ಎ’   

ಬಿಸಕೆಕ್‌, ಕಿರ್ಗಿಸ್ತಾನ : ಅಮೋಘ ಆಟ ಆಡಿದ ಭಾರತ  ‘ಎ’ ತಂಡದವರು ಏಷ್ಯನ್‌ ಸ್ನೂಕರ್ ತಂಡ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕದ ಪಂಕಜ್‌ ಅಡ್ವಾಣಿ ಮತ್ತು ಲಕ್ಷ್ಮಣ್‌ ರಾವತ್‌ ಅವರನ್ನು ಹೊಂದಿದ್ದ ಭಾರತ ತಂಡ 3–2 ಫ್ರೇಮ್‌ಗಳಿಂದ ಇರಾನ್‌ ‘ಬಿ’ ತಂಡವನ್ನು ಪರಾಭವಗೊಳಿಸಿತು.

ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದಿದ್ದ 16 ಬಾರಿಯ ವಿಶ್ವ ಚಾಂಪಿಯನ್‌ ಆಟಗಾರ ಪಂಕಜ್‌ ತಂಡ ವಿಭಾಗದಲ್ಲೂ ಮೋಡಿ ಮಾಡಿದರು.

ADVERTISEMENT

ಗುಣಮಟ್ಟದ ಆಟ ಆಡಿದ ಪಂಕಜ್‌ ಮತ್ತು ಲಕ್ಷ್ಮಣ್‌ ಅವರಿಗೆ ಎದುರಾಳಿ ಆಟ ಗಾರರೂ ತೀವ್ರ ಪೈಪೋಟಿ ಒಡ್ಡಿದರು. ಹೀಗಾಗಿ ಮೊದಲ ನಾಲ್ಕು ಫ್ರೇಮ್‌ಗಳ ಆಟ ಮುಗಿದಾಗ 2–2ರಲ್ಲಿ ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಐದನೇ ಫ್ರೇಮ್‌ನಲ್ಲಿ ಭಾರತದ ಆಟಗಾರರು ಪರಿಣಾಮಕಾರಿ ಆಟ ಆಡಿ ಇರಾನ್‌ ತಂಡದವರ ಸವಾಲು ಮೀರಿನಿಂತರು.
ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡದವರು 3–0 ಫ್ರೇಮ್‌ಗಳಿಂದ ಕತಾರ್‌ ತಂಡವನ್ನು ಸೋಲಿಸಿದ್ದರು.

ಧರ್ಮೇಂದ್ರ ಲಿಲ್ಲಿ ಮತ್ತು ಸಂದೀಪ್‌ ಗುಲಾಟಿ ಅವರನ್ನು ಹೊಂದಿದ್ದ ಭಾರತ ‘ಬಿ’ ತಂಡ ಗುಂಪು ಹಂತದಿಂದಲೇ ಹೊರ ಬಿದ್ದಿತು. ಧರ್ಮೇಂದ್ರ ಮತ್ತು ಸಂದೀಪ್‌ ಅವರು  ಆಡಿದ ಎರಡು ಪಂದ್ಯಗಳಲ್ಲಿ 0–3 ಫ್ರೇಮ್‌ಗಳಿಂದ ಹಾಂಕಾಂಗ್‌ ಮತ್ತು ಇರಾನ್‌ ‘ಎ’ ತಂಡದವರ ವಿರುದ್ಧ ಮುಗ್ಗರಿಸಿದರು. ಮಂಗಳವಾರದಿಂದ ಎಂಟರ ಘಟ್ಟದ ಪಂದ್ಯಗಳು ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.