ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಸೈನಾ,ಸಿಂಧು

ಪಿಟಿಐ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಕ್ವಾರ್ಟರ್‌ ಫೈನಲ್‌ಗೆ ಸೈನಾ,ಸಿಂಧು
ಕ್ವಾರ್ಟರ್‌ ಫೈನಲ್‌ಗೆ ಸೈನಾ,ಸಿಂಧು   

ವುಹಾನ್‌, ಚೀನಾ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಸೈನಾ ನೆಹ್ವಾಲ್‌ ಮತ್ತು ಬೆಳ್ಳಿಯ ಸಾಧನೆ ಮಾಡಿದ್ದ ಪಿ.ವಿ.ಸಿಂಧು ಅವರು ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲೂ ಪ್ರಶಸ್ತಿಯ ಹಾದಿಯಲ್ಲಿ ದಾಪುಗಾಲಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಇವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿರುವ ಕಿದಂಬಿ ಶ್ರೀಕಾಂತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ಗುರುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–18, 21–8ರ ನೇರ ಗೇಮ್‌ಗಳಿಂದ ಚೀನಾದ ಗಾವೊ ಫಾಂಗ್‌ಜಿಯೆ ಅವರನ್ನು ಸೋಲಿಸಿದರು.

ADVERTISEMENT

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದ ಸೈನಾ, ಎರಡೂ ಗೇಮ್‌ಗಳಲ್ಲೂ ಪ್ರಾಬಲ್ಯ ಮೆರೆದು 40ನೇ ನಿಮಿಷದಲ್ಲಿ ಜಯದ ತೋರಣ ಕಟ್ಟಿದರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಸೈನಾ, ಕೊರಿಯಾದ ಲೀ ಜಾಂಗ್‌ ಮಿ ವಿರುದ್ಧ ಆಡಲಿದ್ದಾರೆ.

ಮೂರನೇ ಶ್ರೇಯಾಂಕಿತೆ ಸಿಂಧು 21–12, 21–15ರಲ್ಲಿ ಚೀನಾದ ಚೆನ್‌ ಕ್ಸಿಯಾವೊಕ್ಸಿನ್‌ ಸವಾಲು ಮೀರಿದರು.

ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪೈಪೋಟಿಯಲ್ಲಿ ಶ್ರೀಕಾಂತ್‌, ಹಾಂಗ್‌ಕಾಂಗ್‌ನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಶ್ರೀಕಾಂತ್‌ 2–7ರಿಂದ ಹಿನ್ನಡೆ ಕಂಡಿದ್ದರು. ಈ ವೇಳೆ ಗಾಯಗೊಂಡ ವಿನ್ಸೆಂಟ್‌ ಅಂಗಳ ತೊರೆದರು.

ಶುಕ್ರವಾರ ನಡೆಯುವ ಹಣಾಹಣಿ ಯಲ್ಲಿ ಶ್ರೀಕಾಂತ್‌, ಮಲೇಷ್ಯಾದ ಲೀ ಚಾಂಗ್‌ ವೀ ವಿರುದ್ಧ ಆಡಲಿದ್ದಾರೆ. ಲೀ ಚಾಂಗ್‌ ಅವರು ಒಲಿಂಪಿಕ್ಸ್‌ನಲ್ಲಿ ಮೂರು ಬೆಳ್ಳಿ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಪ್ರಣಯ್‌ 16–21, 21–14, 21–12ರಲ್ಲಿ ಚೀನಾ ತೈಪೆಯ ವಾಂಗ್‌ ಜು ವೀ ವಿರುದ್ಧ ಗೆದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿರುವ ಪ್ರಣಯ್‌ ಮೊದಲ ಗೇಮ್‌ನಲ್ಲಿ ಮುಗ್ಗರಿಸಿದರು. ಇದರಿಂದ ಎದೆಗುಂದದ ಅವರು ನಂತರದ ಎರಡು ಗೇಮ್‌ಗಳಲ್ಲೂ ಮಿಂಚಿನ ಆಟ ಆಡಿ ಗೆದ್ದರು.

ಬಿ.ಸಾಯಿ ಪ್ರಣೀತ್‌ 12–21, 12–21ರಲ್ಲಿ ಚೆನ್‌ ಲಾಂಗ್‌ ವಿರುದ್ಧ ಸೋತರು.

ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಎಂ.ಆರ್‌.ಅರ್ಜುನ್‌ ಮತ್ತು ರಾಮ ಚಂದ್ರನ್‌ ಶ್ಲೋಕ್‌ 11–21, 19–21ರಲ್ಲಿ ಚೀನಾದ ಲಿ ಜುನ್‌ಹುಯಿ ಮತ್ತು ಲಿಯು ಯುಚೆನ್‌ ವಿರುದ್ಧ ಪರಾಭವಗೊಂಡರು.

ಮಹಿಳೆಯರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಮೇಘನಾ ಜಕ್ಕಪುಡಿ ಮತ್ತು ಪೂರ್ವಿಶಾ ಎಸ್‌.ರಾಮ್‌ 9–21, 9–21ರಲ್ಲಿ ಥಾಯ್ಲೆಂಡ್‌ನ ಜಾಂಗ್‌ಕೊಲಫಾನ್‌ ಮತ್ತು ರಾವಿಂಡಾ ಪ್ರಾಜೊಂಗ್‌ ವಿರುದ್ಧ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.