ADVERTISEMENT

ಕ್ವಾರ್ಟರ್ ಫೈನಲ್‌ಗೆ ನ್ಯೂಜಿಲೆಂಡ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 16:55 IST
Last Updated 13 ಮಾರ್ಚ್ 2011, 16:55 IST

ಮುಂಬೈ (ಪಿಟಿಐ): ನವೀಕರಣದ ನಂತರವೂ ರನ್‌ಗಳ ಹೊಳೆ ಹರಿಯುವ ಅಂಗಳವಾಗಿದೆ ವಾಂಖೇಡೆ ಕ್ರೀಡಾಂಗಣ ಎನ್ನುವುದು ಭಾನುವಾರ ಸ್ಪಷ್ಟ. ಮುನ್ನೂರೈವತ್ತಕ್ಕೂ ಹೆಚ್ಚು ರನ್ ಮೊತ್ತ ಪೇರಿಸಿದ ನ್ಯೂಜಿಲೆಂಡ್ ತನ್ನ ಬ್ಯಾಟ್ಸ್‌ಮನ್‌ಗಳ ಅಬ್ಬರದ ನಡುವೆ 97 ರನ್‌ಗಳ ಜಯದಿಂದ ಸಂಭ್ರಮಿಸಿತು. ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನವನ್ನೂ ಖಚಿತಪಡಿಸಿಕೊಂಡಿತು.

ಕೆನಡಾ ತಂಡವು ಕಿವೀಸ್ ಪಡೆಗೆ ಸವಾಲಾಗಿ ನಿಲ್ಲುತ್ತದೆಂದು ಕ್ಷಣ ಕಾಲವೂ ಯೋಚಿಸಲು ಅವಕಾಶ ಸಿಗಲಿಲ್ಲ. ಡೇನಿಲ್ ವೆಟೋರಿ ಒಂದು ಪಂದ್ಯದ ಮಟ್ಟಿಗೆ ವಿರಾಮ ಪಡೆದ ಕಾರಣ ರಾಸ್ ಟೇಲರ್ ನೇತೃತ್ವದಲ್ಲಿ ಹೋರಾಡಿದ ನ್ಯೂಜಿಲೆಂಡ್‌ಗೆ ಜಯದ ಹಾದಿ ಕಷ್ಟದ್ದಾಗಲೇ ಇಲ್ಲ. ‘ಟಾಸ್’ ಗೆದ್ದ ಕೆನಡಾ ತಂಡದ ನಾಯಕ ಆಶಿಶ್ ಬಾಗೈ ಅವರೇ ಟೇಲರ್ ಬಳಗವು ಗೆಲುವಿನ ಕಡೆಗೆ ಸುಲಭವಾಗಿ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟರು.

ಕಿವೀಸ್‌ಗೆ ಮೊದಲು ಬ್ಯಾಟಿಂಗ್ ಮಾಡಲು ಬಾಗೈ ಹೇಳಿದರು. ಅದೇ ಒಳಿತು ಎನ್ನುವಂತೆ ಉತ್ಸಾಹದಿಂದ ಬ್ಯಾಟ್ ಬೀಸಿದ ನ್ಯೂಜಿಲೆಂಡ್‌ನವರು ತಮ್ಮ ಪಾಲಿನ ಐವತ್ತು ಓವರುಗಳಲ್ಲಿ 6 ವಿಕೆಟ್ ಮಾತ್ರ ಕಳೆದುಕೊಂಡು 358 ರನ್‌ಗಳ ದೊಡ್ಡ ಮೊತ್ತವನ್ನು ಪೇರಿಸಿಟ್ಟರು. ಆಗಲೇ ಕೆನಡಾಕ್ಕೆ ಸೋಲು ಖಚಿತವಾಗಿತ್ತು.

ಆದರೂ ಗುರಿಯನ್ನು ಬೆನ್ನಟ್ಟುವುದು ಸುಲಭವಾಗಬಹುದು, ಅಚ್ಚರಿಯ ಫಲಿತಾಂಶ ಪಡೆಯಲು ಕೂಡ ಸಾಧ್ಯವೆಂದುಕೊಂಡ ಬಾಗೈ ಲೆಕ್ಕಾಚಾರವೆಲ್ಲಾ ಹುಸಿ. ಕಷ್ಟಪಟ್ಟು ರನ್‌ಗಳನ್ನು ಕಲೆಹಾಕುತ್ತಾ ಸಾಗಿದ ಕೆನಡಾ 9 ವಿಕೆಟ್‌ಗಳ ನಷ್ಟಕ್ಕೆ ಕಲೆಹಾಕಿದ್ದು 261 ರನ್ ಮಾತ್ರ. ಕೇಲ್ ಮಿಲ್ಸ್ ನೀಡಿದ ಪೆಟ್ಟಿನಿಂದ ಕೆನಡಾ ಚೇತರಿಸಿಕೊಳ್ಳುವುದೇ ಕಷ್ಟವಾಯಿತು.

ಕೇವಲ 2.4 ಓವರು ಬೌಲಿಂಗ್ ಮಾಡಿದರೂ ಮಿಲ್ಸ್ ಅವರು ತಮ್ಮ ಪ್ರಾಭಾವಿ ವೇಗದ ದಾಳಿಯಲ್ಲಿ ರವಿಂದು ಗುಣಶೇಕರ ಹಾಗೂ ಜುಬಿನ್ ಸುರ್ಕರಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆಗ ಗಳಿಸಿದ್ದು ಕ್ರಮವಾಗಿ 2 ಮತ್ತು 1 ರನ್. ಇಂಥದೊಂದು ಪರಿಣಾಮ ಮಾಡಿದ ಮಿಲ್ಸ್ ಗಾಯದ ಕಾರಣ ತಮ್ಮ ಮೂರನೇ ಓವರ್‌ನ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಡ್ರೆಸಿಂಗ್ ಕೋಣೆಗೆ ಹಿಂದಿರುಗಿದರು.

ಆನಂತರವೂ ನ್ಯೂಜಿಲೆಂಡ್ ಬೌಲಿಂಗ್ ದಾಳಿ ದುರ್ಬಲಗೊಳ್ಳಲಿಲ್ಲ. ವೇಗಿಗಳು ಎದುರಾಳಿ ಪಡೆಯ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿದರು. ಸ್ಪಿನ್ ಮೋಡಿಗಾರರು ರನ್ ಗತಿಗೆ ಕಡಿವಾಣ ಹಾಕುವ ಯತ್ನದಲ್ಲಿ ತೊಡಗಿದರು. ಇಂಥ ಒತ್ತಡದ ಪರಿಸ್ಥಿತಿಯಲ್ಲಿಯೂ ಕೆನಡಾ ಪರ ಸಹನೆಯ ಆಟವಾಡಿದ ನಾಯಕ ಆಶಿಶ್ ಬಾಗೈ (84; 145 ನಿ., 87 ಎ., 10 ಬೌಂಡರಿ) ಹಾಗೂ ಔಟಾಗದೆ ಉಳಿದ ಜಿಮ್ಮಿ ಹಂಸ್ರಾ (70; 140 ನಿ., 105 ಎ., 4 ಬೌಂಡರಿ, 1 ಸಿಕ್ಸರ್) ಅವರು ತಮ್ಮ ತಂಡದ ಹೋರಾಟಕ್ಕೆ ಬಲ ನೀಡಲು ಬೆವರು ಸುರಿಸಿದರು. ಆದರೆ ಅವರ ಶ್ರಮಕ್ಕೆ ತಕ್ಕ ಫಲ ಮಾತ್ರ ಸಿಗಲಿಲ್ಲ.

ನ್ಯೂಜಿಲೆಂಡ್ ಮಾತ್ರ ಉತ್ತಮ ಯೋಜನೆಯೊಂದಿಗೆ ಆಡಿತು. ಬೌಲಿಂಗ್‌ನಲ್ಲಿ ಮಾತ್ರವಲ್ಲ ಬ್ಯಾಟಿಂಗ್‌ನಲ್ಲಿಯೂ ಅದು ಯಾವುದೇ ಹಂತದಲ್ಲಿ ಚಡಪಡಿಸಲಿಲ್ಲ. ಕೆನಡಾ ಮುಂದೆ ದೊಡ್ಡ ಮೊತ್ತವನ್ನು ಪೇರಿಸಿಡುವುದು ಸುಲಭ ಎನಿಸಿತು. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಬೇಗ ವಿಕೆಟ್ ಒಪ್ಪಿಸಿದರೂ, ವಿಜಯಿ ತಂಡದ ಇನಿಂಗ್ಸ್ ತಡಬಡಾಯಿಸಲಿಲ್ಲ. ಮುನ್ನೂರರ ಗಡಿಯನ್ನು ದಾಟಿ ಬೆಳೆದು ನಿಂತಿತು ಕಿವೀಸ್.

ಬ್ರೆಂಡನ್ ಮೆಕ್ಲಮ್ (101; 163 ನಿ., 109 ಎ., 12 ಬೌಂಡರಿ, 2 ಸಿಕ್ಸರ್) ಅವರಂತೂ ಕೆನಡಾ ಬೌಲರ್‌ಗಳನ್ನು ಕಾಡಿದರು. ವೇಗ-ಸ್ಪಿನ್ ಎರಡೂ ಲೆಕ್ಕಕ್ಕೆ ಇಲ್ಲವೆನ್ನುವಂತೆ ಬ್ಯಾಟ್ ಬೀಸಿದ ಮೆಕ್ಲಮ್ ಅವರು ತಮ್ಮ ತಂಡದ ವಿಜಯಕ್ಕೆ ಮಹತ್ವದ ಕೊಡುಗೆ ನೀಡಿದರು. ಬ್ಯಾಟಿಂಗ್‌ನಲ್ಲಿ ಬಲವಾಗಿದ್ದಲ್ಲದೇ ವಿಕೆಟ್ ಕೀಪರ್ ಆಗಿಯೂ ತಮ್ಮ ಹೊಣೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು. ಮೂರು ಆಕರ್ಷಕ ಕ್ಯಾಚ್ ಪಡೆದ ಅವರು ಒಂದು ರನ್‌ಔಟ್‌ಗೂ ಕಾರಣರಾದರು. ಇಷ್ಟೊಂದು ಉತ್ತಮ ಆಟದ ಪ್ರದರ್ಶನ ನೀಡಿದ ಅವರಿಗೆ ‘ಪಂದ್ಯ ಶ್ರೇಷ್ಠ’ ಗೌರವ ಸಂದಿತು.

ವೆಟೋರಿ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತ ರಾಸ್ ಟೇಲರ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ತಂಡಕ್ಕೆ 74 (60 ನಿ., 44 ಎ., 6 ಬೌಂಡರಿ, 5 ಸಿಕ್ಸರ್) ರನ್‌ಗಳ ಮಹತ್ವದ ಕೊಡುಗೆ ನೀಡಿದರು. ಕಿವೀಸ್ ತಂಡದವರು ಜೊತೆಯಾಟಗಳನ್ನು ಬೆಳೆಸುತ್ತಾ ಸಾಗಿದ ರೀತಿಯಂತೂ ವಿಶಿಷ್ಟ. ಕ್ರೀಸ್‌ಗೆ ಬಂದ ಎಂಟು ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ ಎರಡಂಕಿಯ ಮೊತ್ತ ಮುಟ್ಟುವ ಮೊದಲು ನಿರ್ಗಮಿಸಲಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.