ADVERTISEMENT

ಕ್ವಾರ್ಟರ್ ಫೈನಲ್‌ಗೆ ಸೈನಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ನವದೆಹಲಿ (ಪಿಟಿಐ): ಆರಂಭದಲ್ಲಿ ಭಾರಿ ಸವಾಲು ಎದುರಾದರೂ ಮೆಟ್ಟಿನಿಂತು ಚುರುಕಿನ ಪ್ರದರ್ಶನ ನೀಡಿದ ಭಾರತದ ಸೈನಾ ನೆಹ್ವಾಲ್ ಚೀನಾದ ಚಾಂಗ್ ಜೌ ನಲ್ಲಿ ನಡೆಯುತ್ತಿರುವ ಚೀನಾ         ಮಾಸ್ಟರ್ಸ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸೈನಾ 21-11, 18-21, 27-25ರಲ್ಲಿ ಜಪಾನ್‌ನ ಅಯಾನೆ ಕುರಿಹರ ವಿರುದ್ಧ ಗೆಲುವು ಪಡೆದರು. ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾಗೆ ಗೆಲುವು ಸುಲಭವಾಗಿ ದಕ್ಕಲಿಲ್ಲ. ಮೊದಲ ಗೇಮ್‌ನಲ್ಲಿ ಅಲ್ಪ ಪ್ರತಿರೋಧ ಎದುರಾಯಿತು.

ಆದರೆ ಎರಡನೇ ಗೇಮ್‌ನಲ್ಲಿ ಮರು ಹೋರಾಟ ನಡೆಸಿದ ಜಪಾನ್‌ಆಟಗಾರ್ತಿ ಎದುರು ಸೈನಾ ಸೋಲು ಕಂಡರು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಪ್ರಯಾಸದ ಗೆಲುವು ಸಾಧಿಸಿದರು.
ಶುಕ್ರವಾರ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಸೈನಾ ಆತಿಥೇಯ ಚೀನಾದ ಯಿಹಾನ್‌ವಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಎಂಟರ ಘಟ್ಟಕ್ಕೆ ವಿಜು-ಜ್ವಾಲಾ: ಉತ್ತಮ ಪ್ರದರ್ಶನ ನೀಡಿದ ವಿ. ದಿಜು ಹಾಗೂ ಜ್ವಾಲಾ ಗುಟ್ಟಾ ಜೋಡಿ ಇದೇ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.

ಈ ಜೋಡಿ ಎರಡನೇ ಸುತ್ತಿನ ಪಂದ್ಯದಲ್ಲಿ 21-19, 21-17ರಲ್ಲಿ ಕೊರಿಯಾದ ಯಂಗ್ ದೇ ಲೀ ಹಾಗೂ ಜುಂಗ್ ಇವೊನ್ ಹಾ     ಜೋಡಿಯನ್ನು 34 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.