ADVERTISEMENT

ಗಾಂಧಿ ನಾಡಲ್ಲಿ ಬಿನ್ನಿ ಪಡೆಗೆ ಅಗ್ನಿಪರೀಕ್ಷೆ

ರಣಜಿ ಟ್ರೋಫಿ: ನಾಳೆಯಿಂದ ಕರ್ನಾಟಕ-ಸೌರಾಷ್ಟ್ರ ನಡುವಣ ಕ್ವಾರ್ಟರ್ ಫೈನಲ್ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2013, 19:59 IST
Last Updated 4 ಜನವರಿ 2013, 19:59 IST
ಕರ್ನಾಟಕ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸುವ ಜವಾಬ್ದಾರಿ ಸ್ಟುವರ್ಟ್ ಬಿನ್ನಿ ಮೇಲಿದೆ 	-ಸಂಗ್ರಹ ಚಿತ್ರ
ಕರ್ನಾಟಕ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸುವ ಜವಾಬ್ದಾರಿ ಸ್ಟುವರ್ಟ್ ಬಿನ್ನಿ ಮೇಲಿದೆ -ಸಂಗ್ರಹ ಚಿತ್ರ   

ರಾಜ್‌ಕೋಟ್: ಸಂಜೆಯಾದರೆ ಸಾಕು ಇಲ್ಲಿ ಕೊರೆಯುವ ಚಳಿ. ಈ ಚಳಿಯಲ್ಲಿಯೇ ಸೌರಾಷ್ಟ್ರದ ಆಟಗಾರರನ್ನು ಮೆತ್ತಗೆ ಮಾಡಬೇಕು ಎನ್ನುವ ಲೆಕ್ಕಾಚಾರ ಕರ್ನಾಟಕ ತಂಡದ್ದು. ಲೀಗ್ ಹಂತದ ಅಡೆತಡೆಗಳನ್ನೆಲ್ಲಾ ದಾಟಿ ಬಂದಿರುವ ಸ್ಟುವರ್ಟ್ ಬಿನ್ನಿ ನೇತೃತ್ವದ ಕರ್ನಾಟಕ ಮಹತ್ವದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅಗ್ನಿಪರೀಕ್ಷೆಗೆ ಸಜ್ಜುಗೊಂಡಿದೆ.

ರಣಜಿ ಟ್ರೋಫಿ ಎತ್ತಿ ಹಿಡಿಯಬೇಕು ಎನ್ನುವ ಕನಸು 13 ವರ್ಷಗಳಿಂದ ಕೈಗೂಡಿಲ್ಲ. ಇದು ಈ ಋತುವಿನಲ್ಲಾದರೂ ಈಡೇರಬೇಕು ಎನ್ನುವ ಗುರಿ ಕರ್ನಾಟಕದ್ದು. ಈ ಕನಸು ನನಸಾಗಬೇಕಾದರೆ ಎಂಟರ ಘಟ್ಟದಲ್ಲಿ ಮೊದಲು ಯಶ ಕಾಣಬೇಕು.

ಇದೇ ಆಶಯ ಹೊತ್ತು ಶುಕ್ರವಾರ ತಂಡ ರಾಜ್‌ಕೋಟ್‌ಗೆ ಆಗಮಿಸಿದೆ. ಪ್ರಯಾಣದ ಸುಸ್ತಿನಲ್ಲಿದ್ದ ಆಟಗಾರರು ಅಭ್ಯಾಸದ ಗೊಡವೆಗೆ ಹೋಗದೆ ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು.

ADVERTISEMENT

ರಾಮಕೃಷ್ಣ ಆಶ್ರಮ, ಮೋಹನ್‌ದಾಸ್ ಗಾಂಧಿ ಹೈಸ್ಕೂಲು, ಸ್ವಾಮಿ ನಾರಾಯಣ ಗುರುಕುಲ, `ಗಾಂಧಿ ಸ್ಮೃತಿ' ಹಾಗೂ ಮುಕ್ತಿಧಾಮ ಹೀಗೆ ಅನೇಕ ಐತಿಹಾಸಿಕ ಸ್ಥಳಗಳ ಈ ಗಾಂಧಿ ನಾಡಿನಲ್ಲಿ ಭಾನುವಾರದಿಂದ ರಣಜಿ ಕ್ರಿಕೆಟ್‌ನ ಸಂಭ್ರಮ.

ರಣಜಿ ಮುಕ್ತಾಯದ ಬೆನ್ನಲ್ಲೇ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದ ಸಡಗರ. ಹೀಗಾಗಿ ಕ್ರಿಕೆಟ್ ಪ್ರಿಯರಿಗೆ ಈಗ ಭರ್ತಿ ಸುಗ್ಗಿಕಾಲ.

ಕ್ರಿಕೆಟ್ ಸುಗ್ಗಿಯ ಹಿಗ್ಗಿನಲ್ಲಿಯೇ ಮೂರು ವರ್ಷಗಳ ಹಿಂದೆ ಅನುಭವಿಸಿದ್ದ ನಿರಾಸೆಗೆ ತಿರುಗೇಟು ನೀಡಬೇಕು ಎನ್ನುವ `ಸೇಡು' ಕರ್ನಾಟಕದ ಆಟಗಾರರದ್ದು. 2008-09ರ ಋತುವಿನಲ್ಲಿ  ರಾಜ್‌ಕೋಟ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಸೌರಾಷ್ಟ್ರ ತಂಡ ಕರ್ನಾಟಕದ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಆ ಸೋಲಿಗೆ `ಮುಯ್ಯಿ' ತೀರಿಸುವ ಅವಕಾಶ ಈಗ ಬಿನ್ನಿ ಬಳಗಕ್ಕೆ ಲಭಿಸಿದೆ.

ಹಿಂದಿನ ಗೆಲುವೇ ಸ್ಫೂರ್ತಿ: ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಸಾಧಿಸಿದ ವೀರೋಚಿತ ಗೆಲುವು ಕರ್ನಾಟಕದ ಆಟಗಾರರಿಗೆ ಈಗ ಸ್ಫೂರ್ತಿಯ ಸೆಲೆಯಾಗಿದೆ. ಕ್ವಾರ್ಟರ್ ಫೈನಲ್ ಆಸೆಯನ್ನು ಕೈ ಬಿಟ್ಟು ಕೂತಿದ್ದ ಬಿನ್ನಿ ಬಳಗ ನಂತರ `ಫಿನಿಕ್ಸ್'ನಂತೆ ಚಿಗುರಿಕೊಂಡಿತು. ಆ ಅಮೋಘ ಜಯ ಆಟಗಾರರ ಉತ್ಸಾಹವನ್ನು ಇಮ್ಮಡಿಸಿದೆ.

ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ದಿನದ ಮಧ್ಯಾಹ್ನದ ಚಹಾ ವಿರಾಮದ ತನಕ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಅಧಿಕವಾಗಿತ್ತು. ಆದರೆ, ಅಭಿಮನ್ಯು ಮಿಥುನ್ ಹಾಗೂ ಎಚ್.ಎಸ್. ಶರತ್ ಮಾಡಿದ ಮೋಡಿ ಮತ್ತು ಬ್ಯಾಟ್ಸ್‌ಮನ್‌ಗಳ ಆರ್ಭಟ ಪಂದ್ಯದ ಗತಿಯನ್ನೇ ಬದಲಿಸಿತು. ದೆಹಲಿ ಹಾಗೂ ವಿದರ್ಭ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡರೆ, ಒಡಿಶಾ  ಕೈಗೆ ಬಂದ ತುತ್ತನ್ನು ಬಾಯಿಗಿ ತಗೆದುಕೊಳ್ಳುವಲ್ಲಿ ವಿಫಲವಾಯಿತು. ಈ ಎಲ್ಲಾ `ಅದೃಷ್ಟ'ದ ಪರಿಣಾಮ ಕರ್ನಾಟಕ ಕ್ವಾರ್ಟರ್ ಫೈನಲ್ ಅವಕಾಶ ಪಡೆದುಕೊಂಡಿತು.

ಅಪ್ಪನ ಸಾಧನೆ ಮೀರುವತ್ತ ಸ್ಟುವರ್ಟ್: ಕರ್ನಾಟಕ ತಂಡದ ಮಾಜಿ ನಾಯಕ ರೋಜರ್ ಬಿನ್ನಿ ಅವರ ಸಾಧನೆಯನ್ನು ಮಗ ಸ್ಟುವರ್ಟ್ ಬಿನ್ನಿ ಮೀರಿ ನಿಲ್ಲುವ ಹಾದಿಯಲ್ಲಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯವನ್ನಾಡುವ ಮೂಲಕ ಈ ಸಾಧನೆ ಸಾಧ್ಯವಾಗಲಿದೆ.

ಕರ್ನಾಟಕದ ರಣಜಿ ಇತಿಹಾಸದಲ್ಲಿ ಅಪ್ಪ ಹಾಗೂ ಮಗ ತಂಡವನ್ನು ಮುನ್ನಡೆಸಿದ ಮೊದಲ ಜೋಡಿ ಇವರದ್ದಾಗಿದೆ. 1983-84ರಲ್ಲಿ ರೋಜರ್ ಕರ್ನಾಟಕದ ಸಾರಥ್ಯ ವಹಿಸಿಕೊಂಡಿದ್ದರು. ಆ ಋತುವಿನಲ್ಲಿ ತಂಡ ಲೀಗ್ ಹಂತದಲ್ಲಿಯೇ ಸೋಲು ಕಂಡಿತ್ತು. ಆದರೆ, ಇದೇ ಮೊದಲ ಬಾರಿಗೆ ನಾಯಕತ್ವ ವಹಿಸಿಕೊಂಡಿರುವ ಸ್ಟುವರ್ಟ್ ತಂಡವನ್ನು ಕ್ವಾರ್ಟರ್ ಫೈನಲ್‌ವರೆಗೆ ಕೊಂಡೊಯ್ದ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ಈ ಮೂಲಕ ಅಪ್ಪ ರೋಜರ್ ಅವರಿಗಿಂತ ಮಗ ಒಂದು ಹೆಜ್ಜೆ ಮುಂದಿಡಲಿದ್ದಾರೆ.

ವಿನಯ್ ಅನುಪಸ್ಥಿತಿಯಲ್ಲಿ ತಂಡದ ಉಸ್ತುವಾರಿ ವಹಿಸಿಕೊಂಡಿರುವ ಅವರು, ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ರಣಜಿಯಲ್ಲಿ ಅವರ ಹತ್ತು ವರ್ಷದ ಅನುಭವ ರಾಜ್‌ಕೋಟ್‌ನಲ್ಲಿನ ಈ ಮಹತ್ವದ ಪಂದ್ಯಕ್ಕೆ ಅನುಕೂಲವಾಗಲಿದೆ.

ಹಂಗಾಮಿ ಹಂಗಾಮ: ಕ್ವಾರ್ಟರ್ ಫೈನಲ್ ಪೈಪೋಟಿಯಲ್ಲಿ ಕರ್ನಾಟಕ ತಂಡವನ್ನು ಎರಡೂ ವರ್ಷವು ಮುನ್ನಡೆಸುತ್ತಿರುವುದು ಹಂಗಾಮಿ ನಾಯಕರುಗಳೇ. ಕಳೆದ ಋತುವಿನಲ್ಲಿ ವಿನಯ್ ಅನುಪಸ್ಥಿತಿಯಲ್ಲಿ ಗಣೇಶ್ ಸತೀಶ್ ತಂಡವನ್ನು ಮುನ್ನಡೆಸಿದ್ದರು.

ಈ ಋತುವಿನಲ್ಲಿ ಬಿನ್ನಿ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಗಾಯದಿಂದ ಬಳಲುತ್ತಿರುವ `ದಾವಣಗೆರೆ ಎಕ್ಸ್‌ಪ್ರೆಸ್' ಈ ಪಂದ್ಯಕ್ಕೆ ಅಲಭ್ಯ. ಈ ಋತುವಿನಲ್ಲಿ ವಿನಯ್ ಐದು ಪಂದ್ಯ ಮಾತ್ರ ಆಡಿದ್ದಾರೆ. 

ಮೂರು ವರ್ಷದ ಬಳಿಕ: ಸೌರಾಷ್ಟ್ರ ಮೂರು ವರ್ಷಗಳಿಂದ ಲೀಗ್ ಹಂತದಲ್ಲಿಯೇ ಮುಗ್ಗರಿಸಿದೆ. 2008-09 ರ ಋತುವಿನಲ್ಲಿ ಸೆಮಿಫೈನಲ್‌ವರೆಗೆ ಮುನ್ನಡೆದಿದ್ದು ಈ ತಂಡದ ಇತ್ತೀಚಿನ ಉತ್ತಮ ಸಾಧನೆ. ಮೂರು ವರ್ಷಗಳ ಹಿಂದೆ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಡ್ರಾ ಸಾಧಿಸಿತ್ತಾದರೂ, ಇನಿಂಗ್ಸ್ ಆಧಾರದ ಮೇಲೆ ಮುಂಬೈ ಸೆಮಿಫೈನಲ್ ಪ್ರವೇಶಿಸಿತ್ತು.

ಆದರೆ, ಮೂರು ಋತುವಿನ ಬಳಿಕ ಸಿಕ್ಕಿರುವ ಅವಕಾಶದ ಲಾಭ ಪಡೆಯಬೇಕು ಎನ್ನುವ ಲೆಕ್ಕಾಚಾರ ಆತಿಥೇಯ ತಂಡದ್ದು. ಅದರಲ್ಲೂ ತವರು ನೆಲದ ಅಂಗಣ ಎನ್ನುವುದು ಸೌರಾಷ್ಟ್ರಕ್ಕೆ ಮತ್ತಷ್ಟು ಬಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.