ADVERTISEMENT

ಗಿನ್ನಿಸ್ ದಾಖಲೆಯತ್ತ ಗೋಪಾಲ್ ಚಿತ್ತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಉಡುಪಿ: ಕಳೆದ ಬಾರಿ ಕೈಕಾಲುಗಳನ್ನು ಬೆನ್ನಿಗೆ ಬರುವಂತೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ ಈಜುವ ಮೂಲಕ ಲಿಮ್ಕೋ ದಾಖಲೆ ಪುಟ ಸೇರಿದ್ದ ಉಡುಪಿ ಕೋಡಿ ಕನ್ಯಾನದ ಈಜುಪಟು ಗೋಪಾಲ ಖಾರ್ವಿ ಇದೀಗ ಗಿನ್ನಿಸ್ ದಾಖಲೆಯತ್ತ ಗುರಿಯಿಟ್ಟಿದ್ದಾರೆ. ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ ಈಜಿ ಸಾಧನೆ ತೋರುವ ತವಕದಲ್ಲಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದೇ 8ರಂದು ಬೆಳಿಗ್ಗೆ 6.30ಕ್ಕೆ ಸೇಂಟ್ ಮೇರಿಸ್ ದ್ವೀಪದಿಂದ ಈಜು ಆರಂಭಿಸಿ ಮಲ್ಪೆ ಕಡಲನ್ನು ತಲುಪಿ ಗಿನ್ನಿಸ್ ದಾಖಲೆ ಸ್ಥಾಪಿಸುವ ಉದ್ದೇಶ ಹೊಂದಿರುವೆ ಎಂದರು. 

ಗಿನ್ನಿಸ್ ವಿಶ್ವದಾಖಲೆಯ ಎಸ್.ಸಿದ್ದರಾಜು, ಈ ಸಾಹಸಕ್ಕೆ ಚಾಲನೆ ನೀಡುವರು. ಜಿಲ್ಲಾಧಿಕಾರಿ ಎಂ.ಟಿ. ರೇಜು ಉಪಸ್ಥಿತಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ವೈ.ಎಸ್.ರವಿಕುಮಾರ್ ಮತ್ತು ಡಿವೈಎಸ್‌ಪಿ ಜಯಂತ್ ಶೆಟ್ಟಿ ದಾಖಲೆ ಸಾಕ್ಷೀಕರಿಸಲಿದ್ದಾರೆ ಎಂದರು.

ಕೋಡಿ ಕನ್ಯಾನದ ನಾಗೇಶ್ ಖಾರ್ವಿ-ರಾಧಾ ಬಾಯಿ ದಂಪತಿ ಪುತ್ರನಾದ ಗೋಪಾಲ್ ಖಾರ್ವಿ, 2003ರ ನವೆಂಬರ್ 23ರಂದು ಅರಬ್ಬಿ ಸಮುದ್ರದಲ್ಲಿ 6 ಗಂಟೆಗಳಲ್ಲಿ ನಿರಂತರ 40 ಕಿ.ಮೀ. ದೂರ ಈಜಿದ್ದರು. 2004ರಲ್ಲಿ ಗಂಗೊಳ್ಳಿ- ಮಲ್ಪೆ ಬೀಚ್ ಮಧ್ಯದ 80 ಕಿ.ಮೀ. ದೂರವನ್ನು 11.30 ಗಂಟೆ ಕಾಲ ನಿರಂತರವಾಗಿ ಈಜಿ ದಾಖಲೆ ಮಾಡಿದ್ದರು. 2009ರಲ್ಲಿ ಸೇಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಕಡಲವರೆಗಿನ 15 ಕಿ.ಮೀ. ದೂರವನ್ನು 3 ಗಂಟೆ 26ನಿ.40 ಸೆ.ಗಳಲ್ಲಿ ಈಜಿ ಲಿಮ್ಕೋ ಬುಕ್ ಆಫ್    ರೆಕಾರ್ಡ್ಸ್‌ಗೆ (2011) ಸೇರ್ಪಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.