ADVERTISEMENT

ಗುಹಾ ಆರೋಪಕ್ಕೆ ಗಾವಸ್ಕರ್ ತಿರುಗೇಟು

ಪಿಟಿಐ
Published 3 ಜೂನ್ 2017, 19:32 IST
Last Updated 3 ಜೂನ್ 2017, 19:32 IST
ಸುನಿಲ್ ಗಾವಸ್ಕರ್
ಸುನಿಲ್ ಗಾವಸ್ಕರ್   

ನವದೆಹಲಿ: ಇತಿಹಾಸಕಾರ ರಾಮಚಂದ್ರ ಗುಹಾ ಅವರು ತಮ್ಮ ಬಗ್ಗೆ ಮಾಡಿರುವ ಆರೋಪಕ್ಕೆ ಕ್ರಿಕೆಟ್ ವೀಕ್ಷಕ ವಿವರಣೆಕಾರ ಸುನಿಲ್ ಗಾವಸ್ಕರ್ ತಿರುಗೇಟು ನೀಡಿದ್ದಾರೆ.

‘ಹಿತಾಸಕ್ತಿ ಸಂಘರ್ಷದಲ್ಲಿ ಭಾಗಿಯಾಗಿದ್ದೇನೆಂದು ಗುಹಾ ಆರೋಪ ಮಾಡಿದ್ದಾರೆ. ಆಟಗಾರರ ಆಯ್ಕೆಯಲ್ಲಿ ನಾನು ಪ್ರಭಾವ ಬೀರಿರುವ ಒಂದೇ ಒಂದು ಉದಾಹರಣೆಯನ್ನು ಅವರು ತೋರಿಸಿಕೊಡಲಿ’ ಎಂದು ಗಾವಸ್ಕರ್ ಸವಾಲು ಹಾಕಿದ್ದಾರೆ.

‘ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಿರುವುದು ಬೇಸರ ತರಿಸಿದೆ. ಅವರು ಪತ್ರದಲ್ಲಿ ಬರೆದಿರುವ ವಿಷಯಗಳನ್ನು ನೋಡಿ ಹಿತಾಸಕ್ತಿ ಸಂಘರ್ಷದ ಕುರಿತು ಗೊಂದಲ ಮೂಡಿದೆ. ಆಟಗಾರನಾಗಿ, ಕೆಲಕಾಲ ಆಡಳಿತಗಾರನಾಗಿ, ವೀಕ್ಷಕ ವಿವರಣೆ ಗಾರನಾಗಿ ಭಾರತದ ಕ್ರಿಕೆಟ್‌ಗೆ ಸೇವೆಸಲ್ಲಿಸುತ್ತಿದ್ದೇನೆ’ ಎಂದು ಗಾವಸ್ಕರ್ ಎನ್‌ಡಿಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ADVERTISEMENT

ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಇತಿಹಾಸಕಾರ ಗುಹಾ ಅವರು, ಶುಕ್ರವಾರ ಮುಖ್ಯಸ್ಥ ವಿನೋದ್ ರಾಯ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಗಾವಸ್ಕರ್ ಸೇರಿದಂತೆ ಮಾಜಿ ಮತ್ತು ಹಾಲಿ ಕ್ರಿಕೆ ಟಿಗರು ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಮಾಡಿದ್ದನ್ನು ಆರೋ ಪಿಸಿದ್ದರು.

‘ಗಾವಸ್ಕರ್ ಅವರು ಪ್ರೊಫೆಷನಲ್ ಮ್ಯಾನೆಜ್‌ಮೆಂಟ್ ಗ್ರೂಪ್‌ ಮುಖ್ಯಸ್ಥರಾಗಿದ್ದಾರೆ. ಆ ಕಂಪೆನಿಯು ಭಾರತ ತಂಡದ ಆಟಗಾರರೊಂದಿಗೆ ಒಪ್ಪಂದ ಹೊಂದಿದೆ. ಗಾವಸ್ಕರ್ ಅವರು ಬಿಸಿಸಿಐ ಡಾಟ್ ಟಿವಿಗೆ ವೀಕ್ಷಕ ವಿವರಣೆಕಾರರೂ ಆಗಿದ್ದಾರೆ. ಅದು ನಿಯಮಬಾಹಿರ’ ಎಂದು ಗುಹಾ ಆರೋಪಿಸಿದ್ದರು. ಅಲ್ಲದೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಮಹೇಂದ್ರ ಸಿಂಗ್ ದೋನಿ ಅವರಿಗೆ ‘ಎ’ ದರ್ಜೆ ನೀಡಿರುವುದನ್ನೂ ಗುಹಾ ಟೀಕಿಸಿದ್ದರು.

‘ದೋನಿ ಅವರೊಬ್ಬ ಅಮೋಘ ಆಟಗಾರ. ಅದಕ್ಕಾಗಿಯೇ ‘ಎ’ ದರ್ಜೆ ಪಡೆದಿದ್ದಾರೆ. ಅವರು ಭಾರತ ಕ್ರಿಕೆಟ್‌ಗೆ ನೀಡಿರುವ ಕಾಣಿಕೆಯನ್ನು ಯಾರಾದರೂ ಪ್ರಶ್ನಿಸಲು ಸಾಧ್ಯವೆ?’ ಎಂದು ಗಾವಸ್ಕರ್ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.