ADVERTISEMENT

ಗೆದ್ದರೂ ಕೈಗೂಡದ ಸೆಮಿ ಕನಸು

ಜೂನಿಯರ್ ಮಹಿಳಾ ಹಾಕಿ ಟೂರ್ನಿ: ಕರ್ನಾಟಕ ತಂಡಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಮೈಸೂರು: ಆತಿಥೇಯ ಕರ್ನಾಟಕದ  ವನಿತೆಯರು ಗುರುವಾರ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಎ‘ ಡಿವಿಷನ್ ಹಾಕಿ ಟೂರ್ನಿಯಲ್ಲಿ ದೆಹಲಿ ತಂಡವನ್ನು ಸೋಲಿಸಿದರೂ, ಸೆಮಿಫೈನಲ್ ಕನಸು ಕೈಗೂಡಲಿಲ್ಲ.

ಹಾಕಿ ಕರ್ನಾಟಕದ ಆಶ್ರಯದಲ್ಲಿ ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್‌ನಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ‘ಎ’ ಡಿವಿಷನ್ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆತಿಥೇಯ ತಂಡವು  6–2ರಿಂದ ದೆಹಲಿ ವನಿತೆಯರನ್ನು ಮಣಿಸಿತು.

ಆದರೆ, ಲೀಗ್ ಹಂತದಲ್ಲಿ ತಮ್ಮ ಪಾಲಿನ ಮೂರು ಪಂದ್ಯಗಳನ್ನೂ ಗೆದ್ದ, ಕಳೆದ ಬಾರಿಯ ರನ್ನರ್ಸ್ ಅಪ್ ಮಧ್ಯಪ್ರದೇಶ ಮತ್ತು ಒಡಿಶಾ ತಂಡಗಳು ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿವೆ.

ಪಂದ್ಯದ ಆರಂಭವಾದ ಕೆಲವೇ ನಿಮಿಷಗಳಲ್ಲಿ  ಒಂದರ ಹಿಂದೆ ಒಂದರಂತೆ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದ ದೆಹಲಿ ತಂಡವು ಅವುಗಳನ್ನು ಗೋಲಿನಲ್ಲಿ ಪರಿವರ್ತಿಸಲಿಲ್ಲ. ಕರ್ನಾಟಕದ ಗೋಲ್ ಕೀಪರ್ ನಿಶಾ ಮತ್ತು ರಕ್ಷಣಾ ಆಟಗಾರ್ತಿಯರು ಗೋಲು ತಡೆದರು.

19ನೇ ನಿಮಿಷದಲ್ಲಿ ಕರ್ನಾಟಕಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚುರುಕಿನ ಮುನ್ಪಡೆ ಆಟಗಾರ್ತಿ ಸಿ.ಜಿ. ಸುಷ್ಮಾ  ಆಕರ್ಷಕ ಗೋಲು ಗಳಿಸಿ, ತಂಡದ ಖಾತೆ ತೆರೆದರು. ನಂತರ ದೆಹಲಿಯ ಮನೀಶಾ ವರ್ಮಾ (23ನಿ) ತಿರುಗೇಟು ನೀಡಿದರು. ಇಬ್ಬರು ರಕ್ಷಣಾ ಆಟಗಾರ್ತಿಯರು ಮತ್ತು ಗೋಲ್‌ ಕೀಪರ್ ನಡುವಿನಿಂದ ಚೆಂಡನ್ನು ಗೋಲುಪೆಟ್ಟಿಗೆಗೆ ಅಟ್ಟಿದರು. ಆದರೆ, ಈ ಸಮಸ್ಥಿತಿಯು ಎರಡೇ ನಿಮಿಷದಲ್ಲಿ ಬದಲಾಯಿತು. ಕರ್ನಾಟಕದ ಎಸ್‌.ಪಿ. ಭವ್ಯಾ (25ನಿ) ಆಕರ್ಷಕ ಗೋಲು ಗಳಿಸಿದರು. ಅದರ ಮರು ನಿಮಿಷದಲ್ಲಿಯೇ ಬಿ.ಎಂ. ಕೋಮಲಾ (27ನಿ) ಪೆನಾಲ್ಟಿ ಕಾರ್ನರ್‌ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. ನಂತರ ನಿಹಾ (32ನಿ) ಗೋಲು ಹೊಡೆದು ಮೊದಲಾರ್ಧದಲ್ಲಿ ತಂಡವು 4–1ರ ಮುನ್ನಡೆ ಸಾಧಿಸಲು ಕಾರಣರಾದರು.

ನಂತರದ ಅವಧಿಯಲ್ಲಿ ದೆಹಲಿ ತಂಡವು 5–6 ಬಾರಿ ‘ಡಿ’ ಪ್ರದೇಶಕ್ಕೆ ನುಗ್ಗಿದರೂ ಗೋಲು ಗಳಿಸಿದ್ದು ಒಂದು ಬಾರಿ ಮಾತ್ರ. ಮನೀಶಾ ವರ್ಮಾ (38ನಿ) ತಮ್ಮ ತಂಡಕ್ಕೆ 2ನೇ ಗೋಲಿನ ಕಾಣಿಕೆ ನೀಡಿದರು.

ನಂತರ ಕರ್ನಾಟಕ ತಂಡದ ನಾಯಕಿ ಎಚ್‌.ಪಿ. ಸಂಧ್ಯಾ (46ನಿ) ಒಂದು ಗೋಲು ಹೊಡೆದರೆ, 56ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸಿ.ಎಂ. ಭಾಗ್ಯಶ್ರೀ ಗೋಲಿನಲ್ಲಿ ಪರಿವರ್ತಿಸಿದರು.  ಸಿ.ಜಿ. ಸುಷ್ಮಾ ಮತ್ತು ನಿಹಾ ಉತ್ತಮ ಪಾಸಿಂಗ್‌ಗಳ ಮೂಲಕ ಗಮನ ಸೆಳೆದರು.

ನಾಲ್ಕರ ಘಟ್ಟಕ್ಕೆ ಮಧ್ಯಪ್ರದೇಶ, ಒಡಿಶಾ
ಕಳೆದ ಬಾರಿಯ ರನ್ನರ್ಸ್ ಅಪ್ ಮಧ್ಯಪ್ರದೇಶ ತಂಡವು 4–0ಯಿಂದ ಭೋಪಾಲ್ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಸಾಗಿತು. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ವನ್ನು ಸೋಲಿಸಿದ್ದ ಮಧ್ಯಪ್ರದೇಶ, ಎರಡನೇ ಪಂದ್ಯದಲ್ಲಿ ದೆಹಲಿಯನ್ನು ಸೋಲಿಸಿತ್ತು. ‘ಡಿ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಒಡಿಶಾ ತಂಡವು 4–0ಯಿಂದ ಮುಂಬೈ ತಂಡವನ್ನು ನಿರಾಯಾಸವಾಗಿ ಸೋಲಿಸಿ ನಾಲ್ಕರ ಘಟ್ಟಕ್ಕೆ ಸಾಗಿತು. ಶುಕ್ರವಾರ ವಿಶ್ರಾಂತಿಯ ದಿನವಾಗಿದೆ.

ಕೆಂಪು ಕಾಲುಚೀಲ ಬದಲು
ದೆಹಲಿ ಮತ್ತು ಕರ್ನಾಟಕ ತಂಡದ ಆಟಗಾರ್ತಿಯರು ಒಂದೇ ಬಣ್ಣದ (ಕೆಂಪು) ಕಾಲುಚೀಲ  ಹಾಕಿಕೊಂಡು ಬಂದಿದ್ದರು. ಮುಖ್ಯ ಅಂಪೈರ್ ಡಿಕ್ರೂಜ್  ಅವರು ಒಂದು ತಂಡವು ಬೇರೆ ಬಣ್ಣದ ಸಾಕ್ಸ್ ಧರಿಸಬೇಕು ಎಂದು ಸೂಚಿಸಿದರು. ಆಗ ಕರ್ನಾಟಕ ತಂಡದ ಆಟಗಾರ್ತಿಯರು ನೀಲಿ ವರ್ಣದ ಸಾಕ್ಸ್‌ ಧರಿಸಲು ಒಪ್ಪಿದರು. ಇದರಿಂದಾಗಿ ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯವು 20 ನಿಮಿಷ ತಡವಾಗಿ ಆರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.