ADVERTISEMENT

ಗೆಲುವಿನ ತವಕದಲ್ಲಿ ಎಚ್‌ಎಎಲ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ಮಡಗಾಂವ್ (ಪಿಟಿಐ): ಈ ಋತುವಿನ ಐ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡಕ್ಕೆ ದಕ್ಕಿದ್ದು ಏಕೈಕ ಗೆಲುವು ಮಾತ್ರ. ಇದರ ಜೊತೆಗೆ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡ ಸಮಾಧಾನ. ಇನ್ನೊಂದು ಗೆಲುವು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ನಿರಾಸೆಯಲ್ಲಿರುವ ತಂಡಕ್ಕೆ ಮತ್ತೊಂದು ಗೆಲುವಿನ ತವಕ ಕಾಡುತ್ತಿದೆ.ಇದಕ್ಕೆ ಅವಕಾಶವೂ ಲಭಿಸಿದೆ.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ 20ನೇ ಸುತ್ತಿನ ಪಂದ್ಯದಲ್ಲಿ ಎಚ್‌ಎಎಲ್ ತಂಡಕ್ಕೆ ಚರ್ಚಿಲ್ ಬ್ರದರ್ಸ್‌ ಎದುರಾಳಿ. ಈ ಪಂದ್ಯದಲ್ಲಿ ಗೆಲುವು ನಿರೀಕ್ಷೆ ಮಾಡಿದಷ್ಟು ಸುಲಭವಲ್ಲ. ಏಕೆಂದರೆ ಹಿಂದಿನ ಪಂದ್ಯಗಳಲ್ಲಿ ಚರ್ಚಿಲ್ ನೀಡಿದ ಪ್ರದರ್ಶನವೇ ಅಂಥದ್ದು.
 
ಒಟ್ಟು 19 ಪಂದ್ಯಗಳನ್ನಾಡಿರುವ ಈ ತಂಡ 33 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎಚ್‌ಎಎಲ್‌ಗೆ ಮಾತ್ರ ಕೊನೆಯ ಸ್ಥಾನದಿಂದ ಮೇಲೇಳಲು ಸಾಧ್ಯವಾಗುತ್ತಿಲ್ಲ. ಈ ತಂಡ ಕಲೆ ಹಾಕಿದ್ದು ಕೇವಲ ಆರು ಪಾಯಿಂಟ್. ಗೆಲುವು ಪಡೆದು ಸರಣಿ ಸೋಲಿನ ನಿರಾಸೆಗೆ ತಡೆಒಡ್ಡಬೇಕು ಎನ್ನುವ ಲೆಕ್ಕಾಚಾರ ಎಚ್‌ಎಎಲ್ ತಂಡದ್ದು. ಅಗ್ರಸ್ಥಾನದಲ್ಲಿರುವ ಡೆಂಪೋ ತಂಡವನ್ನು ಹಿಂದಿಕ್ಕಬೇಕು ಎನ್ನುವ ನಿರೀಕ್ಷೆ ಚರ್ಚಿಲ್ ತಂಡದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.