ADVERTISEMENT

ಗೆಲುವಿನ ನಿರೀಕ್ಷೆಯಲ್ಲಿ ಕರ್ನಾಟಕ

ಶಿವಮೊಗ್ಗದಲ್ಲಿ ಇಂದಿನಿಂದ ಹೈದರಾಬಾದ್‌ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ

ನಾಗೇಶ್ ಶೆಣೈ ಪಿ.
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿರುವ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ (ಬಲಭಾಗ) ಮತ್ತು ಶ್ರೀನಾಥ್ ಅರವಿಂದ ಅಭ್ಯಾಸದಲ್ಲಿ ನಿರತರಾಗಿದ್ದರು.- ಪ್ರಜಾವಾಣಿ ಚಿತ್ರ / ರಂಜು ಪಿ
ಶಿವಮೊಗ್ಗದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿರುವ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ (ಬಲಭಾಗ) ಮತ್ತು ಶ್ರೀನಾಥ್ ಅರವಿಂದ ಅಭ್ಯಾಸದಲ್ಲಿ ನಿರತರಾಗಿದ್ದರು.- ಪ್ರಜಾವಾಣಿ ಚಿತ್ರ / ರಂಜು ಪಿ   

ಶಿವಮೊಗ್ಗ: ಅಸ್ಸಾಂ ವಿರುದ್ಧ ನಿರಾಯಾಸ ಗೆಲುವಿನೊಡನೆ ರಣಜಿ ಋತುವನ್ನು ಆರಂಭಿಸಿರುವ ಕರ್ನಾಟಕ ತಂಡ, ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಹೈದರಾಬಾದ್ ವಿರುದ್ಧ ಎರಡನೇ ಪಂದ್ಯದಲ್ಲಿ ಉತ್ಸಾಹದಿಂದಲೇ ಕಣಕ್ಕಿಳಿಯಲಿದೆ. ಮೊದಲ ಎರಡು ಪಂದ್ಯಗಳು ಮಳೆಗೆ ಕೊಚ್ಚಿಹೋಗಿರುವ ಕಾರಣ ಹೈದರಾಬಾದ್‌ ತಂಡವೇ ಈ ಪಂದ್ಯದಲ್ಲಿ ಹೆಚ್ಚು ಒತ್ತಡದಲ್ಲಿದೆ.

ಅನುಭವಿ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌.ರಾಹುಲ್‌ ಮತ್ತು ಕರುಣ್‌ ನಾಯರ್‌ ‘ಎ’ ಗುಂಪಿನ ಈ ಲೀಗ್‌ ಪಂದ್ಯಕ್ಕೆ ಲಭ್ಯರಿರುವುದು ಆತಿಥೇಯ ತಂಡದ ಬಲ ಹೆಚ್ಚಿಸಿದೆ.

‘ರಾಹುಲ್‌ ಆಗಮನದಿಂದ ಮಯಂಕ್‌ ಅಗರ್‌ವಾಲ್‌ ಮೂರನೇ ಕ್ರಮಾಂಕಕ್ಕೆ ಇಳಿಯಲಿದ್ದಾರೆ’ ಎಂದು ತಂಡದ ನಾಯಕ ವಿನಯ್‌ ಕುಮಾರ್‌ ತಂಡದ ಅಭ್ಯಾಸದ ನಂತರ ತಿಳಿಸಿದರು.

ADVERTISEMENT

ಕಳೆದ ಪಂದ್ಯದಲ್ಲಿ ಕೆ.ಗೌತಮ್‌ ಅಮೋಘ ಆಲ್‌ರೌಂಡ್ ಆಟವಾಡಿ ದ್ದರು. ಆರ್‌. ಸಮರ್ಥ್‌ ಶತಕದಾಟವಾಡಿದ್ದರು. ವಿನಯ್‌ ಕುಮಾರ್‌ ಜೊತೆ ಅನುಭವಿಗಳಾದ ಅಭಿಮನ್ಯು ಮಿಥುನ್‌, ಶ್ರೀನಾಥ್‌ ಅರವಿಂದ್ ಒಳಗೊಂಡ ವೇಗದ ದಾಳಿ ಪ್ರಬಲವಾಗಿದೆ. ಇವರ ಜೊತೆಗೆ ಆಲ್‌ರೌಡರ್‌ಗಳಾದ ಶ್ರೇಯಸ್‌ ಗೋಪಾಲ್‌, ಸ್ಟುವರ್ಟ್‌ ಬಿನ್ನಿ ಅವರೂ ಪರಿಣಾಮಕಾರಿ ಪಾತ್ರ ವಹಿಸಬಲ್ಲರು. ಇಬ್ಬರು ತಂಡಕ್ಕೆ ಸೇರ್ಪಡೆಗೊಂಡಿರುವುದರಿಂದ, ಮೊದಲ ಪಂದ್ಯ ಆಡಿದ್ದ ಮೀರ್‌ ಕೌನೇನ್‌ ಅಬ್ಬಾಸ್‌ ಅವಕಾಶ ಪಡೆಯುವುದು ಕಷ್ಟ ಸುಮಾರು 13 ವರ್ಷಗಳ ದೀರ್ಘ ಅವಧಿಯ ನಂತರ ಕರ್ನಾಟಕ, ಹೈದರಾಬಾದ್‌ ವಿರುದ್ಧ ಆಡುತ್ತಿದೆ. ಸಿಕಂದರಾಬಾದ್‌ನಲ್ಲಿ 2003–04ನೇ ಸಾಲಿನಲ್ಲಿ ಕೊನೆಯ ಬಾರಿ ಮುಖಾಮುಖಿ ಆದಾಗ ಹೈದರಾಬಾದ್‌ ಜಯಗಳಿಸಿತ್ತು.

ಆ ತಂಡದಲ್ಲಿ ಆಡಿದ್ದವರಲ್ಲಿ ಸ್ಟುವರ್ಟ್‌ ಬಿನ್ನಿ, ರಾಬಿನ್ ಉತ್ತಪ್ಪ ಅವರನ್ನುಳಿದು ಉಳಿದವರೆಲ್ಲ ನಿವೃತ್ತರಾಗಿದ್ದಾರೆ. ರಾಬಿನ್‌ ಉತ್ತಪ್ಪ ಈ ಋತುವಿನಲ್ಲಿ ಸೌರಾಷ್ಟ್ರ ತಂಡದ ಪರ ಆಡುತ್ತಿದ್ದಾರೆ.

ಐದು ವರ್ಷ ಕಾಲ ಕರ್ನಾಟಕ ತಂಡದ ಕೋಚ್‌ ಆಗಿದ್ದ ಜೆ.ಅರುಣ್‌ ಕುಮಾರ್‌ ಈ ವರ್ಷದಿಂದ ಹೈದರಾ ಬಾದ್‌ ತಂಡದ ಕೋಚ್‌ ಆಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಹೈದರಾ ಬಾದ್‌ ವಿರುದ್ಧ ಕರ್ನಾಟಕ ಆಡಿದ್ದ ಕೊನೆಯ ಪಂದ್ಯದಲ್ಲಿ ಅವರು ನಾಯಕರೂ ಆಗಿದ್ದರು.

ಒತ್ತಡದಲ್ಲಿ ಹೈದರಾಬಾದ್‌

ಮಳೆಯಿಂದಾಗಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ವಿರುದ್ಧ ತವರಿನಲ್ಲಿ ನಿಗದಿಯಾಗಿದ್ದ ಎರಡೂ ಪಂದ್ಯಗಳಲ್ಲಿ ಹೈದರಾಬಾದ್‌ ಮೈದಾನಕ್ಕಿಳಿದಿರಲಿಲ್ಲ. ಹೀಗಾಗಿ ಕೇವಲ ಎರಡು ಪಾಯಿಂಟ್ಸ್‌ ತಂಡದ ಬಗಲಲ್ಲಿ ಇದ್ದು ಉಳಿದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದೆ. ತಂಡಕ್ಕೆ ಸರಿಯಾಗಿ ಅಭ್ಯಾಸ ನಡೆಸಲು ಕೂಡ ಸಾಧ್ಯವಾಗಿಲ್ಲ. ಆಟಗಾರರಿಗೂ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸೀಮಿತವಾಗಿದೆ.

2011ರಲ್ಲಿ ತಂಡವನ್ನು ತೊರೆದು ಸೌರಾಷ್ಟ್ರ ತಂಡಕ್ಕೆ ಹೋಗಿದ್ದ ಬ್ಯಾಟ್ಸ್‌ ಮನ್‌ ಅಂಬಾಟಿ ರಾಯುಡು ತಂಡದ ನಾಯಕರಾಗಿದ್ದಾರೆ.

ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಲು ಯತ್ನಿಸುತ್ತಿರುವ ಅವರಿಂದ ತಂಡ ಉತ್ತಮ ಪ್ರದರ್ಶನ ನಿರೀಕ್ಷಿಸಿದೆ.

ಅಕ್ಷತ್‌ ರೆಡ್ಡಿ, ತನ್ಮಯ್‌ ಅಗರವಾಲ್‌, ವಿಕೆಟ್‌ಕೀಪರ್‌ ಕೊಲ್ಲ ಸುಮಂತ್‌ ಉಪಯುಕ್ತ ಆಟವಾಡಬಲ್ಲರು. ಸೋಮವಾರ ಭಾರತ ತಂಡಕ್ಕೆ ಆಯ್ಕೆಯಾದ ಸಿಹಿ ಸುದ್ದಿ ಪಡೆದ ಮಹಮದ್‌ ಸಿರಾಜ್‌ ಜೊತೆ ಸುದೀಪ್‌ ತ್ಯಾಗಿ ತಂಡದ ವೇಗದ ಬೌಲಿಂಗ್‌ ಹೊಣೆ ವಹಿಸಿಕೊಳ್ಳಲಿದ್ದಾರೆ.

ಅನುಭವಿ ಎಡಗೈ ಸ್ಪಿನ್ನರ್‌ ಪ್ರಗ್ಯಾನ್ ಓಜಾ ಕೂಡ ತಂಡಕ್ಕೆ ಮರಳಿದ್ದಾರೆ. ಅವರು ಕಳೆದ ಸಾಲಿನಲ್ಲಿ ಬಂಗಾಳ ತಂಡಕ್ಕೆ ಆಡಿದ್ದರು. ಅವರಿಗೆ ಪ್ರತಿಭಾನ್ವಿತ ಲೆಗ್ ಸ್ಪಿನ್ನರ್‌ ಆಕಾಶ್‌ ಭಂಡಾರಿ ಬೆಂಬಲ ನೀಡಲಿದ್ದಾರೆ.

ನೂತನ ನವುಲೆ ಕ್ರೀಡಾಂಗಣದಲ್ಲಿ ಇದು ಮೊದಲ ರಣಜಿ ಟ್ರೋಫಿ ಪಂದ್ಯ. ಇಲ್ಲಿನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಬಹುದೆಂಬ ನಿರೀಕ್ಷೆಯಿದೆ. ‘ಕೊನೆಯ ಎರಡು ದಿನ ಸ್ಪಿನ್ನರ್‌ಗಳಿಗೂ ಪಿಚ್‌ ನೆರವಾಗಬಹುದು’ ಎನ್ನುವ ವಿಶ್ವಾಸ ನಾಯಕ ವಿನಯ್‌ ಕುಮಾರ್ ಅವರದು.

ತಂಡಗಳು: ಕರ್ನಾಟಕ: ಆರ್‌.ವಿನಯ್ ಕುಮಾರ್‌ (ನಾಯಕ), ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್), ಆರ್‌.ಸಮರ್ಥ್‌, ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ಮೀರ್‌ ಕೌನೇನ್‌ ಅಬ್ಬಾಸ್‌, ಪವನ್ ದೇಶಪಾಂಡೆ, ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌, ಅಭಿಮನ್ಯು ಮಿಥುನ್, ಅರವಿಂದ್ ಶ್ರೀನಾಥ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್, ಮಯಂಕ್‌ ಅಗರವಾಲ್‌, ಶರತ್‌ ಶ್ರೀನಿವಾಸ್‌, ಟಿ.ಪ್ರದೀಪ್‌, ರೋನಿತ್ ಮೋರೆ.

ಹೈದರಾಬಾದ್‌: ಅಂಬಾಟಿ ರಾಯುಡು (ನಾಯಕ), ಕೊಲ್ಲ ಸುಮಂತ್‌ (ವಿಕೆಟ್‌ ಕೀಪರ್‌), ಪಿ.ಅಕ್ಷತ್‌ ರೆಡ್ಡಿ, ತನ್ಮಯ್‌ ಅಗರವಾಲ್‌, ಬಿ.ಸಂದೀಪ್‌, ಆಶಿಷ್‌ ರೆಡ್ಡಿ, ಪ್ರಗ್ಯಾನ್ ಓಜಾ, ಮೆಹದಿ ಹಸನ್‌, ಮಹಮದ್‌ ಸಿರಾಜ್‌, ರವಿಕಿರಣ್‌, ಸುದೀಪ್‌ ತ್ಯಾಗಿ, ರೋಹಿತ್ ರಾಯುಡು, ಆಕಾಶ್‌ ಭಂಡಾರಿ, ಅಮೋಲ್‌ ಶಿಂಧೆ, ಮೊಹಮದ್‌ ಮುದಾಸಿರ್‌. ಅಂಪೈರ್‌ಗಳು: ನವದೀಪ್‌ ಸಿಂಗ್‌, ಪಶ್ಚಿಮ್‌ ಗಿರೀಶ್‌ ಪಾಠಕ್‌, ಮ್ಯಾಚ್‌ ರೆಫ್ರಿ: ಸುನೀಲ್‌ ಚತುರ್ವೇದಿ.

ಪಂದ್ಯ ಆರಂಭ: ಬೆಳಿಗ್ಗೆ 9.30.

ಪ್ರತಿ ಪಂದ್ಯವೂ ಮಹತ್ವದ್ದು: ಅರುಣ್ ಕುಮಾರ್

ಶಿವಮೊಗ್ಗ: ‘ಕಳೆದ ಎರಡೂ ಪಂದ್ಯಗಳಲ್ಲಿ ಮಳೆಯಿಂದಾಗಿ ನಮಗೆ ಮೈದಾನಕ್ಕಿಳಿಯಲು ಸಾಧ್ಯವಾಗಿಲ್ಲ. ಆಟಗಾರರಿಗೆ ಅವಕಾಶ ತಪ್ಪಿರುವುದು ನೋವುಂಟುಮಾಡಿದೆ. ಲೀಗ್‌ನಲ್ಲಿ ಇನ್ನುಳಿದಿರುವ ನಾಲ್ಕೂ ಪಂದ್ಯಗಳಲ್ಲಿ ತಂಡದ ಆಟಗಾರರು ಸಾಮರ್ಥ್ಯ ತೋರಬೇಕಾಗಿದೆ’ ಎಂದು ಹೇಳುತ್ತಾರೆ ಹೈದರಾಬಾದ್‌ ತಂಡದ ನೂತನ ತರಬೇತುದಾರ ಜೆ.ಅರುಣ್‌ ಕುಮಾರ್.

ಕಳೆದ ಸಾಲಿನವರೆಗೆ ಕರ್ನಾಟಕ ತಂಡದ ಕೋಚ್‌ ಆಗಿದ್ದ ಅರುಣ್‌, ಆಗಸ್ಟ್‌ ಕೊನೆಯಲ್ಲಿ ಹೈದರಾಬಾದ್‌ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು. ಹೈದರಾಬಾದ್‌ ತಂಡ ಸೋಮವಾರ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಈಗ ಹೆಚ್ಚು ಪಾಯಿಂಟ್‌ ಗಳಿಕೆ ಮುಖ್ಯವಾಗಿರುವುದರಿಂದ ನಾವು ಯಾವುದೇ ತಂಡದ ಎದುರಾದರೂ ಸ್ಪಷ್ಟ ಗೆಲುವಿಗೆ ಪ್ರಯತ್ನ ಮಾಡಬೇಕಾಗಿದೆ. ಹೀಗಾಗಿ ಲೀಗ್‌ನ ಎಲ್ಲ ಪಂದ್ಯಗಳೂ ನಮಗೆ ಮಹತ್ವದ್ದು’ ಎನ್ನುತ್ತಾರೆ ಕರ್ನಾಟಕ ಈ ಮಾಜಿ ಆರಂಭ ಆಟಗಾರ.

‘ಕರ್ನಾಟಕ ವಿರುದ್ಧ ಈ ಪಂದ್ಯದ ಬಗ್ಗೆ ಕಾತರವಿದೆ. ಆದರೆ ನನಗೆ ಭಾವೋದ್ವೇಗವೇನೂ ಇಲ್ಲ. ನಾವೆಲ್ಲ (ಕರ್ನಾಟಕದ) ಒಬ್ಬರನ್ನೊಬ್ಬರು ಚೆನ್ನಾಗಿ ಬಲ್ಲೆವು. ಹಾಗಾಗಿ ಇದು ಸೌಹಾರ್ದ ಪಂದ್ಯವೆಂಬಂತೆ ಭಾಸವಾಗುತ್ತದೆ. ಆದರೆ ಕ್ರಿಕೆಟ್‌ ವಿಷಯ ಬಂದಾಗ ಈಗ ನನ್ನ ನಿಷ್ಠೆ ಹೈದರಾಬಾದ್‌ಗೆ. ಆಟಗಾರರಲ್ಲಿ ಸ್ಫೂರ್ತಿ ತುಂಬಲು ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದರು.

‘ಹೈದರಾಬಾದ್‌ ತಂಡ ಎಲ್ಲ ವಿಭಾಗಗಳಲ್ಲಿ ಸಮರ್ಥವಾಗಿದೆ. ನಿಜ, ಕರ್ನಾಟಕ ತಂಡ ಅತ್ಯುತ್ತಮ ವೇಗದ ದಾಳಿ ಹೊಂದಿದೆ. ಆದರೆ ನಮ್ಮ ತಂಡ ವೇಗದ ಜೊತೆ ಸ್ಪಿನ್ ವಿಭಾಗದಲ್ಲೂ ಉತ್ತಮವಾಗಿದೆ. ಪ್ರಗ್ಯಾನ್‌ ಓಜಾ ಮರಳಿದ್ದಾರೆ. ಮೆಹದಿ ಹಸನ್‌ ಉತ್ತಮ ಸ್ಪಿನ್ನರ್‌. ಆಕಾಶ್‌ ಭಂಡಾರಿ ನಾನು ನೋಡಿದ ಅತ್ಯುತ್ತಮ ಲೆಗ್ ಸ್ಪಿನ್ನರ್‌’ ಎನ್ನುತ್ತಾರೆ ಅವರು.

ಕರ್ನಾಟಕ ತಂಡದ ಆಟಗಾರರ ಸಾಮರ್ಥ್ಯ ಗೊತ್ತಿರುವುದರಿಂದ ಹೈದರಾಬಾದ್‌ ತಂಡಕ್ಕೆ ಲಾಭ ಆಗಬಹುದೇ ಎಂಬ ಪ್ರಶ್ನೆಗೆ ‘ಕೆಲವು ಆಟಗಾರರನ್ನು ನಿಯಂತ್ರಿಸಲು ತಂತ್ರ ರೂಪಿಸಿದ್ದೇವೆ. ಕರ್ನಾಟದ 8ರಿಂದ 9 ಆಟಗಾರರು ಉತ್ತಮವಾಗಿ ಬ್ಯಾಟ್‌ ಮಾಡಬಲ್ಲರು. ನಾವು ಯೋಜನೆಗೆ ತಕ್ಕಂತೆ ಬೌಲ್‌ ಮಾಡಬೇಕಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.