ADVERTISEMENT

ಗೆಲುವಿನ ಸಂಭ್ರಮದಲ್ಲಿ ಹಾಟ್‌ಷಾಟ್ಸ್

ಐಪಿಎಲ್‌ನಷ್ಟೇ ಖ್ಯಾತಿ ಐಬಿಎಲ್‌ಗೂ ಲಭಿಸಲಿದೆ: ಸೈನಾ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ/ಐಎಎನ್‌ಎಸ್): ಚೊಚ್ಚಲ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಚಾಂಪಿಯನ್ ಆದ ಹೈದರಾಬಾದ್ ಹಾಟ್‌ಷಾಟ್ಸ್ ತಂಡ ಗೆಲುವಿನ ಸಂಭ್ರಮದಲ್ಲಿದೆ. ಶನಿವಾರ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ನೇತೃತ್ವದ ಹಾಟ್‌ಷಾಟ್ಸ್ ಅವಧ್ ವಾರಿಯರ್ಸ್ ಎದುರು 3-1ರಲ್ಲಿ ಜಯ ಪಡೆದಿತ್ತು.

ಐಬಿಎಲ್‌ನಲ್ಲಿ ಪ್ರಶಸ್ತಿ ಜಯಿಸಿದ ಖುಷಿಯಲ್ಲಿ ಆಟಗಾರರು ಸಾಕಷ್ಟು ಹೊತ್ತು ಸಂಭ್ರಮದಲ್ಲಿ ತೊಡಗಿದ್ದರು. ಎನ್‌ಎಸ್‌ಸಿಯ ಕೋರ್ಟ್‌ನಲ್ಲಿ ಪಂದ್ಯ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದರು. ಅಪ್ಪಿಕೊಂಡು ಸಂತೋಷ ಹಂಚಿಕೊಂಡರು. ಕೊನೆಯ ಸಿಂಗಲ್ಸ್‌ನಲ್ಲಿ ಹೈದರಾಬಾದ್ ತಂಡದ ಅಜಯ್ ಜಯರಾಮ್ 10-21, 1-17, 11-7ರಲ್ಲಿ ಆರ್‌ಎಂವಿ ಗುರುಸಾಯಿದತ್ ಎದುರು ಜಯ ಪಡೆದು ಹಾಟ್‌ಷಾಟ್ಸ್‌ಗೆ `ಐಬಿಎಲ್ ಕಿರೀಟ' ತಂದುಕೊಟ್ಟರು.

ಐಪಿಎಲ್‌ನಷ್ಟೇ ಖ್ಯಾತಿ: `ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಸಿಕ್ಕಷ್ಟು ಜನಪ್ರಿಯತೆ ಐಬಿಎಲ್‌ಗೂ ಸಿಗುತ್ತಿದೆ. ಮುಂದಿನ ದಿನಗಳಲ್ಲಿ  ಐಬಿಎಲ್ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ' ಎಂದು ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಹಾಟ್‌ಷಾಟ್ಸ್ ತಂಡದ ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

`ಐಬಿಎಲ್ ಯಶಸ್ಸು ಕಾಣುತ್ತದೆ ಎಂದು ಹೆಚ್ಚು ಜನ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಈ ಟೂರ್ನಿ ಮುಗಿದ ನಂತರ ಎಲ್ಲರೂ ಇದನ್ನು ಐಪಿಎಲ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ತಂಡದಲ್ಲಿ ನನ್ನ ಮೇಲೆ ಹೆಚ್ಚು ನಿರೀಕ್ಷೆಯಿತ್ತು. ಆದ್ದರಿಂದ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರಿದ್ದೇನೆ. ಪುರುಷರ ಮೊದಲ ಸಿಂಗಲ್ಸ್‌ನಲ್ಲಿ ನಮ್ಮ  ತಂಡ ಸೋಲು ಕಂಡಿದ್ದ ಕಾರಣ ಕೊಂಚ ಒತ್ತಡ ಇತ್ತು' ಎಂದು ಸೈನಾ ನುಡಿದರು.

ಮಹಿಳಾ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಅವರು ಪಿ.ವಿ. ಸಿಂಧು ಎದುರು ಜಯ ಸಾಧಿಸಿ ಮೊದಲ ಮುನ್ನಡೆ ತಂದುಕೊಟ್ಟಿದ್ದರು. ನಂತರ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಅಜಯ್ ಮತ್ತು ಡಬಲ್ಸ್‌ನಲ್ಲಿ ಗೊಹ್ ವಿ. ಶೇಮ್-ವಾಹ್ ಲಿಮ್ ಖಿಮ್ ಜೋಡಿ ಅವಧ್ ತಂಡದ ಮಾರ್ಕಿಸ್ ಕಿಡೊ-ಮ್ಯಾಥಿಯಿಸ್ ಬೊಯೆ ಎದುರು ಜಯ ಗಳಿಸಿದ್ದರು.

`ಡಬಲ್ಸ್ ವಿಭಾಗದಲ್ಲಿ ನಮ್ಮ ತಂಡ ಗೆಲುವು ಸಾಧಿಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಏಕೆಂದರೆ, ಅವಧ್ ತಂಡದ ಮಾರ್ಕಿಸ್ ಮತ್ತು ಬೊಯೆ ವಿಶ್ವ ಖ್ಯಾತ ಆಟಗಾರರು. ಆದರೆ, ನಮ್ಮ ಆಟಗಾರರೇ ಗೆಲುವು ಸಾಧಿಸಿದ್ದು ಖುಷಿ ನೀಡಿತು' ಎಂದು ಅವರು ನುಡಿದರು.

`ಮೊದಲ ವರ್ಷ ಐಬಿಎಲ್‌ಗೆ ಸಿಕ್ಕ ಪ್ರಚಾರ ಖುಷಿ ನೀಡಿದೆ. ಭಾರತದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ಇದು ನಾಂದಿಯಾಗಲಿದೆ. ಹಿರಿಯ ಹಾಗೂ ವಿದೇಶಿ ಆಟಗಾರರಿಂದ ಕಲಿಯಲು ಅವಕಾಶವಾಗಿತ್ತು. ನಮ್ಮ ತಂಡದ ಮಾರ್ಕಿಸ್ ಮತ್ತು ಬೊಯೆ ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತುಕೊಂಡೆ' ಎಂದು ಅವಧ್ ತಂಡದ ಕೆ. ಶ್ರೀಕಾಂತ್ ನುಡಿದರು.

ಭರವಸೆಯ ಆಟಗಾರ ಗುರುಸಾಯಿದತ್ ಮಾತನಾಡಿ, `ಐಬಿಎಲ್ ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ತುಂಬಾ ಆತ್ಮವಿಶ್ವಾಸ ತುಂಬಿದೆ. ನನ್ನ ಆಟ ಮತ್ತು ಮಾನಸಿಕವಾಗಿ ಬಲಿಷ್ಠವಾಗಲು ಟೂರ್ನಿ ವೇದಿಕೆಯಾಯಿತು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.