ADVERTISEMENT

ಗೇಲಿ ಮಾಡಿದವರಿಗೆ ಉತ್ತರ ಕೊಟ್ಟ ಖುಷಿ

ಭದ್ರಾ ಕಾಲುವೆಯಲ್ಲಿ ಈಜು ಕಲಿತ ರೇವತಿಗೆ ಏಕಲವ್ಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
ಏಕಲವ್ಯ ಪ್ರಶಸ್ತಿ ಪಡೆದ ರೇವತಿ ಎಂ.ನಾಯ್ಕ
ಏಕಲವ್ಯ ಪ್ರಶಸ್ತಿ ಪಡೆದ ರೇವತಿ ಎಂ.ನಾಯ್ಕ   

ಬೆಂಗಳೂರು: ‘ಒಬ್ಬರ ಹಿಂದೆ ಒಬ್ಬರು ಹೆಣ್ಣು ಮಕ್ಕಳು ಹುಟ್ಟಿದಾಗ ಸುತ್ತಮುತ್ತಲಿನವರು ಗೇಲಿ ಮಾಡಿದರು. ಆದರೆ ನನಗೆ ಬೇಸರ ಆಗಲಿಲ್ಲ. ಹೆಣ್ಣುಮಕ್ಕಳನ್ನು ಕ್ರೀಡೆಯಲ್ಲಿ ಬೆಳೆಸಿದೆ; ಗಂಡು ಮಕ್ಕಳಂತೆ ಮಾಡಿದೆ. ಅವರು ಈಗ ಸಾಧನೆ ಮಾಡಿ ತೋರಿಸಿದ್ದಾರೆ. ಹೆಣ್ಣೆಂದು ಹೀಯಾಳಿಸಿದವರಿಗೆ ಅದುವೇ ನಾನು ಮತ್ತು ಮಕ್ಕಳು ನೀಡಿದ ಉತ್ತರ..’ ಕ್ರೀಡಾಸಾಧನೆಗಾಗಿ ಏಕಲವ್ಯ ಪ್ರಶಸ್ತಿ ಗಳಿಸಿದ ಪ್ಯಾರಾ ಈಜುಪಟು ರೇವತಿ ಎಂ.ನಾಯ್ಕ ಅವರ ತಂದೆ ಉಚ್ಚವನಹಳ್ಳಿ ಮಂಜುನಾಥ್‌ ಆಡಿದ ಮಾತು ಇದು.

ವಸಂತನಗರದ ಗುರುನಾನಕ್ ಭವನದಲ್ಲಿ ಬುಧವಾರ ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ಕಾಲುವೆಯಲ್ಲಿ ಈಜು ಕಲಿತು ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕಥೆಯನ್ನು ವಿವರಿಸಿದರು.

‘ನನಗೆ ಒಟ್ಟು ಮೂವರು ಮಕ್ಕಳು. ರೇವತಿ ಮೊದಲನೆಯವಳು. ಆಕೆಯನ್ನು ಹೆಗಲ ಮೇಲೆ ಕೂರಿಸಿ ಭದ್ರಾ ಕಾಲುವೆಯಲ್ಲಿ ಈಜಾಡಿಸುತ್ತಿದ್ದೆ. ಬತ್ತದ ಕಟಾವಿನ ಸಂದರ್ಭದಲ್ಲಿ ಕಾಲುವೆಗೆ ನೀರು ಹರಿಸುವುದಿಲ್ಲ. ಅಂಥ ಸಂದರ್ಭದಲ್ಲಿ ಒಮ್ಮೆ ದಾವಣಗೆರೆಯ ಈಜುಕೊಳಕ್ಕೆ ಹೋಗಿದ್ದೆವು. ಅಲ್ಲಿ ಕೋಚ್ ಸುಂದರೇಶ್‌ ಅವರು ಉತ್ತಮ ತರಬೇತಿ ನೀಡಿದರೆ ಈಕೆ ಸಾಧಕಿಯಾಗುತ್ತಾಳೆಂದರು. ಹೀಗಾಗಿ ಅಲ್ಲೇ ತರಬೇತಿಗೆ ಸೇರಿಸಿದೆ’ ಎಂದು ಮಂಜುನಾಥ್‌ ಹೇಳಿದರು.

ADVERTISEMENT

‘ಹೆಚ್ಚಿನ ತರಬೇತಿಗೆ ಬೆಂಗಳೂರಿನ ಬಸವನಗುಡಿ ಈಜುಕೇಂದ್ರಕ್ಕೆ ಸೇರಿಸಿದೆ. ವಾರದಲ್ಲಿ ಒಂದು ಬಾರಿ ಇಲ್ಲಿಗೆ  ಬಂದು ತರಬೇತಿ ಪಡೆಯಲು ತೊಡಗಿದಳು. ಮೊದಲು ನಾರಾಯಣ್‌ ಮತ್ತು ನಂತರ ಜಾನ್ ತರಬೇತಿ ನೀಡಿದರು. ವಾಟ್ಸಾಪ್‌ ಮೂಲಕವೂ ‘ಆನ್‌ಲೈನ್‌’ ತರಬೇತಿ ನೀಡಿದರು. ಹೀಗಾಗಿ ಸಾಧನೆಯ ಹಾದಿ ಸುಗಮವಾಯಿತು’ ಎಂದರು.

‘ಆಕೆಯ ಬಲಗಾಲಿನಲ್ಲಿ ನ್ಯೂನತೆ ಇದೆ ಎಂದು ವೃತ್ತಿಪರ ಈಜುಪಟು ಆಗುತ್ತಿದ್ದಂತೆ ಗೋತ್ತಾಯಿತು. ಹೀಗಾಗಿ ಪ್ಯಾರಾ ಈಜುಪಟುವಾಗಿ ಬೆಳೆದಳು. ಇನ್ನೊಬ್ಬ ಮಗಳು ರಕ್ಷಿತಾ ನಾಯ್ಕ ಕೂಡ ಈಜು ಕಲಿಯುತ್ತಿದ್ದಾಳೆ. ನಾನು ಕ್ರಿಕೆಟ್ ಪಟು ಆಗಿದ್ದೆ. ಮಗ ಕ್ರಿಕೆಟಿಗನಾಗಿ ಬೆಳೆಯುತ್ತಿದ್ದಾನೆ’ ಎಂದು ಇಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಂಜುನಾಥ್‌ ಹೇಳಿದರು. ಅವರ ಪತ್ನಿ ಸುನಂದಾ ಜೊತೆಗಿದ್ದರು.

ಈವರಗೆ ಒಟ್ಟು ರಾಷ್ಟ್ರೀಯ ಪದಕ ಗಳಿಸಿರುವ ರೇವತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಏಳು ಪದಕ ಗೆದ್ದಿದ್ದಾರೆ. ಪ್ರಶಸ್ತಿ ಪಡೆದ ಸಂಭ್ರಮದಲ್ಲಿದ್ದ ಅವರು ‘ಇದು ಅತ್ಯಂತ ಖುಷಿಯ ಗಳಿಗೆ. ನಮ್ಮಂಥವರನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಕ್ರೀಡೆ ಬೆಳೆಯಲು ಸಾಧ್ಯ’ ಎಂದರು.

ಅಥ್ಲೀಟ್‌ಗಳಿಗೆ ಪೂರಕ ವಾತಾವರಣ ಇಲ್ಲ
ಜೀವಮಾನ ಸಾಧನೆ ಪ್ರಶಸ್ತಿ ಗಳಿಸಿದ ಅಥ್ಲೆಟಿಕ್ ಕೋಚ್ ವಿ.ಆರ್.ಬೀಡು ‘ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲ. ಫುಟ್‌ಬಾಲ್‌ ಮತ್ತಿತರ ಕ್ರೀಡೆಗಳಿಗೆ ಅಕವಾಶ ನೀಡಿ ಅಥ್ಲೆಟಿಕ್ಸ್‌ ಅನ್ನು ಕಡೆಗಣಿಸಲಾಗಿದೆ’ ಎಂದು ದೂರಿದರು.

‘ಉಸಿರು ಇರುವ ವರೆಗೂ ಅಥ್ಲೆಟಿಕ್ಸ್ ಬೆಳವಣಿಗೆಗಾಗಿ ಶ್ರಮಿಸುತ್ತೇನೆ’ ಎಂದು ಅವರು ಹೇಳಿದರು.

13 ಮಂದಿಗೆ ಏಕಲವ್ಯ, ಒಂಬತ್ತು ಮಂದಿಗೆ ಕ್ರೀಡಾರತ್ನ ಮತ್ತು ಹತ್ತು ಸಂಸ್ಥೆಗಳಿಗೆ ಕ್ರೀಡಾ ಪ್ರೋತ್ಸಾಹಕ ಪ್ರಶಸ್ತಿಗಳನ್ನು ವಿತರಿಸಲಾಯಿತು.

*


–ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಮನೋಹರ್ ಆರ್‌. ಮೋಹಿತೆ (ಎಡ) ಹಾಗೂ ಅಥ್ಲೆಟಿಕ್‌ ಕೋಚ್‌ ವಿ.ಆರ್‌.ಬೀಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.