ಅಖಿಲ ಭಾರತ ಕಬಡ್ಡಿ: ನಾಕೌಟ್ ಹಂತಕ್ಕೆ ವಿಜಯ ಬ್ಯಾಂಕ್ ತಂಡ
ನಿಪ್ಪಾಣಿ: ವಿಜಯ ಬ್ಯಾಂಕ್ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ‘ಎ’ ಗ್ರೇಡ್ ಪುರುಷ ಹಾಗೂ ಮಹಿಳೆಯರ ರಾಷ್ಟ್ರಮಟ್ಟದ ಮುಕ್ತ ಕಬಡ್ಡಿ ಟೂರ್ನಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಮುನ್ಸಿಪಲ್ ಪ್ರೌಢಶಾಲೆ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಈ ತಂಡ 31–15ರಲ್ಲಿ ಶಾಹು ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿದರೆ, ಇನ್ನೊಂದು ಪಂದ್ಯದಲ್ಲಿ 19–2ರಲ್ಲಿ ಬೆಳಗಾವಿ ಜಿಲ್ಲಾ ತಂಡದ ಎದುರು ಜಯ ಸಾಧಿಸಿತು.
ಈ ವಿಭಾಗದ ಇತರ ಪಂದ್ಯಗಳಲ್ಲಿ ಪುಣೆಯ ಬಿಇಜಿ ತಂಡ 32–7ರಲ್ಲಿ ಬೆಳಗಾವಿ ಜಿಲ್ಲಾ ತಂಡವನ್ನು ಸೋಲಿಸಿತು. ‘ಬಿ’ ಗುಂಪಿನ ಪಂದ್ಯದಲ್ಲಿ ಜೊಲ್ಲೆ ಉದ್ಯೋಗ ಸಮೂಹ ತಂಡ 8–26ರಿಂದ ಪಂಜಾಬ್ ಪೊಲೀಸ್ ತಂಡದ ಎದುರೂ, 4–40ರಲ್ಲಿ ಮಹಾರಾಷ್ಟ್ರ ಪೊಲೀಸ್ ತಂಡದ ವಿರುದ್ಧವೂ ನಿರಾಸೆ ಅನುಭವಿಸಿತು.
ಆಳ್ವಾಸ್‌ಗೆ ಮತ್ತೊಂದು ಜಯ: ಮಹಿಳೆಯರ ವಿಭಾಗದ ಪಂದ್ಯದಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ 27–13ರಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಎದುರು ಗೆದ್ದಿತು.
ಬ್ಯಾಸ್ಕೆಟ್‌ಬಾಲ್: ಕರ್ನಾಟಕಕ್ಕೆ ಗೆಲುವು
ನವದೆಹಲಿ (ಪಿಟಿಐ): ಕರ್ನಾಟಕ ಮಹಿಳಾ ತಂಡದವರು ಇಲ್ಲಿ ನಡೆಯುತ್ತಿರುವ 64ನೇ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್ ಷಿಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ 75–67ರಲ್ಲಿ ಪಶ್ಚಿಮ ಬಂಗಾಳ ತಂಡವನ್ನು ಮಣಿಸಿತು. ಕರ್ನಾಟಕದ ಪರ ಕೃತಿಕಾ ಲಕ್ಷ್ಮಣ್ (26), ರೋಶಿಮ್ ರೋಸ್ (14) ಹಾಗೂ ಸಾಗರಿಕಾ ಶ್ಯಾಮ್ (14) ಪಾಯಿಂಟ್ ಗಳಿಸಿ ಮಿಂಚಿದರು.
ಈ ವಿಭಾಗದ ಇತರ ಪಂದ್ಯಗಳಲ್ಲಿ ಪಂಜಾಬ್ 79–59ರಲ್ಲಿ ತಮಿಳುನಾಡು ಎದುರೂ, ಮಹಾರಾಷ್ಟ್ರ 60–56ರಲ್ಲಿ ಛತ್ತೀಸಗಡದ ಮೇಲೂ ಗೆಲುವು ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.