ADVERTISEMENT

ಚಾಂದಿಮಲ್ ಆರೋಪ ಮುಕ್ತ

ಚೆಂಡು ವಿರೂಪಗೊಳಿಸಿದ ಸಂದೇಹ; ವಿಚಾರಣೆ ಸಾಧ್ಯತೆ

ರಾಯಿಟರ್ಸ್
Published 18 ಜೂನ್ 2018, 17:56 IST
Last Updated 18 ಜೂನ್ 2018, 17:56 IST
ದಿನೇಶ್ ಚಾಂದಿಮಲ್‌
ದಿನೇಶ್ ಚಾಂದಿಮಲ್‌   

ಗ್ರಾಸ್ ಐಲೆಟ್‌: ವೆಸ್ಟ್ ಇಂಡೀಸ್ ಎದುರು ನಡೆದ ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿದ್ದ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂದಿಮಲ್ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಅವರು ತಪ್ಪಿತಸ್ಥರಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸೋಮವಾರ ಅಭಿಪ್ರಾಯಪಟ್ಟಿದೆ. ಅವರನ್ನು ವಿಚಾರಣೆಗೊಳಪಡಿಸಿದ ನಂತರ ಐಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಪಂದ್ಯದ ಎರಡನೇ ದಿನವಾದ ಶುಕ್ರವಾರ ಚಾಂದಿಮಲ್ ಅವರು ಚೆಂಡು ವಿರೂಪಗೊಳಿಸಿರುವ ಸಾಧ್ಯತೆ ಇದೆ ಎಂದು ಅಂಪೈರ್‌ಗಳಾದ ಅಲೀಮ್ ದಾರ್ ಮತ್ತು ಇಯಾನ್‌ ಗೌಲ್ಡ್‌ ಅಭಿಪ್ರಾಯಪಟ್ಟಿದ್ದರು.

ಇದರಿಂದ ಕುಪಿತಗೊಂಡ ಶ್ರೀಲಂಕಾ ತಂಡ ಶನಿವಾರ ಅಂಗಣಕ್ಕೆ ಇಳಿಯಲು ನಿರಾಕರಿಸಿತ್ತು. ಪಂದ್ಯದ ರೆಫರಿ ಜಾವಗಲ್‌ ಶ್ರೀನಾಥ್ ಮಧ್ಯಪ್ರವೇಶಿಸಿದ ನಂತರ ಪಂದ್ಯ ಮುಂದುವರಿದಿತ್ತು. ವೆಸ್ಟ್ ಇಂಡೀಸ್ ತಂಡಕ್ಕೆ ದಂಡದ ರೂಪದಲ್ಲಿ ಐದು ರನ್‌ಗಳ ‘ಕಾಣಿಕೆ’ ನೀಡಲಾಗಿತ್ತು.

ADVERTISEMENT

ದಿನದಾಟದ ಕೊನೆಯ ಅವಧಿಯಲ್ಲಿ ಚಾಂದಿಮಲ್‌ ಅವರು ಪ್ಯಾಂಟ್ ಜೇಬಿನಿಂದ ಸಿಹಿ ತಿಂಡಿ ತೆಗೆದು ಬಾಯಿಗೆ ಹಾಕಿ ನಂತರ ಅದನ್ನು ಚೆಂಡಿಗೆ ಉಜ್ಜಿದ್ದು ವಿಡಿಯೊ ತುಣುಕಿನಲ್ಲಿ ಪತ್ತೆಯಾಗಿತ್ತು. ಜೇಬಿನಿಂದ ಹರಿತವಾದ ವಸ್ತುವೊಂದನ್ನು ತೆಗೆದು ಚೆಂಡನ್ನು ಕೊರೆದ ಆಸ್ಟ್ರೇಲಿಯಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಮಾರ್ಚ್‌ ತಿಂಗಳಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾಗಿದ್ದರು.

‘ಚಾಂದಿಮಲ್ ಅವರನ್ನು ವಿಚಾರಣೆಗ ಒಳಪಡಿಸುವಾಗು ವಿಡಿಯೊ ತುಣುಕನ್ನು ಪರಿಶೀಲಿಸಲಾಗುವುದು. ಪಂದ್ಯದ ಅಂಪೈರ್‌ಗಳು, ರೆಫರಿಗಳು ಮತ್ತು ಶ್ರೀಲಂಕಾ ತಂಡದ ಆಡಳಿತದವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ವೆಸ್ಟ್ ಇಂಡೀಸ್‌ಗೆ 296 ರನ್‌ ಗುರಿ
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕುಶಾಲ್ ಮೆಂಡಿಸ್ ಅವರ ಅಮೋಘ ಆಟದ ನೆರವಿನಿಂದ ಶ್ರೀಲಂಕಾ ತಂಡ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿದೆ. ಹೀಗಾಗಿ ವೆಸ್ಟ್ ಇಂಡೀಸ್‌ ಗೆಲುವಿಗೆ 296 ರನ್‌ಗಳ ಗುರಿ ಪಡೆದಿದೆ.

44 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಜೊತೆಗೂಡಿದ ಮೆಂಡಿಸ್ (87; 117 ಎ, 2 ಸಿ, 8 ಬೌಂ) ಮತ್ತು ದಿನೇಶ್ ಚಾಂದಿಮಲ್‌ ಶತಕದ ಜೊತೆಯಾಟವಾಡಿ ಆಸರೆಯಾದರು.

ರೋಷನ್‌ ಸಿಲ್ವಾ, ನಿರೋಷನ್ ಡಿಕ್ವೆಲ್ಲಾ ಮತ್ತು ಬಾಲಂಗೋಚಿ ಅಖಿಲ ಧನಂಜಯ ಕೂಡ ಉತ್ತಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ, ಮೊದಲ ಇನಿಂಗ್ಸ್‌: 253; ವೆಸ್ಟ್ ಇಂಡೀಸ್‌, ಮೊದಲ ಇನಿಂಗ್ಸ್‌: 300; ಶ್ರೀಲಂಕಾ, ಎರಡನೇ ಇನಿಂಗ್ಸ್‌ (ಭಾನುವಾರದ ಅಂತ್ಯಕ್ಕೆ8ಕ್ಕೆ 334): 91.4 ಓವರ್‌ಗಳಲ್ಲಿ 342 (ಅಖಿಲ ಧನಂಜಯ 23, ಸುರಂಗಾ ಲಕ್ಮಲ್‌ 7; ಕೆಮರ್ ರೋಚ್‌ 78ಕ್ಕೆ2, ಶಾನನ್ ಗಾಬ್ರಿಯೆಲ್‌ 62ಕ್ಕೆ8). ವೆಸ್ಟ್ ಇಂಡೀಸ್‌, ಎರಡನೇ ಇನಿಂಗ್ಸ್‌: 4 ಓವರ್‌ಗಳಲ್ಲಿ 2 ವಿಕೆಟ್‌ಗೆ 8 (ವಿವರ ಅಪೂರ್ಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.