ADVERTISEMENT

ಚಾಂಪಿಯನ್ನರಿಗೆ ಭಾರತದ ಸವಾಲು

ಟ್ವೆಂಟಿ–20 ಪಂದ್ಯ ಇಂದು: ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್ ಆಕರ್ಷಣೆ

ಪಿಟಿಐ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ
ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯ   

ಕಿಂಗ್ಸ್‌ಟನ್, ಜಮೈಕಾ: ಏಕದಿನ ಸರಣಿಯನ್ನು ಗೆದ್ದು ಬೀಗುತ್ತಿರುವ ಭಾರತ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಯ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್ ತಂಡಗಳ ನಡುವಿನ ಏಕೈಕ ಟ್ವೆಂಟಿ–20 ಪಂದ್ಯ ಭಾನುವಾರ ನಡೆಯಲಿದೆ.

ಪಂದ್ಯದಲ್ಲಿ ಜಯ ಸಾಧಿಸಿ ಕೆರಿಬಿಯನ್‌ ನಾಡಿನ ಪ್ರವಾಸಕ್ಕೆ ತೆರೆ ಎಳೆಯಲು ವಿರಾಟ್‌ ಕೊಹ್ಲಿ ಬಳಗ ಪ್ರಯತ್ನಿಸಲಿದೆ. ಏಕದಿನ ಸರಣಿಯಲ್ಲಿ ಅನುಭವಿಸಿದ ಸೋಲಿನ ಕಹಿ ಮರೆಯಲು ಆತಿಥೇಯರಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಕ್ರಿಸ್‌ ಗೇಲ್‌ ಅವರನ್ನು ವೆಸ್ಟ್‌ ಇಂಡೀಸ್‌ ತಂಡಕ್ಕೆ ಕರೆಸಿಕೊಂಡಿರುವುದರಿಂದ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇರುವುದರಿಂದ ಪಂದ್ಯದ ರೋಚಕತೆ ಹೆಚ್ಚಲಿದೆ.

ಗಾಯದ ಸಮಸ್ಯೆಯಿಂದಾಗಿ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದ ಕ್ರಿಸ್ ಗೇಲ್‌ ಈ ಬಾರಿ ಐಪಿಎಲ್ ಟೂರ್ನಿಯಲ್ಲೂ ಮಿಂಚಲಿಲ್ಲ. ಆದ್ದರಿಂದ ಬ್ಯಾಟಿಂಗ್‌ ಲಯಕ್ಕೆ ಮರಳಲು ಈ ಪಂದ್ಯದಲ್ಲಿ ಅವರಿಗೆ ಅವಕಾಶವಿದೆ. ಇದನ್ನು ಅವರು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲ ಗೇಲ್‌ ಅವರಿಗೆ ಯಾವುದೇ ಕ್ಷಣದಲ್ಲಿ ಪಂದ್ಯಕ್ಕೆ ತಿರುವು ನೀಡುವ ಸಾಮರ್ಥ್ಯ ಇದೆ.

ತಂಡದ ಇತರ ಬ್ಯಾಟ್ಸ್‌ಮನ್‌ಗಳು ಕೂಡ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಮಾರ್ಲನ್ ಸ್ಯಾಮ್ಯುಯೆಲ್ಸ್‌, ಸುನಿಲ್‌ ನಾರಾಯಣ್‌, ಸ್ಯಾಮ್ಯುಯೆಲ್ ಬದ್ರಿ, ಕಾರ್ಲೋಸ್ ಬ್ರಾಥ್‌ವೇಟ್‌ ಮುಂತಾದವರು ಎಂಥ ಪ್ರಭಾವಿ ಬೌಲರ್‌ಗಳನ್ನು ಕೂಡ ಎದುರಿಸುವ ತಾಕತ್ತು ಹೊಂದಿದ್ದಾರೆ. ಕಳೆದ ಬಾರಿ ಭಾರತದ ವಿರುದ್ಧ ನಡೆದ ಟ್ವೆಂಟಿ–20 ಪಂದ್ಯದಲ್ಲಿ 49 ಎಸೆತಗಳಲ್ಲಿ ಶತಕ ಗಳಿಸಿ ಮಿಂಚಿದ ಎವಿನ್‌ ಲೂಯಿಸ್ ಅವರೂ ತಂಡದಲ್ಲಿದ್ದಾರೆ. ಅವರು ಬೌಲರ್‌ಗಳಿಗೆ ಸವಾಲಾಗಲಿದ್ದಾರೆ. 2016ರ ಆಗಸ್ಟ್‌ 27ರಂದು ನಡೆದ ಈ ಪಂದ್ಯದಲ್ಲಿ ಲೂಯಿಸ್ ಒಂಬತ್ತು ಸಿಕ್ಸರ್ಸ್ ಮತ್ತು ಐದು ಬೌಂಡರಿ ಗಳಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಭಾರತ ಒಂದು ರನ್‌ನಿಂದ ಸೋಲು ಕಂಡಿತ್ತು.

ಇನಿಂಗ್ಸ್ ಆರಂಭಿಸಲಿರುವ ಕೊಹ್ಲಿ?
ಟ್ವೆಂಟಿ–20 ಪಂದ್ಯಕ್ಕೆ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ನಾಯಕ ಕೊಹ್ಲಿ ಮುಂದಾಗುವ ನಿರೀಕ್ಷೆ ಇದೆ.  ಕೊಹ್ಲಿ ಸ್ವತಃ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಐಪಿಎಲ್‌ನಲ್ಲಿ ಉತ್ತಮ ಆಟ ಆಡಿರುವ ಕೊಹ್ಲಿ ರಾಯಲ್ ಚಾಲೆಂಜರ್ಸ್ ಪರವಾಗಿ ಸಾಕಷ್ಟು ಬಾರಿ ಇನಿಂಗ್ಸ್‌ ಆರಂಭಿಸಿದ್ದಾರೆ.

ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಪರವಾಗಿಯೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದಿದ್ದಾರೆ. ಅಜಿಂಕ್ಯ ರಹಾನೆ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದು ಒಂದು ಶತಕ ಮತ್ತು ಮೂರು ಅರ್ಧಶತಕ ಗಳಿಸಿದ್ದಾರೆ. ಟ್ವೆಂಟಿ–20 ಪಂದ್ಯದಲ್ಲಿ ಅವರನ್ನು ಎರಡನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಸುವುದು ಸೂಕ್ತ ಎಂಬುದು ಕೊಹ್ಲಿ ಲೆಕ್ಕಾಚಾರ. ಭವಿಷ್ಯದ ವಿಕೆಟ್ ಕೀಪರ್‌ನ ಹುಡುಕಾಟದಲ್ಲಿರುವ ಆಯ್ಕೆ ಮಂಡಳಿ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಿ ಸಾಮರ್ಥ್ಯ ಪರೀಕ್ಷೆ ಮಾಡುವ ಸಾಧ್ಯತೆ ಇದೆ.

ಚೈನಾಮನ್ ಶೈಲಿಯ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸಬಲ್ಲ ಕುಲದೀಪ್ ಯಾದವ್ ಅವರಿಗೆ ಚೊಚ್ಚಲ ಟ್ವೆಂಟಿ–20 ಪಂದ್ಯ ಆಡುವ ಅವಕಾಶ ಸಿಗುವ ಸಾಧ್ಯತೆಯೂ ಇದೆ. ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ–20 ಪಂದ್ಯದಲ್ಲಿ ಆರು ವಿಕೆಟ್ ಕಬಳಿಸಿದ್ದ ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಈ ಬಾರಿ ತಂಡದಲ್ಲಿ ಇಲ್ಲ. ಈ ಕಾರಣದಿಂದ ಎಡಗೈ ಸ್ಪಿನ್ನರ್‌ ಕುಲದೀಪ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚು ಇದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಶ್ರೇಯಸ್ಸು ಹೊಂದಿರುವ ಭುವನೇಶ್ವರಕುಮಾರ್‌ ಅವರು ಉಮೇಶ್ ಯಾದವ್‌ ಜೊತೆ ಭಾರತದ ವೇಗದ ದಾಳಿಯ ಚುಕ್ಕಾಣಿ ಹಿಡಿಯುವರು.

ವೆಸ್ಟ್‌ ಇಂಡೀಸ್ ಬೌಲರ್‌ಗಳ ಪೈಕಿ ಸ್ಪಿನ್ನರ್‌ಗಳು ಭಾರತದ ಬ್ಯಾಟ್ಸ್‌ಮನ್‌ ಗಳನ್ನು ಹೆಚ್ಚು ಕಾಡುವ ಆತಂಕ ಇದೆ. ನಾರಾಯಣ್ ಮತ್ತು ಬದ್ರಿ ಅವರನ್ನು ಸಮರ್ಥವಾಗಿ ಎದುರಿಸಿದರೆ ಸ್ಪರ್ಧಾತ್ಮಕ ಮೊತ್ತ ಗಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಲು ಭಾರತಕ್ಕೆ ಕಷ್ಟವಾಗಲಾರದು.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಅಜಿಂಕ್ಯ ರಹಾನೆ, ಮಹೇಂದ್ರಸಿಂಗ್ ದೋನಿ (ವಿಕೆಟ್ ಕೀಪರ್‌), ಯುವರಾಜ್ ಸಿಂಗ್‌, ಕೇದಾರ್ ಜಾಧವ್‌, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್‌, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್‌, ಕುಲದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಉಮೇಶ್ ಯಾದವ್‌, ದಿನೇಶ್ ಕಾರ್ತಿಕ್‌, ಮಹಮ್ಮದ್ ಶಮಿ.

ವೆಸ್ಟ್ ಇಂಡೀಸ್‌: ಕಾರ್ಲೋಸ್ ಬ್ರಾಥ್‌ ವೇಟ್‌ (ನಾಯಕ), ಸ್ಯಾಮ್ಯು ಯೆಲ್ ಬದ್ರಿ, ರ್‌್ಯಾನ್ಸ್‌ಫೋರ್ಡ್ ಬೀಟನ್‌, ಕ್ರಿಸ್ ಗೇಲ್‌, ಎವಿನ್‌ ಲೂಯಿಸ್‌, ಜೇಸನ್ ಮಹಮ್ಮದ್‌, ಸುನಿಲ್ ನಾರಾಯಣ್‌, ಕೀರನ್ ಪೊಲಾರ್ಡ್‌, ರೋವ್ಮನ್ ಪೊವೆಲ್‌, ಮಾರ್ಲನ್ ಸ್ಯಾಮ್ಯುಯೆಲ್ಸ್‌, ಜೆರೋಮ್ ಟೇಲರ್‌, ಚಡ್ವಿಕ್ ವಾಲ್ಟನ್‌ (ವಿಕೆಟ್ ಕೀಪರ್‌), ಕೆಸ್ರಿಕ್ ವಿಲಿಯಮ್ಸ್‌.

ಪಂದ್ಯ ಆರಂಭ: ರಾತ್ರಿ 9ಕ್ಕೆ
ನೇರ ಪ್ರಸಾರ: ಟೆನ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT