ADVERTISEMENT

ಚಾಂಪಿಯನ್ಸ್ ಲೀಗ್ ಕ್ರಿಕೆಟ್: ಅರ್ಹತೆ ಗಿಟ್ಟಿಸಿದ ಟ್ರಿನಿಡಾಡ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ಲೆಂಡ್ಲೆ ಸಿಮಾನ್ಸ್ (67; 58 ಎಸೆತ) ಹಾಗೂ ಅಡ್ರಿಯಾನ್ ಭರತ್ (62; 47 ಎಸೆತ) ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದವರು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಧಾನ ಹಂತದಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.

ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಅರ್ಹತಾ ಪಂದ್ಯದಲ್ಲಿ ಟ್ರಿನಿಡಾಡ್ ನೀಡಿದ 169 ರನ್‌ಗಳ ಗುರಿಗೆ ಉತ್ತರವಾಗಿ ಲೀಸ್ಟರ್‌ಷೈರ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 117 ರನ್ ಗಳಿಸಿತು.

ವೇಗಿ ರವಿ ರಾಂಪಾಲ್ ಹಾಗೂ ಸ್ಯಾಮ್ಯೂಯೆಲ್ ಬದ್ರಿ ಅವರ ವೇಗದ ದಾಳಿಗೆ ಸಿಲುಕಿದ ಲೀಸ್ಟರ್‌ಷೈರ್ ಪಟಪಟನೇ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ಕೇವಲ 20 ರನ್‌ಗಳಿಗೆ 5 ವಿಕೆಟ್ ಪತನವಾದವು. ಆಗ ಜೇಮ್ಸ ಟೇಲರ್ (ಔಟಾಗದೆ 56) ಹಾಗೂ ಅಬ್ದುಲ್ ರಜಾಕ್ (21) ಕೆಲ ಹೊತ್ತು ತಂಡಕ್ಕೆ ಆಸರೆಯಾಗಿದ್ದರು.

ಆದರೆ ಅವರಿಬ್ಬರ ಹೋರಾಟ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಕಾಗಲಿಲ್ಲ. ರಾಂಪಾಲ್ (14ಕ್ಕೆ4), ಬದ್ರಿ (7ಕ್ಕೆ2) ಹಾಗೂ ಸುನಿಲ್ ನರೈನ್ (18ಕ್ಕೆ2) ಅವರ ದಾಳಿಗೆ ಸಿಲುಕಿದ ಲೀಸ್ಟರ್‌ಷೈರ್ ಸೋಲಿನ ಹಾದಿ ಹಿಡಿಯಿತು.

ಇದಕ್ಕೂ ಮೊದಲು ಟ್ರಿನಿಡಾಡ್ ತಂಡ ಉತ್ತಮ ಆರಂಭ ಪಡೆಯಿತು. ಅದಕ್ಕೆ ಕಾರಣ ಸಿಮಾನ್ಸ್ ಹಾಗೂ ಭರತ್. ಇವರಿಬ್ಬರು ಮೊದಲ ವಿಕೆಟ್‌ಗೆ 139 ರನ್ ಸೇರಿಸಿದರು. ಭರ್ಜರಿ ಹೊಡೆತಗಳ ಮೂಲಕ ಲೀಸ್ಟರ್‌ಷೈರ್ ಬೌಲರ್‌ಗಳನ್ನು ಕಾಡಿದರು. ಇಷ್ಟು ರನ್ ಸೇರಿಸಲು ಅವರ ತೆಗೆದುಕೊಂಡ ಎಸೆತಗಳು 103.

ನಂತರ ಡೆರೆನ್ ಬ್ರಾವೊ ಹಾಗೂ ದೆನೇಶ್ ರಾಮ್ದಿನ್ ತಂಡದ ಮೊತ್ತವನ್ನು ಹೆಚ್ಚಿಸಿದರು. ಪರಿಣಾಮ ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಲು ಸಾಧ್ಯವಾಯಿತು. ಭರತ್ `ಪಂದ್ಯ ಶ್ರೇಷ್ಠ~ ಎನಿಸಿಕೊಂಡರು.

ಡೆರೆನ್ ಗಂಗಾ ಸಾರಥ್ಯದ ಪಡೆ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಟೂರ್ನಿಯ ಪ್ರಧಾನ ಹಂತ ತಲುಪಿದ ಮೊದಲ ತಂಡ ಎನಿಸಿಕೊಂಡಿತು. 2009ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಟ್ರಿನಿಡಾಡ್ ರನ್ನರ್ ಅಪ್ ಪ್ರಶಸ್ತಿ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರ್: ಟ್ರಿನಿಡಾಡ್ ಅಂಡ್ ಟೊಬಾಗೊ: 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 168 (ಲೆಂಡ್ಲೆ ಸಿಮಾನ್ಸ್ 67, ಅಡ್ರಿಯಾನ್ ಭರತ್ 62, ಡೆರೆನ್ ಬ್ರಾವೊ ಔಟಾಗದೆ 18; ಹ್ಯಾರಿ ಗರ್ನಿ 33ಕ್ಕೆ2); ಲೀಸ್ಟರ್‌ಷೈರ್: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 117 (ಜೇಮ್ಸ ಟೇಲರ್ ಔಟಾಗದೆ 56, ಅಬ್ದುಲ್ ರಜಾಕ್ 21; ಸ್ಯಾಮ್ಯೂಯೆಲ್ ಬದ್ರಿ 7ಕ್ಕೆ2, ರವಿ ರಾಂಪಾಲ್ 14ಕ್ಕೆ4, ಸುನಿಲ್ ನರೈನ್ 18ಕ್ಕೆ2): ಫಲಿತಾಂಶ: ಟ್ರಿನಿಡಾಡ್ ಅಂಡ್ ಟೊಬಾಗೊ ತಂಡಕ್ಕೆ 51 ರನ್ ಗೆಲುವು. ಪಂದ್ಯ ಶ್ರೇಷ್ಠ: ಅಡ್ರಿಯಾನ್ ಭರತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.