ADVERTISEMENT

ಚಾವ್ಲಾ ಪ್ರಮುಖ ಪಾತ್ರ ವಹಿಸುವರು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:20 IST
Last Updated 14 ಫೆಬ್ರುವರಿ 2011, 18:20 IST

ಕಾನ್ಪುರ (ಪಿಟಿಐ):  ಪಿಯೂಷ್ ಚಾವ್ಲಾ ಅವರು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುವರು ಎಂಬ ಅಭಿಪ್ರಾಯವನ್ನು ವೇಗದ ಬೌಲರ್ ಆರ್.ಪಿ. ಸಿಂಗ್ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪ್ರಭಾವಿ ದಾಳಿ ನಡೆಸಿದ್ದ ಚಾವ್ಲಾ 31 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದಿದ್ದರು. ಇವರ ಸ್ಪಿನ್ ಮುಂದೆ ಆಸ್ಟ್ರೇಲಿಯದ ಎಲ್ಲ ಬ್ಯಾಟ್ಸ್‌ಮನ್‌ಗಳೂ ತಡಬಡಾಯಿಸಿದ್ದರು.

‘ಚಾವ್ಲಾ ಭಾನುವಾರ ಚೆಂಡಿನ ಮೂಲಕ ಜಾದೂ ತೋರಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಅವರ ಎಸೆತಗಳು ಸಾಕಷ್ಟು ತಿರುವು ಪಡೆದವು. ಅವರು ಇದೇ ಪ್ರದರ್ಶನ ಮುಂದುವರಿಸಿದರೆ, ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸುವರು’ ಎಂದರು.

‘ಅಭ್ಯಾಸ ಪಂದ್ಯವಾದರೂ ಚಾವ್ಲಾ ಪ್ರದರ್ಶನವನ್ನು ಹಗುರವಾಗಿ ಕಾಣಬೇಕಾಗಿಲ್ಲ. ಕಳೆದ ಬಾರಿಯ ಚಾಂಪಿಯನ್ನರ ವಿರುದ್ಧ ತೋರಿದ ಬೌಲಿಂಗ್ ಸೊಗಸಾಗಿತ್ತು. ಒಂಬತ್ತು ಓವರ್‌ಗಳಲ್ಲಿ ಕೇವಲ 31 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಯಾವುದೇ ಆಟಗಾರ ಬಳಿಕ ಅದರಿಂದ ಸಾಕಷ್ಟು ಪ್ರಯೋಜನ ಪಡೆಯುವನು’ ಎಂದು ರಾಷ್ಟ್ರೀಯ ತಂಡದಲ್ಲಿ ಅವಾಶ ಕಳೆದುಕೊಂಡಿರುವ ಆರ್‌ಪಿ ಸಿಂಗ್ ತಿಳಿಸಿದರು.

‘ಅಂತಿಮ ಇಲೆವೆನ್‌ನಲ್ಲಿ ಅವ ಕಾಶ ಪಡೆದರೆ ಚಾವ್ಲಾ ಭಾರ ತದ ಗೆಲುವಿಗೆ ತಮ್ಮ ಕೊಡುಗೆ ನೀಡುವುದು ಖಚಿತ’ ಎಂದು ಅವರ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.