ADVERTISEMENT

ಚಿನ್ನಕ್ಕಾಗಿ ಸಿಂಧು, ಸೈನಾ ಸೆಣಸು

ಬ್ಯಾಡ್ಮಿಂಟನ್‌: ಫೈನಲ್‌ನಲ್ಲಿ ಶ್ರೀಕಾಂತ್‌–ಲೀ ಚಾಂಗ್‌ ವೀ ಪೈಪೋಟಿ

ಪಿಟಿಐ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು
ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು   

ಗೋಲ್ಡ್‌ ಕೋಸ್ಟ್‌: ಭಾರತದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಸೈನಾ 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಚಿನ್ನ ಗೆದ್ದಿದ್ದರು. ಸಿಂಧು, 2014ರ ಕೂಟದಲ್ಲಿ ಕಂಚಿನ ಸಾಧನೆ ಮಾಡಿದ್ದರು.

ಹೋದ ವರ್ಷದ ನವೆಂಬರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಉಭಯ ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಆಗ ಸೈನಾ ವಿಜಯಿಯಾಗಿದ್ದರು.

ADVERTISEMENT

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಪೈಪೋಟಿಯಲ್ಲಿ ಸಿಂಧು 21–18, 21–8ರಿಂದ ಮೈಕೆಲ್ಲೆ ಲೀ ಅವರಿಗೆ ಆಘಾತ ನೀಡಿದರು. 2014ರ ಗ್ಲಾಸ್ಗೊ ಕೂಟದಲ್ಲಿ ಮೈಕೆಲ್ಲೆ ಚಿನ್ನ ಗೆದ್ದಿದ್ದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಮೂರನೆ ಸ್ಥಾನ ಹೊಂದಿರುವ ಸಿಂಧು ಮೊದಲ ಗೇಮ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಹೀಗಾಗಿ 18–18ರಲ್ಲಿ ಸಮಬಲ ಕಂಡುಬಂತು. ನಂತರ ಚುರುಕಾಗಿ ಮೂರು ಪಾಯಿಂಟ್ಸ್‌ ಕಲೆಹಾಕಿದ ಸಿಂಧು ಗೇಮ್‌ ಜಯಿಸಿ 1–0ರ ಮುನ್ನಡೆ ಗಳಿಸಿದರು.

ಎರಡನೆ ಗೇಮ್‌ನಲ್ಲೂ ಸಿಂಧು ಅಬ್ಬರಿಸಿದರು. ಭಾರತದ ಆಟಗಾರ್ತಿಯ ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಶಕ್ತಿಯುತ ಸ್ಮ್ಯಾಷ್‌ಗಳನ್ನು ರಿಟರ್ನ್‌ ಮಾಡಲು ಪ್ರಯಾಸ ಪಟ್ಟ ಮೈಕೆಲ್ಲೆ ಸುಲಭವಾಗಿ ಸೋಲೊಪ್ಪಿಕೊಂಡರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಸೈನಾ 21–14, 18–21, 21–17ರಲ್ಲಿ ಕ್ರಿಸ್ಟಿ ಗಿಲ್‌ಮೌರ್‌ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಕಿದಂಬಿ ಶ್ರೀಕಾಂತ್‌ 21–10, 21–17ರಲ್ಲಿ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಅವರನ್ನು ಮಣಿಸಿದರು.

ಫೈನಲ್‌ನಲ್ಲಿ ಶ್ರೀಕಾಂತ್‌, ಮಲೇಷ್ಯಾದ ಲೀ ಚಾಂಗ್‌ ವೀ ವಿರುದ್ಧ ಸೆಣಸಲಿದ್ದಾರೆ.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಕಂಚಿನ ಸಾಧನೆ ಮಾಡಿದರು.

ಅಶ್ವಿನಿ ಮತ್ತು ಸಿಕ್ಕಿ 21–19, 21–19ರಲ್ಲಿ ಸೆತ್ಯಾನ ಮಪಾಸ ಮತ್ತು ಗ್ರೊನ್ಯಾ ಸೊಮರ್‌ವಿಲ್ಲೆ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಸಾಯಿರಾಜ್‌ 19–21, 19–21ರಲ್ಲಿ ಪೆಂಗ್‌ ಸೂನ್‌ ಚಾನ್‌ ಮತ್ತು ಲಿಯು ಯಿಂಗ್‌ ಗೊಹ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.