ADVERTISEMENT

ಚುಟುಕು ಗುಟುಕು ಕ್ರೀಡಾ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ರೆಫರಿ ಪರೀಕ್ಷೆಗೆ ಅರ್ಜಿ ಆಹ್ವಾನ
ಬೆಂಗಳೂರು:
ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯು (ಕೆಎಸ್‌ಎಫ್‌ಎ) ಏಪ್ರಿಲ್‌ನಲ್ಲಿ ರೆಫರಿಗಳ ಆಯ್ಕೆಗೆ ಪರೀಕ್ಷೆ ನಡೆಸಲಿದೆ. 18 ವರ್ಷದಿಂದ 28 ವರ್ಷದೊಳಗಿನವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಫುಟ್‌ಬಾಲ್ ಬಗ್ಗೆ ಆಸಕ್ತಿ ಹೊಂದಿದವರು ಸಹ ಅರ್ಜಿ ಹಾಕಬಹುದು. ಮಾರ್ಚ್ ತಿಂಗಳಲ್ಲಿ ತರಗತಿಗಳನ್ನು ಏರ್ಪಡಿಸಲಾಗುತ್ತದೆ ಎಂದು ಕೆಎಸ್‌ಎಫ್‌ಎ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗೆ ಕೆಎಸ್‌ಎಫ್‌ಎ ರೆಫರಿ ಮಂಡಳಿ ಮುಖ್ಯಸ್ಥ ಎಂ.ಎಸ್. ಕೃಷ್ಣಮೂರ್ತಿ (9880179080), ಆಡಳಿತಾಧಿಕಾರಿ ಎಂ.ಆರ್. ರಂಗನಾಥ್ (9880649888) ಅವರನ್ನು ಸಂಪರ್ಕಿಸಬಹುದು. ಫುಟ್‌ಬಾಲ್ ಸಂಸ್ಥೆಯ ಕಚೇರಿ ಸಂಖ್ಯೆ 080-25512996.

ಗಾಲ್ಫ್: ಚಿಕ್ಕರಂಗಪ್ಪ ಚಾಂಪಿಯನ್
ಬೆಂಗಳೂರು:
ಯುವ ಗಾಲ್ಫರ್ ಎಸ್. ಚಿಕ್ಕರಂಗಪ್ಪ ಇಲ್ಲಿ ಕೊನೆಗೊಂಡ ಗವರ್ನರ್ ಕಪ್ ಗಾಲ್ಫ್  ಟೂರ್ನಿಯಲ್ಲಿ ಚಾಂಪಿಯನ್ ಆದರು. ಕರ್ನಾಟಕ ಗಾಲ್ಫ್  ಕ್ಲಬ್ ಕೋರ್ಸ್‌ನಲ್ಲಿ ಭಾನುವಾರ ಚಿಕ್ಕರಂಗಪ್ಪ ಸ್ಪರ್ಧೆ ಕೊನೆಗೊಳಿಸಲು 67 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಒಟ್ಟು 135 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಅದಿತಿ ಅಶೋಕ್ 69 ಸ್ಟ್ರೋಕ್‌ಗಳೊಂದಿಗೆ ಸ್ಪರ್ಧೆ ಕೊನೆಗೊಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕೊಕ್ಕೊ: ಪಂಜಾಬ್ ಶುಭಾರಂಭ
ಬೆಂಗಳೂರು:
ಪಂಜಾಬ್ ತಂಡದವರು ಭಾರತ ಕೊಕ್ಕೊ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ಆರಂಭವಾದ 23ನೇ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಶುಭಾರಂಭ ಮಾಡಿದರು.

ನಗರದ ಹೊಂಬೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ 18-1ಪಾಯಿಂಟುಗಳಿಂದ ಉತ್ತರಖಾಂಡ ತಂಡವನ್ನು ಮಣಿಸಿತು. ಇತರ ಪಂದ್ಯಗಳಲ್ಲಿ ಕೇರಳ 22-10ರಲ್ಲಿ ಪುದುಚೇರಿ ಮೇಲೂ, ಬಿಹಾರ್ 13-5ರಲ್ಲಿ ಜಾರ್ಖಂಡ್ ವಿರುದ್ಧವೂ ಜಯಿಸಿತು.

ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಪಶ್ಚಿಮ ಬಂಗಾಳ 13-3ರಲ್ಲಿ ಹಿಮಾಚಲ ಪ್ರದೇಶದ ಮೇಲೂ, ಆಂಧ್ರ ಪ್ರದೇಶ 13-5ರಲ್ಲಿ ಮಧ್ಯ ಪ್ರದೇಶ ವಿರುದ್ಧವೂ, ರಾಜಸ್ತಾನ 11-9ರಲ್ಲಿ ಜಾರ್ಖಂಡ್ ಮೇಲೂ ಗೆಲುವು ಸಾಧಿಸಿತು. ಪುರುಷರ ಹಾಗೂ ಮಹಿಳಾ ವಿಭಾಗದ ಪಂದ್ಯಗಳು ಫೆಬ್ರುವರಿ 14ರಂದು ಆರಂಭವಾಗಲಿದೆ.

ಮಾಜಿ ಟಿಟಿ ಆಟಗಾರ ಸುರೇಶ್ ನಿಧನ
ಬೆಂಗಳೂರು:
ಮಾಜಿ ಟೇಬಲ್ ಟೆನಿಸ್ ಆಟಗಾರ ಸಿ.ಎಸ್. ಸುರೇಶ್ (46) ಭಾನುವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸುರೇಶ್ ನಿಧನಕ್ಕೆ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಸಂತಾಪ ಸೂಚಿಸಿದೆ.

ಪಾರಾದ ಕ್ರಿಕೆಟ್ ಆಟಗಾರರು
ದುಬೈ (ಪಿಟಿಐ):
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರರಿದ್ದ ಟ್ಯಾಕ್ಸಿಯ ಬಾನೆಟ್ ಮೇಲಕ್ಕೆ ಕಿತ್ತು ಬಂದ ಆಕಸ್ಮಿಕ ಘಟನೆ ಶನಿವಾರ ಸಂಜೆ ನಡೆದಿದೆ.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸರಣಿಯನ್ನಾಡಲು ಇಂಗ್ಲೆಂಡ್ ತಂಡ ಇಲ್ಲಿ ಬೀಡು ಬಿಟ್ಟಿದೆ. ಈ ತಂಡದ ಸ್ಟುವರ್ಟ್ ಬ್ರಾಡ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್ ಹಾಗೂ ಮಾಂಟಿ ಪನೇಸರ್ ಈ ಟ್ಯಾಕ್ಸಿಯಲ್ಲಿದ್ದರು. ಅದೃಷ್ಟವಶಾತ್ ಆಟಗಾರರಿಗೆ ಯಾವುದೇ ಗಾಯವಾಗಿಲ್ಲ.
ಘಟನೆ ನಡೆಯುವ ಸಂದರ್ಭ ಟ್ಯಾಕ್ಸಿ ಗಂಟೆಗೆ 100 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ನಂತರ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಚಾಲಕ ಯಶಸ್ವಿಯಾದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.