ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಚೆಸ್‌: ಜಂಟಿ ಮುನ್ನಡೆಯಲ್ಲಿ ಗ್ರೋವರ್‌
ಗುಡಗಾಂವ್‌ (ಪಿಟಿಐ):
ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಗ್ರೋವರ್‌ ಇಲ್ಲಿ ನಡೆಯುತ್ತಿರುವ ಗುಡಗಾಂವ್‌ ಅಂತರರಾಷ್ಟ್ರೀಯ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಜಂಟಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಭಾನುವಾರ ನಡೆದ ಆರನೇ ಸುತ್ತಿನ ಪಂದ್ಯದಲ್ಲಿ ಅವರು ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ ಅಲೆಕ್ಸಾಂಡರ್‌ ಎವ್ಡೊಕಿಮೊವ್‌ ಎದುರು ಡ್ರಾ ಸಾಧಿಸಿದರು. 17ನೇ ನಡೆ ಬಳಿಕ ಉಭಯ ಆಟಗಾರರು ಈ ನಿರ್ಧಾರಕ್ಕೆ ಬಂದರು. ಈ ಮೂಲಕ ಪಾಯಿಂಟ್‌ ಹಂಚಿಕೊಂಡರು. ಸಹಜ್‌ ಬಳಿ ಈಗ ಒಟ್ಟು 5.5 ಪಾಯಿಂಟ್‌ಗಳಿವೆ. ಅಲೆಕ್ಸಾಂಡರ್‌ ಕೂಡ ಇಷ್ಟೇ ಪಾಯಿಂಟ್‌ ಹೊಂದಿದ್ದಾರೆ.

ಬ್ಯಾಡ್ಮಿಂಟನ್‌: ಆದಿತ್ಯಗೆ ಅಗ್ರರ್‍ಯಾಂಕ್‌
ನವದೆಹಲಿ:
ಆದಿತ್ಯ ಜೋಶಿ ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ.

ಮಧ್ಯಪ್ರದೇಶದ ಆದಿತ್ಯ ಹೋದ ವರ್ಷ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಆಗಿದ್ದರು.

ಟೆನಿಸ್‌: ನಡಾಲ್‌ಗೆ ಪ್ರಶಸ್ತಿ
ದೋಹಾ (ರಾಯಿಟರ್ಸ್‌):
ಸ್ಪೇನ್‌ನ ರಫೆಲ್‌ ನಡಾಲ್‌ ಇಲ್ಲಿ ನಡೆದ ಕತಾರ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.
ನಡಾಲ್‌ ಫೈನಲ್‌ನಲ್ಲಿ 6–1, 6–7, 6–2ರಲ್ಲಿ ಹೋದ ಬಾರಿಯ ಚಾಂಪಿಯನ್‌ ಫ್ರಾನ್ಸ್‌ನ ಗೇಲ್‌ ಮೊನ್‌ಫಿಲ್ಸ್‌ ಎದುರು ಗೆದ್ದರು. ಇದು ಅವರ ಪಾಲಿನ 61ನೇ ಪ್ರಶಸ್ತಿ.

‘ಈ ಋತುವಿನಲ್ಲಿ ಉತ್ತಮ ಆರಂಭ ಲಭಿಸಿದೆ. ಇದೇ ಮೊದಲ ಬಾರಿಗೆ ಗೆಲುವಿನ ಆರಂಭ ಪಡೆದಿದ್ದೇನೆ. ಪ್ರತಿ ಪ್ರಶಸ್ತಿಗಳು ಕೂಡ ಮಹತ್ವ ಹೊಂದಿವೆ’ ಎಂದು ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ರಫೆಲ್‌ ಹೇಳಿದ್ದಾರೆ.

ಬ್ಯಾಸ್ಕೆಟ್‌ಬಾಲ್: ಕರ್ನಾಟಕಕ್ಕೆ ಸೋಲು
ಅಹಮದಾಬಾದ್‌:
ಕರ್ನಾಟಕ ಮಹಿಳಾ ತಂಡ ಇಲ್ಲಿ ನಡೆಯುತ್ತಿರುವ 28ನೇ ಫೆಡರೇಷನ್‌ ಕಪ್‌ ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯಲ್ಲಿ ಭಾನುವಾರ 37–74 ಪಾಯಿಂಟ್‌ ಗಳಿಂದ ದೆಹಲಿ ಎದುರು ನಿರಾಸೆ ಅನುಭವಿಸಿತು.

ಕೆ. ಮಧು 34 ಪಾಯಿಂಟ್ಸ್‌ ಗಳಿಸಿ ದೆಹಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.