ADVERTISEMENT

ಚುಟುಕು- ಗುಟುಕು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಟೆನಿಸ್: ದಿವಿಜ್-ಪುರವ್ `ರನ್ನರ್ ಅಪ್'
ಲಿಯೊನ್, ಮೆಕ್ಸಿಕೊ (ಪಿಟಿಐ): ಭಾರತದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಇಲ್ಲಿ ನಡೆದ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ `ರನ್ನರ್ ಅಪ್' ಆದರು.

ಫೈನಲ್ ಹಣಾಹಣಿಯಲ್ಲಿ ಭಾರತದ ನಾಲ್ಕನೇ ಶ್ರೇಯಾಂಕದ ಜೋಡಿ 3-6, 5-7ರಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಗುಸಿಯೋನ್-ಮ್ಯಾಟ್ ರೀಡ್ ಎದುರು ಪರಾಭವ ಕಂಡಿತು. ಹೋದ ತಿಂಗಳು ನಡೆದ ಕ್ಯೋಟೊ ಚಾಲೆಂಜರ್ ಟೂರ್ನಿಯಲ್ಲಿ ದಿವಿಜ್-ಪುರವ್ ಜೋಡಿ ಇದೇ ಆಟಗಾರರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ಸುನಿಲ್ ಚೆಟ್ರಿಗೆ ವೀಸಾ ನಿರಾಕರಣೆ
ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಮತ್ತು ಚರ್ಚಿಲ್ ಬ್ರದರ್ಸ್ ತಂಡದ ಇಬ್ಬರಿಗೆ ಮುಂಬೈನಲ್ಲಿರುವ ಸಿಂಗಪುರದ ರಾಯಭಾರಿ ಕಚೇರಿಯು ಯಾವುದೇ ಕಾರಣ ನೀಡದೇ ವೀಸಾ ನಿರಾಕರಿಸಿದೆ.

ಗೋವಾದ ಚರ್ಚಿಲ್ ಬ್ರದರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸುನಿಲ್ ಚೆಟ್ರಿ, ಎಎಫ್‌ಸಿ ಕಪ್ ಟೂರ್ನಿಯಲ್ಲಿ ಸಿಂಗಪುರದ ವಾರಿಯರ್ಸ್ ಫುಟ್‌ಬಾಲ್ ಕ್ಲಬ್ ವಿರುದ್ಧ ಏಪ್ರಿಲ್ 10ರಂದು ನಡೆಯಲಿರುವ ಪಂದ್ಯದಲ್ಲಿ ಆಡಲು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಚರ್ಚಿಲ್‌ನ ಬ್ರದರ್ಸ್ ತಂಡದ ಸದಸ್ಯರಾದ ಆಫ್ಘಾನಿಸ್ತಾನದ ಬಲಾಲ್ ಅರೆಜೌ ಮತ್ತು ತಂಡದ ಅಧ್ಯಕ್ಷ ಅಲೆಮಾವೋ ಅವರಿಗೂ ವೀಸಾ ನಿರಾಕರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ತಂಡದ ಅಧಿಕಾರಿಯೊಬ್ಬರು, `ಮೂವರಿಗೂ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸಿಂಗಪುರ ರಾಯಭಾರಿ ಕಚೇರಿ ಪತ್ರ ಬರೆದಿದೆ. ಆದರೆ, ನಿರಾಕರಿಸಿದ್ದಕ್ಕೆ ಯಾವುದೇ ಕಾರಣ ಕೊಟ್ಟಿಲ್ಲ. ಚೆಟ್ರಿ, ಅರೆಜೌ ಮತ್ತು ಅಲೆಮಾವೋ ವೀಸಾ ಕೋರಿ ಪುನಃ ಅರ್ಜಿ ಸಲ್ಲಿಸಲಿದ್ದಾರೆ' ಎಂದು ಹೇಳಿದರು. ತಂಡದ ಉಳಿದ ಆಟಗಾರರು ಭಾನುವಾರ ಸಿಂಗಪುರಕ್ಕೆ ತೆರಳಿದರು.

ಹಾಕಿ: ಬಿಪಿಸಿಎಲ್‌ಗೆ ಗೆಲುವು
ಬೆಂಗಳೂರು: ಬಿಪಿಸಿಎಲ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಓಜೋನ್ ಗ್ರೂಪ್' ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ 8-3ಗೋಲುಗಳಿಂದ ಎಎಸ್‌ಸಿ ಎದುರು ಗೆಲುವಿನ ನಗೆ ಬೀರಿದರು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಅಮರ್ ಅಯ್ಯಮ್ಮ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರೆ, 58ನೇ ನಿಮಿಷದಲ್ಲಿ ಎರಡನೇ ಗೋಲು ತಂದಿತ್ತರು. ಈ ತಂಡದ ಇನ್ನುಳಿದ ಗೋಲುಗಳನ್ನು ವಿಲಿಯಮ್ ಕ್ಸಲ್ಕೊ (29ನೇ ನಿ.), ಹರಿಪ್ರಸಾದ್ (40ನೇ ನಿ.), ಗುರ್‌ಪ್ರೀತ್ ಸಿಂಗ್ (42, 45ನೇ ನಿ.), ತುಷಾರ್ ಖಾಡೇಕರ್ (43ನೇ ನಿ.) ಹಾಗೂ ರವಿಪಾಲ್ ಸಿಂಗ್ (63ನೇ ನಿ) ಗಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಐಒಸಿಎಲ್ 6-4ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಎದುರು ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.