ADVERTISEMENT

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST

ಚೆಸ್: ಆನಂದ್‌ಗೆ ಸೋಲು
ಪ್ಯಾರಿಸ್ (ಪಿಟಿಐ):
ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ `ಅಲೆಖೈನ್ ಮೆಮೋರಿಯಲ್ ಚೆಸ್ ಟೂರ್ನಿ'ಯ ಮೊದಲ ಸುತ್ತಿನಲ್ಲೇ ಸೋತರು. ಸೋಮವಾರ ನಡೆದ ಪಂದ್ಯದಲ್ಲಿ ಅವರು ಇಂಗ್ಲೆಂಡ್‌ನ ಮೈಕೆಲ್ ಆಡಮ್ಸ ವಿರುದ್ಧ ಸೋಲು ಕಂಡರು.

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಮೈಕೆಲ್, ಆನಂದ್‌ಗೆ ಮುನ್ನಡೆ ಸಾಧಿಸಲು ಅವಕಾಶ ಕೊಡಲೇ ಇಲ್ಲ. ಒಟ್ಟು 56 ನಡೆಗಳನ್ನು ಕಂಡ ಪಂದ್ಯದಲ್ಲಿ ಗೆಲುವು ಕೊನೆಗೆ ಮೈಕೆಲ್ ಪಾಲಾಯಿತು.

ಮತ್ತೊಂದು ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್, ಅರ್ಮೇನಿಯಾದ ಲೆವೋನ್ ಅರೋನಿಯನ್ ವಿರುದ್ಧ ಜಯ ಸಾಧಿಸಿದರು. ಅಂತೆಯೇ, ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್, ತಮ್ಮದೇ  ದೇಶದವರಾದ ನಿಕಿತಾ ವಿಟುಯಿಗೋವ್ ವಿರುದ್ಧ ಗೆದ್ದರು.

ಉಳಿದಂತೆ, ರಷ್ಯಾದ ಪೀಟರ್ ಸ್ವಿಡ್ಲರ್ ಮತ್ತು ಇಸ್ರೇಲ್‌ನ ಬೋರಿಸ್ ಗೆಲ್‌ಫ್ಯಾಂಡ್ ನಡುವಿನ ಪಂದ್ಯ, ಅಂತೆಯೇ ಫ್ರಾನ್ಸ್‌ನ ಮಾಕ್ಸಿಮ್ ವಶೀರ್ ಲಾಗ್ರೇವ್ ಮತ್ತು ಲಾರೆಟ್ ಫ್ರೆಸ್ಸಿನೆಟ್ ನಡುವಿನ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು.

ಆರ್ಥಿಕ ಹೊರೆ ತಡೆಯಲು ಬಿಸಿಸಿಐ ಕ್ರಮ
ನವದೆಹಲಿ (ಪಿಟಿಐ)
: ಇನ್ನುಮುಂದೆ ಐಪಿಎಲ್ ಪಂದ್ಯಗಳಲ್ಲಿ ಭಾರತೀಯ ಕ್ರಿಕೆಟಿಗರು ಗಾಯಗೊಂಡರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್‌ಸಿಎ) ಪಡೆಯುವ ಚಿಕಿತ್ಸೆಯ ವೆಚ್ಚಕ್ಕೆ ಅವರು ತಮ್ಮ ಫ್ರಾಂಚೈಸ್‌ಗಳನ್ನೇ ಅವಲಂಬಿಸಬೇಕಾಗುತ್ತದೆ.
ಚೆನ್ನೈನಲ್ಲಿ ಸೋಮವಾರ ನಡೆದ ಎನ್‌ಸಿಎ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಬಿಸಿಸಿಐ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಲು ಸಮಿತಿಯ ಸದಸ್ಯರು ಕೆಲವು ಮಿತವ್ಯಯದ ಮಾರ್ಗಗಳನ್ನು ಪ್ರಸ್ತಾಪಿಸಿದರು.

ಸಭೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದರು.

ಒಂದು ಮೂಲದ ಪ್ರಕಾರ ಬಿಸಿಸಿಐ ತರಬೇತಿ ಮತ್ತು ಆಡಳಿತ ಸಿಬ್ಬಂದಿಯ ವೇತನ ಪಾವತಿಗಾಗಿಯೇ ಬರೋಬ್ಬರಿ ರೂ. 5.5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

ಇದೇವೇಳೆ, ಎನ್‌ಸಿಎಯ ಸಹಾಯಕ ಸಿಬ್ಬಂದಿಯ ಸಂಖ್ಯೆಯನ್ನು 12ರಿಂದ ಆರಕ್ಕೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.