ADVERTISEMENT

ಚೆನ್ನೈ ಸೂಪರ್ ಕಿಂಗ್ಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST

ಜೈಪುರ (ಪಿಟಿಐ): ಅನಿರುದ್ಧ್ ಶ್ರೀಕಾಂತ್ ಮತ್ತು ಅಲ್ಬಿ ಮಾರ್ಕೆಲ್ ಕೊನೆಯಲ್ಲಿ ತೋರಿದ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿತು.

ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿತು. ಮಹೇಂದ್ರ ಸಿಂಗ್ ದೋನಿ ಬಳಗ 18.1 ಓವರ್‌ಗಳಲ್ಲಿ 6 ವಿಕೆಟ್‌ಗೆ 127 ರನ್ ಗಳಿಸಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಸೂಪರ್ ಕಿಂಗ್ಸ್ ತಂಡದ `ಪ್ಲೇ ಆಫ್~ ಪ್ರವೇಶದ ಸಾಧ್ಯತೆ ಜೀವಂತವಾಗಿ ಉಳಿದಿಕೊಂಡಿದೆ.

ಸುಲಭ ಗುರಿ ಬೆನ್ನಟ್ಟಿದ ಸೂಪರ್ ಕಿಂಗ್ಸ್ ತಂಡ ಮುರಳಿ ವಿಜಯ್ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ಮಾರ್ಕೆಲ್ (18, 6 ಎಸೆತ, 1 ಬೌಂ, 2 ಸಿಕ್ಸರ್) ಮತ್ತು ಅನಿರುದ್ಧ್ (18, 6 ಎಸೆತ, 1 ಬೌಂ, 2 ಸಿಕ್ಸರ್) ಅಜೇಯ ಆಟದ ಮೂಲಕ ರಾಯಲ್ಸ್ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು. ಇವರಿಬ್ಬರು ಮುರಿಯದ ಏಳನೇ ವಿಕೆಟ್‌ಗೆ 1.5 ಓವರ್‌ಗಳಲ್ಲಿ 43 ರನ್‌ಗಳನ್ನು ಸೇರಿಸಿದರು.

ಮಳೆ ಅಡ್ಡಿ: ಮಳೆಯ ಕಾರಣ ಪಂದ್ಯ ತಡವಾಗಿ ಆರಂಭವಾಗಿತ್ತು. ಮಾತ್ರವಲ್ಲ ರಾಯಲ್ಸ್ ಇನಿಂಗ್ಸ್ ವೇಳೆ ಪದೇ ಪದೇ ಮಳೆ ಅಡ್ಡಿಪಡಿಸಿತು. ಇದು ಆತಿಥೇಯ ತಂಡದ ಬ್ಯಾಟಿಂಗ್ ಮೇಲೂ ಪರಿಣಾಮ ಬೀರಿತು. ಟಾಸ್ ಗೆದ್ದು ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ದೋನಿ ಕ್ರಮ ಸರಿಯಾಗಿತ್ತು.

ಬೆನ್ ಹಿಲ್ಫೆನ್ಹಾಸ್ (8ಕ್ಕೆ 2) ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದರು. ಹಾಗಾಗಿ ರಾಯಲ್ಸ್ ತಂಡ ನಾಯಕ ರಾಹುಲ್ ದ್ರಾವಿಡ್ ಹಾಗೂ ಶೇನ್ ವಾಟ್ಸನ್ ಅವರ ವಿಕೆಟ್‌ನ್ನು ಬಹುಬೇಗನೇ ಕಳೆದುಕೊಂಡಿತು. ಅಜಿಂಕ್ಯ ರಹಾನೆ ಅವರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಸಾಧ್ಯವಾಗಲಿಲ್ಲ.

ಸ್ಟುವರ್ಟ್ ಬಿನ್ನಿ (27, 18 ಎಸೆತ, 3 ಬೌಂ, 1 ಸಿಕ್ಸರ್) ಮತ್ತು ಬ್ರಾಡ್ ಹಾಡ್ಜ್ (33, 28 ಎಸೆತ, 2 ಬೌಂ, 1 ಸಿಕ್ಸರ್) ಉತ್ತಮ ಆಟವಾಡಿದ ಕಾರಣ ತಂಡದ ಮೊತ್ತ 100ರ ಗಡಿ ದಾಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.