ADVERTISEMENT

ಚೆಸ್: ಚೆನ್ನೈನಲ್ಲಿ ವಿಶ್ವ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಚೆನ್ನೈ (ಪಿಟಿಐ): ಚೆಸ್ ಆಟಗಾರ ವಿಶ್ವನಾಥನ್ ಆನಂದ್, ತವರಿನಲ್ಲೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವುದನ್ನು ನೋಡುವ ಅವಕಾಶ ಚೆನ್ನೈ ನಿವಾಸಿಗಳಿಗೆ ಒದಗಿದೆ. ನವೆಂಬರ್ ಆರರಿಂದ 26ರವರೆಗೆ ನಗರದಲ್ಲಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಟೂರ್ನಿ ಆಯೋಜಿಸಲಾಗಿದೆ.

ಈ ವಿಶ್ವ ಚಾಂಪಿಯನ್‌ಷಿಪ್‌ಗೆ ತಮಿಳುನಾಡು ಸರ್ಕಾರ 29 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೋಮವಾರ ವಿಧಾನಸಭೆಯಲ್ಲಿ ಹೇಳಿದರು.

ಕಳೆದ ಬಾರಿಯ ಟೂರ್ನಿಗೇ ಆತಿಥ್ಯ ವಹಿಸುವ ಉದ್ದೇಶವನ್ನು ತಮಿಳುನಾಡು ಸರ್ಕಾರ ಹೊಂದಿತ್ತು. ಆದರೆ, ಹರಾಜು ಪ್ರಕ್ರಿಯೆಯಲ್ಲಿ, ರಷ್ಯಾ ಟೂರ್ನಿ ಆಯೋಜಿಸುವ ಅವಕಾಶ ಪಡೆಯಿತು.

2011ರಲ್ಲಿ ವಿಶ್ವ ಚೆಸ್ ಫೆಡರೇಷನ್ ಅಧ್ಯಕ್ಷ ಕಿರ್ಸನ್ ಇಲ್ಯುಂಝಿನೋವ್ ತಮ್ಮನ್ನು ಭೇಟಿ ಮಾಡಿ ಚೆನ್ನೈನಲ್ಲಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಆಯೋಜಿಸುವ ಕುರಿತು ಪ್ರಸ್ತಾಪ ಮುಂದಿಟ್ಟಿದ್ದರು. ಈ ವರ್ಷ ಹರಾಜು ನಡೆಸದೇ ಟೂರ್ನಿ ಆಯೋಜನೆಗೆ ಚೆಸ್ ಫೆಡರೇಷನ್ ಒಪ್ಪಿದೆ ಎಂದು ಜಯಲಲಿತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.