ADVERTISEMENT

ಜನರ ಅಭಿನಂದನೆಯೇ ನನಗೆ ಸ್ಫೂರ್ತಿ: ಸುಶೀಲ್ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಬೆಂಗಳೂರು: `ಇಡೀ ದೇಶ ನನ್ನ ಮೇಲೆ ಪದಕದ ಭರವಸೆ ಇಟ್ಟುಕೊಂಡಿದೆ. ಜೊತೆಗೆ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಜನರು ನನಗೆ ನೀಡಿರುವ ಉಡುಗೊರೆ ಇದು. ನಾನು ಕೂಡ ಅವರಿಗೊಂದು ಕೊಡುಗೆ ನೀಡಬೇಕು~

-ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ ಕನಸನ್ನು ಮುನ್ನಡೆಸಲಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ವಿಶ್ವಾಸದ ನುಡಿಗಳಿವು.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸುಶೀಲ್ ಕಂಚಿನ ಪದಕದ ಮೂಲಕ ಕುಸ್ತಿಯಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು. ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ 10 ಚಿನ್ನ ಸೇರಿದಂತೆ 19 ಪದಕ ಗೆದ್ದಿದ್ದು ಅದಕ್ಕೆ ಸಾಕ್ಷಿ. 2010ರಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದು ಐತಿಹಾಸಿಕ ಸಾಧನೆಗೆ ಕಾರಣರಾದರು. ಏಕೆಂದರೆ ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು.

ADVERTISEMENT

ನಜಾಫ್‌ಗಡದ ಸುಶೀಲ್ ತಮ್ಮ ಕೋಚ್ ಸತ್ಪಾಲ್ ಸಿಂಗ್ ಪುತ್ರಿಯನ್ನೇ ವಿವಾಹವಾಗಿದ್ದಾರೆ. ಅಂದ ಹಾಗೆ, ಸುಶೀಲ್ ಅವರ ತಂದೆ ದಿವಾನ್ ಸಿಂಗ್ ದೆಹಲಿ ಸಾರಿಗೆ ನಿಗಮದಲ್ಲಿ ಬಸ್ ಚಾಲಕರಾಗಿದ್ದರು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಮುನ್ನಡೆಸಲು ಅವಕಾಶ ಪಡೆದಿರುವ 29 ವರ್ಷ ವಯಸ್ಸಿನ ಸುಶೀಲ್ `ಪ್ರಜಾವಾಣಿ~ಯೊಂದಿಗೆ ದೂರವಾಣಿ ಮೂಲಕ ತಮ್ಮ ಆ ಖುಷಿ ಹಾಗೂ ಕನಸನ್ನು ಹಂಚಿಕೊಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಮುನ್ನಡೆಸಲು ಲಭಿಸಿರುವ ಅವಕಾಶದ ಬಗ್ಗೆ ಹೇಳಿ?

ಇದೊಂದು ಹೆಮ್ಮೆಯ ವಿಷಯ. ದೇಶದ ಜನರು ನೀಡಿದ ಉಡುಗೊರೆ ಎಂದು ಭಾವಿಸುತ್ತೇನೆ. ನನ್ನ ಮೇಲೆ ದೇಶ ಇಟ್ಟಿರುವ ಭರವಸೆಗೆ ನನಗೆ ಸಿಕ್ಕಿರುವ ಈ ಗೌರವವೇ ಸಾಕ್ಷಿ. ಇದು ನನ್ನಲ್ಲಿ ಮತ್ತಷ್ಟು ಸ್ಫೂರ್ತಿ ಮೂಡಿಸಿದೆ.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೇಲೆ ನಿಮ್ಮಲ್ಲಿ ಆಗಿರುವ ಬದಲಾವಣೆ ಏನು?

ಅಂತಹ ಹೇಳಿಕೊಳ್ಳುವ ಬದಲಾವಣೆಯೇನೂ ಆಗಿಲ್ಲ. ಆದರೆ ನಾನೀಗ ಎದುರಾಳಿ ಸ್ಪರ್ಧಿಗಳ ಬೆಳವಣಿಗೆಯನ್ನು ಲ್ಯಾಪ್‌ಟಾಪ್‌ನಲ್ಲಿ ನೋಡುತ್ತಿರುತ್ತೇನೆ. ಬೀಜಿಂಗ್ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯ ವಿಡಿಯೊವನ್ನು ಪದೇಪದೇ ವೀಕ್ಷಿಸುತ್ತಿರುತ್ತೇನೆ. ಆ ಒಲಿಂಪಿಕ್ಸ್‌ಗೆ ಮುನ್ನ ಕಂಪ್ಯೂಟರ್ ಎಂದರೇನು ಎಂಬುದೇ ನನಗೆ ಸರಿಯಾಗಿ ಗೊತ್ತಿರಲಿಲ್ಲ. ಮತ್ತೊಂದು ವಿಷಯ ಹೇಳಬೇಕೆಂದರೆ ಪಟಿಯಾಲದ ಎನ್‌ಐಎಸ್‌ನಿಂದ ಸ್ಥಳಾಂತರಗೊಂಡ ಮೇಲೆ ನಾನು ಸೋನೆಪತ್‌ನ ಕ್ರೀಡಾ ಹಾಸ್ಟೆಲ್‌ನ್ಲ್ಲಲಿ ಉಳಿದುಕೊಂಡು ಅಭ್ಯಾಸ ನಡೆಸುತ್ತಿದ್ದೇನೆ.

ಭಾರತದಲ್ಲಿ ಕುಸ್ತಿ ಕ್ಷೇತ್ರದಲ್ಲಿ ಈಗ ಯಾವ ರೀತಿ ಬದಲಾವಣೆ ಆಗಿದೆ?

ಹಿಂದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದೇ ದೊಡ್ಡ ವಿಷಯ ಆಗಿತ್ತು. ಆದರೆ ಈಗ ಜನರ ಭಾವನೆಯಲ್ಲಿಯೇ ಬದಲಾವಣೆ ಆಗಿದೆ. ನನ್ನನ್ನು ಮಾತನಾಡಿಸಲು ಮನೆ ಬಳಿ ಬರುವ ಹೆಚ್ಚಿನ ಅಭಿಮಾನಿಗಳು ಹೇಳುವ ಮಾತು `ಸುಶೀಲ್, ಈ ಬಾರಿ ನೀವು ಚಿನ್ನ ಗೆಲ್ಲಲೇಬೇಕು~ ಎಂದು. ಇದರರ್ಥ ಜನರಲ್ಲಿ ಕುಸ್ತಿಪಟುಗಳ ಬಗ್ಗೆ ಭರವಸೆ ಮೂಡಿದೆ. ಕಂಚು, ಬೆಳ್ಳಿ ಬದಲು ಚಿನ್ನದ ನಿರೀಕ್ಷೆಯೇ ಅದಕ್ಕೆ ಸಾಕ್ಷಿ. 2008ರ ಒಲಿಂಪಿಕ್ಸ್‌ನಲ್ಲಿ ಮೂವರು ಸ್ಪರ್ಧಿಸಿದ್ದರು. ಈ ಬಾರಿ ಐದು ಮಂದಿ ಇದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದೀರಿ. ಇವೆರಡರಲ್ಲಿ ನಿಮ್ಮ ಪಾಲಿಗೆ ಯಾವುದು ಸ್ಮರಣೀಯ?

ಎರಡೂ ಸಾಧನೆಗಳು ಸ್ಮರಣೀಯ. ಇವೆರಡನ್ನು ನಾನು ಹೋಲಿಸಲು ಹೋಗುವುದಿಲ್ಲ. ಏಕೆಂದರೆ ಇವು ವಿಭಿನ್ನ ಸ್ಪರ್ಧೆಗಳು. ಆದರೆ ಜನರು ನನ್ನನ್ನು ಒಲಿಂಪಿಕ್ಸ್ ಪದಕ ವಿಜೇತ ಎಂದು ಗುರುತಿಸಲು ಇಷ್ಟಪಡುತ್ತಾರೆ.

ಒಲಿಂಪಿಕ್ಸ್‌ಗೆ ತರಬೇತಿ ಪಡೆದ ಹಾದಿ ಯಾವ ರೀತಿ ಇತ್ತು?

ಅಮೆರಿಕದ ಕೊಲರಡೊದಲ್ಲಿ ವಿದೇಶಿ ಕುಸ್ತಿಪಟುಗಳ ಜೊತೆ ತರಬೇತಿ ನಡೆಸಿದ್ದೇನೆ. ಬೆಲಾರಸ್ ಹಾಗೂ ಸೋನೆಪತ್‌ನಲ್ಲಿ ಸುದೀರ್ಘ ಅಭ್ಯಾಸ ನಡೆಸಿದ್ದೇವೆ. ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿದ್ದೇವೆ.

ಬೀಜಿಂಗ್ ಸಾಧನೆಯನ್ನು ಪುನರಾವರ್ತಿಸುವ ಭರವಸೆ ಇದೆಯಾ?

ಎಲ್ಲರೂ ಮತ್ತೆ ನನ್ನಿಂದ ಪದಕ ನಿರೀಕ್ಷಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಅದು ಸಹಜ ಕೂಡ. ನಾನು ಇಷ್ಟು ದಿನ ಪಡೆದಿರುವ ತರಬೇತಿ ನನಗೆ ತೃಪ್ತಿ ನೀಡಿದೆ. ಜೊತೆಗೆ ಫಿಟ್‌ನೆಸ್ ಸಮಸ್ಯೆ ಇಲ್ಲ. ಆದರೆ ಒಂದು ಸಣ್ಣ ತಪ್ಪು ಪದಕದ ಕನಸಿಗೆ ಅಡ್ಡಗಾಲು ಆಗಬಹುದು. ಹಾಗಾಗಿ ಅತಿಯಾಸೆ ಇಟ್ಟುಕೊಳ್ಳುವುದು ಸರಿಯಲ್ಲ. ಇರಾನ್, ಅಜರ್‌ಬೈಜಾನ್ ಹಾಗೂ ಟರ್ಕಿ ದೇಶದ ಕುಸ್ತಿಪಟುಗಳೇ ನಮ್ಮ ಪ್ರಮುಖ ಎದುರಾಳಿಗಳು.

ನಿಮ್ಮ ಅಭ್ಯಾಸದ ದಿನಚರಿ ಬಗ್ಗೆ ಹೇಳಿ?

ಬೆಳಿಗ್ಗೆ 3 ಗಂಟೆಗೆ ಏಳುತ್ತೇನೆ. 9 ಗಂಟೆಯವರೆಗೆ ಅಭ್ಯಾಸ ನಡೆಸುತ್ತೇನೆ. ಅದರಲ್ಲಿ 6 ಕಿ. ಮೀ. ದೂರ ಓಡುತ್ತೇನೆ. ವಿವಿಧ ದೈಹಿಕ ಕಸರತ್ತು ನಡೆಸುತ್ತೇನೆ. ಮತ್ತೆ ಸಂಜೆ ಎರಡು ಗಂಟೆ ಅಭ್ಯಾಸ ನಡೆಸುತ್ತೇನೆ.

ಸುಶೀಲ್ ರೀತಿ ಮತ್ತೊಬ್ಬ ಚಾಂಪಿಯನ್ ಸೃಷ್ಟಿಯಾಗಲು ಏನು ಮಾಡಬೇಕು?

ಆರಂಭದಿಂದಲೇ ಉತ್ತಮ ಸೌಲಭ್ಯ ನೀಡಬೇಕು. ಆದರೆ ಜೀವನ ಯಾವತ್ತೂ ಐಷಾರಾಮಿ ಅನಿಸಬಾರದು. ಆ ರೀತಿ ಅನಿಸಿದರೆ ನೀವು ಹೋರಾಟದ ಭಾವನೆಯನ್ನು ಕಳೆದುಕೊಳ್ಳುತ್ತೀರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.