ADVERTISEMENT

ಜೀರೊಕ್ಕೆ ಔಟಾದ ಬ್ಯಾಟ್ಸ್‌ಮನ್‌ನಂಥ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:05 IST
Last Updated 24 ಫೆಬ್ರುವರಿ 2011, 18:05 IST

ಬೆಂಗಳೂರು: ಭಾರಿ ನೆಟ್ಸ್ ಪ್ರ್ಯಾಕ್ಟೀಸ್ ಮಾಡಿದ ಬ್ಯಾಟ್ಸ್‌ಮನ್ ಪಂದ್ಯದಲ್ಲಿ ‘ಜೀರೊ’ಕ್ಕೆ ಔಟಾದಾಗ ಹೇಗೆ ಅನಿಸುತ್ತದೆ? ಭಾರಿ ಬೇಸರ! ಅಂಥದೇ ಸ್ಥಿತಿಯನ್ನು ಬಾಗಲಕೋಟೆಯಿಂದ ಉದ್ಯಾನನಗರಿಗೆ ಬಂದು ಟಿಕೆಟ್ ಕೊಳ್ಳಲು ಕಾಯ್ದಿದ್ದ ಕ್ರಿಕೆಟ್ ಅಭಿಮಾನಿಗೂ ಆಯಿತು.

ಭಾರತ-ಇಂಗ್ಲೆಂಡ್ ತಂಡಗಳ ನಡುವಣ ವಿಶ್ವಕಪ್ ‘ಬಿ’ ಗುಂಪಿನ ಲೀಗ್ ಪಂದ್ಯದ ಟಿಕೆಟ್ ಮಾರಾಟ ಗುರುವಾರ ನಡೆಯಲಿದೆ ಎನ್ನುವುದನ್ನು ಪೇಪರ್‌ನಲ್ಲಿ ಓದಿ ತಿಳಿದು, ಬಾಗಲಕೋಟೆ ಜಿಲ್ಲೆಯಿಂದ ಬಂದಿದ್ದ ಯುವಕ ರವೀಶ್ ಗೌಡಗೆ ಬೆಳಿಗ್ಗೆಯೇ ಭಾರಿ ನಿರಾಸೆ.

ಬುಧವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಟಿಕೆಟ್ ಕೌಂಟರ್ ಮುಂದಿನ ಸಾಲಿನಲ್ಲಿ ನಿಂತಿದ್ದ ರವೀಶ್ ಸುಮಾರು ಹದಿನಾರು ತಾಸು ನಿತ್ಯ ಕ್ರಿಯೆಯನ್ನೆಲ್ಲಾ ಮರೆತು ಕಾಯ್ದಿದ್ದ. ಇನ್ನೇನು ಟಿಕೆಟ್ ಮಾರಾಟ ಆರಂಭವಾಗಿತು, ಜನರ ಸಾಲು ಮುಂದೆ ಸಾಗುತ್ತಿದೆ ಎನ್ನುವ ಹೊತ್ತಿಗೆ ಏಳನೇ ನಂಬರ್ ಕೌಂಟರ್‌ನಲ್ಲಿ ನೂಕು ನುಗ್ಗಲು.

ಎಷ್ಟೇ ಕಷ್ಟಪಟ್ಟರೂ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲುವುದು ಕಷ್ಟವಾಯಿತು. ಹಿಂದಿನಿಂದ ಬಂದ ಯುವಕರ ದಂಡೊಂದು ಬಲವನ್ನೆಲ್ಲಾ ಪ್ರಯೋಗಿಸಿ ಮುಂದಿದ್ದವರನ್ನು ಬದಿಗೆ ತಳ್ಳಿತು. ಇನ್ನೊಂದೆಡೆಯಿಂದ ಪೊಲೀಸರು ಲಾಠಿ ಬೀಸತೊಡಗಿದ್ದರು.ಗದ್ದಲದಲ್ಲಿ ರವೀಶ್ ಸಾಲು ತಪ್ಪಿದ. ಆಗ ಪೊಲೀಸನೊಬ್ಬ ಕತ್ತಿನ ಪಟ್ಟಿ ಹಿಡಿದೆಳೆದು ಸಾಲಿನಿಂದ ಹೊರಗೆ ತಳ್ಳಿದ. ಜೊತೆಗೆ ಮೂರು ಬಾರಿ ಕಾಲಿಗೆ ಲಾಠಿ ಪೆಟ್ಟು ಬಿತ್ತು.

ಅಷ್ಟು ದೂರದಿಂದ ಬಂದು ಸಾಲಿನಲ್ಲಿ ಹದಿನಾರು ತಾಸು ಕಾಯ್ದಿದ್ದು ವ್ಯರ್ಥವಾದಾಗ ರವೀಶ್‌ಗೆ ಭಾರಿ ವೇದನೆ. ಜೊತೆಗೆ ಲಾಠಿ ಪೆಟ್ಟಿನ ನೋವು. ತಮಗಾದ ಈ ಕಹಿ ಅನುಭವವನ್ನು ಅವರು ‘ಮೊದಲ ಬಾಲ್‌ಗೆ ಬ್ಯಾಟ್ಸ್‌ಮನ್ ಜೀರೊಕ್ಕೆ ಔಟ್ ಆದಹಾಗೆ ಆಯಿತು’ ಎಂದು ನೋವಿನಲ್ಲಿಯೂ ನಗೆಯನ್ನು ಬೀರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.