ಜೇಟ್ಲಿ: ಪೂರ್ಣ ತೃಪ್ತಿ ಇಲ್ಲ
ನವದೆಹಲಿ (ಪಿಟಿಐ): ಚೆನ್ನೈನಲ್ಲಿ ಭಾನುವಾರ ನಡೆದ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಕಾರ್ಯಕಾರಿ ಸಮಿತಿ ಸಭೆಯಲ್ಲಿನ ನಿರ್ಧಾರಗಳಿಂದ ಮಂಡಳಿಯ ಉಪಾಧ್ಯಕ್ಷ ಅರುಣ್ ಜೇಟ್ಲಿ `ಸಂರ್ಪೂಣವಾಗಿ ತೃಪ್ತಿಯಾಗಿಲ್ಲ. ಈಗ ದಾಲ್ಮಿಯ ಬಂದಿರುವ ಸ್ಥಾನಕ್ಕೆ ಶಶಾಂಕ್ ಮನೋಹರ್ ಹೆಸರನ್ನು ಪ್ರಸ್ತಾಪಿಸಿದ್ದೆ' ಎಂದಿದ್ದಾರೆ.
`ನಾನು ವೈಯಕ್ತಿಕವಾಗಿ ಶಶಾಂಕ್ ಅವರನ್ನು ದಾಲ್ಮಿಯಾ ಸ್ಥಾನದಲ್ಲಿ ನೋಡಲು ಬಯಸಿದ್ದೆ. ಅದಕ್ಕಾಗಿ ಅವರ ಸಮ್ಮತಿಯನ್ನೂ ಪಡೆಯದೆ ಅವರ ಹೆಸರನ್ನು ಸೂಚಿಸಿದ್ದೆ. ಶಶಾಂಕ್ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವವರು' ಎಂದು ಜೈಟ್ಲಿ ತಿಳಿಸಿದ್ದಾರೆ.
`ಮಂಡಳಿಯ ಹೆಚ್ಚಿನ ಸದಸ್ಯರು ಅನುಭವಿ ದಾಲ್ಮಿಯ ಅವರ ಹೆಸರನ್ನು ಒಪ್ಪಿಕೊಂಡರು' ಎಂದೂ ಅವರು ಹೇಳಿದ್ದಾರೆ.
ಚೆಸ್: ಜಂಟಿ ಅಗ್ರಸ್ಥಾನದಲ್ಲಿ ವಿಷ್ಣು
ಅಲ್ಬೆನಾ, ಬಲ್ಗೇರಿಯ (ಪಿಟಿಐ): ಭಾರತದ ವಿ. ವಿಷ್ಣು ಪ್ರಸನ್ನ ಇಲ್ಲಿ ನಡೆಯುತ್ತಿರುವ ಗ್ರಾಂಡ್ ಯೂರೋಪ್ ಅಲ್ಬೆನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಮೂರನೇ ಸುತ್ತಿನ ಬಳಿಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಷ್ಣು ಭಾರತದವರೇ ಆದ ಅನುರಾಗ್ ಮಹಾಮಲ್ ವಿರುದ್ಧ ಗೆಲುವು ಪಡೆದರು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿರುವ ವಿಷ್ಣು ಮೂರು ಪಾಯಿಂಟ್‌ಗಳೊಂದಿಗೆ ಇತರ ಆರು ಸ್ಪರ್ಧಿಗಳ ಜೊತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ರೊಮೇನಿಯದ ಕಾನ್‌ಸ್ಟಾಂಟಿನ್ ಲಲುಲೆಸ್ಕು, ಬಲ್ಗೇರಿಯದ ಬೋರಿಸ್ ಚಟಲ್‌ಬಶೆವ್, ವಾಸಿಲ್ ಸ್ಪಸೋವ್, ಲಾತ್ವಿಯದ ಎವ್ಗೆನಿ ಸ್ವೆಶ್ನಿಕೋವ್ ಮತ್ತು ಅರ್ಜೆಂಟೀನಾದ ಸ್ಯಾಂಡ್ರೊ ಮರೆಕೊ ಅವರೂ ತಲಾ ಮೂರು ಪಾಯಿಂಟ್ ಹೊಂದಿದ್ದಾರೆ.
ಭಾರತದ ಸ್ವಪ್ನಿಲ್ ಧೋಪಡೆ ಮತ್ತು ಅಶ್ವಿನ್ ಜಯರಾಮ್ ತಲಾ 2.5 ಪಾಯಿಂಟ್ ಕಲೆಹಾಕಿದ್ದು, ಇತರ 20 ಸ್ಪರ್ಧಿಗಳ ಜೊತೆ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.