ADVERTISEMENT

ಟೆನಿಸ್‌: ಫೈನಲ್‌ನಲ್ಲಿ ಎಡವಿದ ಸನಮ್‌

ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಭಾರತದ ಸನಮ್‌ ಸಿಂಗ್‌ ಕೆನಡಾದ ಟೊರಾಂಟೊದಲ್ಲಿ ನಡೆದ ಐಟಿಎಫ್‌ ಪುರುಷರ ಫ್ಯೂಚರ್ಸ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿ ‘ರನ್ನರ್‌ ಅಪ್‌’ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಶನಿವಾರ ನಡೆದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಸನಮ್‌ 2–6, 2–6 ರಲ್ಲಿ ಸ್ಥಳೀಯ ಪ್ರತಿಭೆ ಪೀಟರ್‌ ಪೋಲನ್‌ಸ್ಕಿ ಕೈಯಲ್ಲಿ ಪರಾಭವಗೊಂಡರು. ಈ ಮೂಲಕ ಋತುವಿನ ಎರಡನೇ ಪ್ರಸಸ್ತಿ ಗೆಲ್ಲಬೇಕೆಂಬ ಅವರ ಕನಸು ಈಡೇರಲಿಲ್ಲ. ಸನಮ್‌ ಮಾರ್ಚ್‌ ತಿಂಗಳಲ್ಲಿ ಅಮೆರಿಕದಲ್ಲಿ ನಡೆದಿದ್ದ ಐಟಿಎಫ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಶ್ರೀರಾಮ್‌– ರಂಜೀತ್‌ಗೆ ಪ್ರಶಸ್ತಿ: ಭಾರತದ ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ರಂಜೀತ್‌ ಮುರುಗೇಶನ್‌ ಜೋಡಿ ಈಜಿಪ್ಟ್‌ನ ಶರಮ್‌ ಅಲ್‌ ಶೇಖ್‌ನಲ್ಲಿ ನಡೆದ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ 6–4, 7–6 ರಲ್ಲಿ ಈಜಿಪ್ಟ್‌ನ ಕರೀಮ್‌ ಹೊಸಾಮ್‌ ಮತ್ತು ಕರೀಮ್‌ ಮೊಹಮ್ಮದ್‌ ಮಾಮೂನ್‌ ಅವರನ್ನು ಮಣಿಸಿತು.

ಬಾಲಾಜಿ ಇದೇ ಟೂರ್ನಿಯ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದರು. ಅವರು 6–7, 4–6 ರಲ್ಲಿ ಈಜಿಪ್ಟ್‌ನ ಮಾಜೆನ್‌ ಒಸಾಮಾ ಕೈಯಲ್ಲಿ ಪರಾಭವಗೊಂಡಿದ್ದರು.

ಫೈಸಲಾಬಾದ್‌ ತಂಡದ ಆಗಮನ
ಚಂಡೀಗಡ (ಪಿಟಿಐ):
ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಫೈಸಲಾಬಾದ್‌ ತಂಡ ಭಾನುವಾರ ಇಲ್ಲಿಗೆ ಆಗಮಿಸಿತು.

ಆದರೆ ತಂಡದ ಆಟಗಾರರನ್ನು ಚಂಡೀಗಡದಿಂದ ಕೂಡಲೇ ಮೊಹಾಲಿಗೆ ತೆರಳಲು ಸೂಚಿಸಲಾಯಿತು. ಏಕೆಂದರೆ ಆಟಗಾರರಿಗೆ ನೀಡಿರುವ ವೀಸಾದಂತೆ ಮೊಹಾಲಿಯಲ್ಲಿ ಮಾತ್ರ ತಂಗಲು ಅವಕಾಶವಿದೆ. ಇದೀಗ ತಂಡದ ಸದಸ್ಯರು ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದ ಕ್ಲಬ್‌ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಈ ಸಮಸ್ಯೆಯನ್ನು ಬಗೆಹರಿಸಿ ತಂಡಕ್ಕೆ ಚಂಡೀಗಡದ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ಬಿಸಿಸಿಐ ತಿಳಿಸಿದೆ.
ಪಾಕ್‌ ದೇಸಿ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಚಾಂಪಿಯನ್‌ ಆಗಿರುವ ಫೈಸಲಾಬಾದ್‌ ತಂಡ ಅರ್ಹತಾ ಹಂತದ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ. ಮಿಸ್ಬಾ ಉಲ್‌ ಹಕ್‌ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅಂತರ ಎಂಜಿನಿಯರಿಂಗ್‌ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿ
ಬೆಂಗಳೂರು:
ಎಂ.ಎಸ್‌. ರಾಮಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಅಕ್ಟೋಬರ್‌ 7 ರಿಂದ 10ರ ವರೆಗೆ 8ನೇ ಎಂ.ಎಸ್‌. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್‌ ಕಾಲೇಜು ಬ್ಯಾಸ್ಕೆಟ್‌ಬಾಲ್‌ ಟೂರ್ನಿ  (ಪುರುಷ ಮತ್ತು ಮಹಿಳಾ ತಂಡಗಳಿಗೆ) ಆಯೋಜಿಸಲಾಗಿದೆ.

ಆಸಕ್ತ ಕಾಲೇಜಿನ ತಂಡಗಳು ಪ್ರವೇಶಗಳನ್ನು ಸೆಪ್ಟೆಂಬರ್‌ 28ರ ಒಳಗಾಗಿ ಪ್ರಾಂಶುಪಾಲರು, ಎಂಎಸ್‌ಆರ್‌ಐಟಿ, ಎಂ.ಎಸ್‌. ರಾಮಯ್ಯ ನಗರ, ಬೆಂಗಳೂರು– 560054 (ಫ್ಯಾಕ್ಸ್‌: 080– 23603124) ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.