ADVERTISEMENT

ಟೆನಿಸ್: ಕ್ವಾರ್ಟರ್‌ಗೆ ನಡಾಲ್‌, ವೋಜ್ನಿಯಾಕಿ

ಏಜೆನ್ಸೀಸ್
Published 4 ಜೂನ್ 2017, 19:47 IST
Last Updated 4 ಜೂನ್ 2017, 19:47 IST
ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿ ಯಾಕಿ ಆಟದ ವೈಖರಿ. -ರಾಯಟರ್ಸ್ ಚಿತ್ರ
ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿ ಯಾಕಿ ಆಟದ ವೈಖರಿ. -ರಾಯಟರ್ಸ್ ಚಿತ್ರ   

ಪ್ಯಾರಿಸ್‌ (ರಾಯಿಟರ್ಸ್‌/ಎಎಫ್‌ಪಿ): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಹತ್ತನೇ ಪ್ರಶಸ್ತಿ ಗೆದ್ದು ದಾಖಲೆ ಬರೆಯುವ ಹುಮ್ಮಸ್ಸಿನಲ್ಲಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಭಾನುವಾರ ನಡೆದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ನಡಾಲ್‌ 6–1, 6–2, 6–2ರಲ್ಲಿ ತಮ್ಮದೇ ದೇಶದ ರಾಬರ್ಟೊ ಬಟಿಸ್ಟಾ ಅವರನ್ನು ಪರಾಭವ ಗೊಳಿಸಿದರು.ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ನಡಾಲ್‌ ಆರಂಭದಿಂದಲೇ ಅಬ್ಬರದ ಆಟಕ್ಕೆ ಅಣಿಯಾದರು. ಅಂಗಳದಲ್ಲಿ ಪಾದರಸ ದಂತಹ ಚಲನೆಯ ಮೂಲಕ ಗಮನ ಸೆಳೆದ ಅವರು ಸುಲಭವಾಗಿ ಗೇಮ್‌ ಬೇಟೆಯಾಡಿದರು.

ನಡಾಲ್‌ ರ್‍ಯಾಕೆಟ್‌ನಿಂದ ಸಿಡಿಯುತ್ತಿದ್ದ ಶರವೇಗದ ಸರ್ವ್‌ಗಳನ್ನು ಹಿಂತಿರುಗಿಸಲು ಪ್ರಯಾಸ ಪಟ್ಟ 17ನೇ ರ್‍ಯಾಂಕಿಂಗ್‌ನ ಬಟಿಸ್ಟಾ ಸುಲಭವಾಗಿ ಸೆಟ್‌ ಕೈಚೆಲ್ಲಿದರು. ಮೊದಲ ಸೆಟ್‌ ಗೆದ್ದು ವಿಶ್ವಾಸದಿಂದ ಪುಟಿಯುತ್ತಿದ್ದ ನಡಾಲ್‌, ಎರಡನೇ ಸೆಟ್‌ನಲ್ಲೂ ರಾಬರ್ಟೊ ಮೇಲೆ ಸವಾರಿ ಮಾಡಿದರು.

ADVERTISEMENT

ಗ್ರ್ಯಾಂಡ್‌ ಸ್ಲಾಮ್‌ನಲ್ಲಿ 14 ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್‌ ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಅಂಗಳದಲ್ಲಿ ಖುಷಿಯ ಅಲೆ ಏಳುವಂತೆ ಮಾಡಿದರು. ‘ಕ್ಲೇ ಕೋರ್ಟ್‌ ಕಿಂಗ್‌’ ಎಂದೇ ಕರೆಸಿಕೊಳ್ಳುವ ‘ರಫಾ’ ಅಬ್ಬರದ ಮುಂದೆ ಬಟಿಸ್ಟಾ ಮಂಕಾ ದರು.ಮೂರನೇ ಸೆಟ್‌ನಲ್ಲೂ ಬಟಿಸ್ಟಾ ಅವರು ನಡಾಲ್‌ಗೆ ಸಾಟಿಯಾಗಲಿಲ್ಲ.

ಈ ವಿಭಾಗದ ಮತ್ತೊಂದು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟಾ 4–6, 7–6, 6–7, 6–4, 8–6ರಲ್ಲಿ ಕೆನಡಾದ ಮಿಲೊಸ್‌ ರಾವೊನಿಕ್‌ ಅವರನ್ನು ಸೋಲಿಸಿದರು.

ಎಂಟರ ಘಟ್ಟಕ್ಕೆ ವೋಜ್ನಿಯಾಕಿ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿ ಯಾಕಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.

ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಕ್ಯಾರೋಲಿನಾ 6–1, 4–6, 6–2ರಲ್ಲಿ ರಷ್ಯಾದ ಸ್ವೆಟ್ಲಾನ ಕುಜ್ನೆ ತ್ಸೋವಾ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ 2–6, 6–2, 6–4ರಲ್ಲಿ ಆಸ್ಟ್ರೇಲಿಯಾದ ಸಮಂತಾ ಸೊಸುರ್‌ ವಿರುದ್ಧ ಗೆದ್ದರು.

ಎಂಟರ ಘಟ್ಟಕ್ಕೆ ಸಾನಿಯಾ ಜೋಡಿ
ಭಾರತದ ಸಾನಿಯಾ ಮಿರ್ಜಾ ಮತ್ತು  ಕ್ರೊವೇಷ್ಯಾದ ಇವಾನ್‌ ದೊಡಿಗ್‌ ಅವರು ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಾನಿಯಾ ಮತ್ತು ಇವಾನ್‌ 6–2, 6–4ರಲ್ಲಿ ಎಲಿನಾ ಸ್ವಿಟೋಲಿನಾ ಮತ್ತು ಅರ್ಟೆಮ್‌ ಸಿಟಾಕ್‌ ವಿರುದ್ಧ ಗೆದ್ದರು.

ಪುರುಷರ ಡಬಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ರೋಹನ್‌ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕ್ಯುವಾಸ್‌ 6–7, 2–6ರಲ್ಲಿ ಜೆಮಿ ಮರ್ರೆ ಮತ್ತು ಬ್ರುನೊ ಸೊರೆಸ್‌ ವಿರುದ್ಧ ಶರಣಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.