ADVERTISEMENT

ಟೆನಿಸ್‌: ಪ್ರೀ ಕ್ವಾರ್ಟರ್‌ ಫೈನಲ್‌ಗೆ ನಡಾಲ್‌

ಫ್ರೆಂಚ್‌ ಓಪನ್‌ ಟೂರ್ನಿ: ನಾಲ್ಕನೇ ಸುತ್ತು ಪ್ರವೇಶಿಸಿದ ಮರಿಯಾ ಶರಪೋವಾ

ಪಿಟಿಐ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ರಫೆಲ್‌ ನಡಾಲ್ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು. -ರಾಯಿಟರ್ಸ್‌ ಚಿತ್ರ
ರಫೆಲ್‌ ನಡಾಲ್ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು. -ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 11ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಫೆಲ್‌ ನಡಾಲ್‌ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಡಾಲ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ ತಲುಪಿದ್ದಾರೆ.

ಶನಿವಾರ ನಡೆದ ಮೂರನೇ ಸುತ್ತಿನ ಹಣಾಹಣಿಯಲ್ಲಿ ‘ಕ್ಲೇ ಕೋರ್ಟ್‌ ಕಿಂಗ್‌’ ನಡಾಲ್‌ 6–3, 6–2, 6–2ರಲ್ಲಿ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕ್ವೆಟ್‌ ಅವರನ್ನು ಸೋಲಿಸಿದರು. ಈ ಮೂಲಕ ರಿಚರ್ಡ್‌ ವಿರುದ್ಧದ ಗೆಲುವಿನ ದಾಖಲೆಯನ್ನು 16–0ಗೆ ಹೆಚ್ಚಿಸಿಕೊಂಡರು.

ADVERTISEMENT

31ರ ಹರೆಯದ ನಡಾಲ್‌ ಆರಂಭಿಕ ಸೆಟ್‌ನ ಮೊದಲ ಆರು ಗೇಮ್‌ಗಳಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ನಂತರ ಅವರ ಆಟ ರಂಗೇರಿತು. ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಸ್ಥಳೀಯ ಆಟಗಾರ ಗ್ಯಾಸ್ಕ್ವೆಟ್‌ ಅವರನ್ನು ಕಂಗೆಡಿಸಿ 1–0ರ ಮುನ್ನಡೆ ತಮ್ಮದಾಗಿಸಿಕೊಂಡರು.

ಗ್ರ್ಯಾನ್‌ಸ್ಲಾಮ್‌ನಲ್ಲಿ 16 ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿರುವ ನಡಾಲ್‌ ಎರಡನೇ ಸೆಟ್‌ನಲ್ಲೂ ಪರಾಕ್ರಮ ಮೆರೆದರು.

ಮೊದಲ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಅವರು ನಂತರದ ಗೇಮ್‌ನಲ್ಲಿ ರಿಚರ್ಡ್‌ ಅವರ ಸರ್ವ್‌ ಮುರಿದು 2–0ರ ಮುನ್ನಡೆ ಗಳಿಸಿದರು. ನಂತರ ಪರಿಣಾಮಕಾರಿ ಆಟ ಆಡಿದ ಗ್ಯಾಸ್ಕ್ವೆಟ್‌ ಮೂರು ಮತ್ತು ನಾಲ್ಕನೇ ಗೇಮ್‌ಗಳಲ್ಲಿ ನಡಾಲ್‌ಗೆ ಪ್ರಬಲ ಪೈಪೋಟಿ ಒಡ್ಡಿದರು. ಇದರಿಂದ ಎದೆಗುಂದದ ಸ್ಪೇನ್‌ನ ಆಟಗಾರ ‘ರಫಾ’ ಬ್ಯಾಕ್‌ಹ್ಯಾಂಡ್‌, ಫೋರ್‌ಹ್ಯಾಂಡ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಮೂರನೇ ಸೆಟ್‌ನಲ್ಲೂ ನಡಾಲ್‌ ಮೋಡಿ ಮಾಡಿದರು. ದೀರ್ಘ ರ‍್ಯಾಲಿಗಳನ್ನು ಆಡಿದ ಅವರು, ಬೇಸ್‌ಲೈನ್ ಹೊಡೆತಗಳಿಗೂ ಒತ್ತು ನೀಡಿ ಗೇಮ್‌ಗಳನ್ನು ಗೆದ್ದರು. ಈ ಮೂಲಕ ನಿರಾಯಾಸವಾಗಿ ಜಯದ ತೋರಣ ಕಟ್ಟಿದರು. ಇನ್ನೊಂದು ಪಂದ್ಯದಲ್ಲಿ ಮಾರ್ಟೆರರ್‌ 6–2, 6–1, 6–4ರಲ್ಲಿ ಜರ್ಗೆನ್‌ ಜಾಪ್‌ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಡಿಯಾಗೊ ಸ್ವಾರ್ಟ್ಜ್‌ಮನ್‌ 7–5, 6–3, 6–3ರಲ್ಲಿ ಬೋರ್ನಾ ಕೊರಿಕ್‌ ಎದುರೂ, ಕೆವಿನ್‌ ಆ್ಯಂಡರ್‌ಸನ್‌ 6–1, 6–7, 6–3, 7–6ರಲ್ಲಿ ಮಿಶಾ ಜ್ವೆರೆವ್‌ ಮೇಲೂ, ಫಾಬಿಯೊ ಫಾಗ್ನಿನಿ 6–3, 4–6, 3–6, 6–4, 6–4ರಲ್ಲಿ ಕೈಲ್‌ ಎಡ್ಮಂಡ್‌ ವಿರುದ್ಧವೂ, ಕರೆನ್‌ ಕಚನೊವ್‌ 6–3, 7–5, 6–3ರಲ್ಲಿ ಲುಕಾಸ್‌ ಪೌವಿಲ್ ಮೇಲೂ ಗೆದ್ದರು.

ನಾಲ್ಕನೇ ಸುತ್ತಿಗೆ ಶರಪೋವಾ: ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ಮಹಿಳೆಯರ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದರು. ಮೂರನೇ ಸುತ್ತಿನ ಹಣಾಹಣಿಯಲ್ಲಿ ಮರಿಯಾ 6–2, 6–1ರ ನೇರ ಸೆಟ್‌ಗಳಿಂದ ಕ್ಯಾರೋಲಿನ್‌ ಪ್ಲಿಸ್ಕೋವಾ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ 6–0, 6–2ರಲ್ಲಿ ಸಮಂತಾ ಸೊಸುರ್‌ ವಿರುದ್ಧ ಗೆದ್ದರು. ಇತರ ಪಂದ್ಯಗಳಲ್ಲಿ ಎಲಿಸೆ ಮಾರ್ಟೆನ್ಸ್‌ 6–3, 6–1ರಲ್ಲಿ ಡೇರಿಯಾ ಗ್ಯಾವರಿಲೋವಾ ಎದುರೂ, ಲೆಸಿ ಸುರೆಂಕೊ 6–2, 6–4ರಲ್ಲಿ ಮಗ್ದಲೆನಾ ರ‍್ಯಾಬರಿಕೋವಾ ಮೇಲೂ, ಅನೆಟ್‌ ಕೊಂಥಾವೀಟ್‌ 7–6, 7–6ರಲ್ಲಿ ಪೆಟ್ರಾ ಕ್ವಿಟೋವಾ ವಿರುದ್ಧವೂ, ಸ್ಲೋವಾನೆ ಸ್ಟೀಫನ್ಸ್‌ 4–6, 6–1, 8–6ರಲ್ಲಿ ಕ್ಯಾಮಿಲಾ ಜಿಯೊರ್ಜಿ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.