ಲಂಡನ್ (ಪಿಟಿಐ/ಐಎಎನ್‌ಎಸ್): ಭಾರತದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರು ಇಲ್ಲಿ ನಡೆಯುತ್ತಿರುವ ಎಜೋನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದಾರೆ.
ಮೂರನೇ ಶ್ರೇಯಾಂಕ ಹೊಂದಿದ್ದ ಭಾರತದ ಜೋಡಿ 4-6, 2-6 ರಲ್ಲಿ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರ ವಿರುದ್ಧ ನೇರ ಸೆಟ್‌ಗಳಿಂದ ಸೋಲು ಕಂಡಿತು. 41 ನಿಮಿಷಗಳ ಆಟದಲ್ಲಿ ಭೂಪತಿ-ಬೋಪಣ್ಣ ಒಟ್ಟು ಮೂರು ಬಾರಿ `ಡಬಲ್ ಫಾಲ್ಟ್' ಎಸಗಿ ಪಾಯಿಂಟ್ ಕಳೆದುಕೊಂಡರು.
ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬ್ರಯಾನ್ ಸಹೋದರರು ಎದುರಾಳಿಗಳಿಗೆ ಯಾವುದೇ ಬ್ರೇಕ್ ಪಾಯಿಂಟ್ ಬಿಟ್ಟುಕೊಡಲಿಲ್ಲ.
ದಿವಿಜ್-ರಾಜಾಗೆ ಮತ್ತೆ ನಿರಾಸೆ
ನಾಟಿಂಗ್‌ಹ್ಯಾಂ ವರದಿ: ಭಾರತದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಜೋಡಿ ಇಲ್ಲಿ ನಡೆದ ನಾಟಿಂಗ್‌ಹ್ಯಾಂ ಚಾಲೆಂಜರ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋತು `ರನ್ನರ್‌ಅಪ್' ಸ್ಥಾನ ಪಡೆದರು. ಈ ಮೂಲಕ ಪ್ರಸಕ್ತ ಋತುವಿನಲ್ಲಿ ಎರಡನೇ ಟ್ರೋಫಿ ಎತ್ತಿ ಹಿಡಿಯುವ ದಿವಿಜ್-ರಾಜಾ ಕನಸು ಭಗ್ನಗೊಂಡಿದೆ.
ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರರು 6-7, 7-6, 8-10ರಲ್ಲಿ ಥಾಯ್ಲೆಂಡ್‌ನ ಸಂಚಾಯ್ ಹಾಗೂ ಸೊಂಚತ್ ರತಿವತನ ಎದುರು ಸೋಲು ಕಂಡರು. ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರಿಂದ ದಿವಿಜ್ ಹಾಗೂ ರಾಜಾ ತಲಾ 55 ಎಟಿಪಿ ಪಾಯಿಂಟ್‌ಗಳನ್ನು ಗಳಿಸಿದರು. ಈ ಋತುವಿನಲ್ಲಿ ಒಟ್ಟು ನಾಲ್ಕು ಫೈನಲ್‌ನಲ್ಲಿ ಆಡಿರುವ ಇವರು ಒಂದೇ ಬಾರಿ ಟ್ರೋಫಿ ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.