ADVERTISEMENT

ಟ್ರಿನಿಡಾಡ್ ಅಂಡ್ ಟೊಬಾಗೊ ತಂಡಕ್ಕೆ ಮುಂಬೈ ಇಂಡಿಯನ್ಸ್ ಸವಾಲು;

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮೊದಲ ಪಂದ್ಯದಲ್ಲಿ ಗೆಲುವು ಪಡೆದಿರುವ ಮುಂಬೈ ಇಂಡಿಯನ್ಸ್‌ಗೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸ. ಆದರೆ ಅರ್ಹತಾ ಸುತ್ತಿನಲ್ಲಿ ನೀಡಿದ ಪ್ರದರ್ಶನವನ್ನು ಮತ್ತೆ ಪುನರಾವರ್ತಿಸುವ ತವಕ ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದ್ದು.

ಈ ಎರಡೂ ತಂಡಗಳು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದಾಗ ಫಿನಿಕ್ಸ್ ಹಕ್ಕಿಯಂತೆ ಪುಟಿದೆದ್ದು ಬಂದಿದ್ದು ಹರಭಜನ್ ಸಿಂಗ್ ಪಡೆ. ಕಳೆದ ಬಾರಿಯ ಚಾಂಪಿಯನ್ನರನ್ನು ಮಣಿಸಿದ್ದರಿಂದ ಮುಂಬೈ ಇಂಡಿಯನ್ಸ್ ಹೆಚ್ಚು ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಹಾಗೆಂದ ಮಾತ್ರಕ್ಕೆ ಎದುರಾಳಿ ಟ್ರಿನಿಡಾಡ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಆ ತಂಡ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ 2009ರಲ್ಲಿ ರನ್ನರ್ ಅಪ್ ಆಗಿತ್ತು. ಅಷ್ಟೇ ಅಲ್ಲ ಸಂಕಷ್ಟದ ಸಮಯದಲ್ಲೂ ಪುಟಿದೇಳಬಲ್ಲ ಸಾಮರ್ಥ್ಯವಿದೆ ಎನ್ನುವುದನ್ನು ರುಹಾನಾ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತೋರಿಸಿಕೊಟ್ಟಿತ್ತು.

ಆ ಪಂದ್ಯದಲ್ಲಿ ಮಿಂಚಿದ್ದು ಡರೆನ್ ಬ್ರಾವೊ ಹಾಗೂ ಶರ್ವಿನ್ ಗಂಗಾ. ಆದ್ದರಿಂದ ಯಾವುದೇ ಕ್ಷಣದಲ್ಲಿಯೂ ತಿರುಗೇಟು ನೀಡುವ ಸಾಮರ್ಥ್ಯ ಈ ತಂಡಕ್ಕಿದೆ. ಬೌಲಿಂಗ್‌ನಲ್ಲಿ ರವಿ ರಾಂಪಾಲ್ (ಎರಡು ಅರ್ಹತಾ ಪಂದ್ಯಗಳಿಂದ ಒಟ್ಟು 6 ವಿಕೆಟ್) ಟ್ರಿನಿಡಾಡ್‌ನ ಶಕ್ತಿ ಎನಿಸಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲೆಂಡ್ಲ್ ಸಿಮಾನ್ಸ್ ಹಾಗೂ ಅಡ್ರಿಯಾನ್ ಭರತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲೀಸ್ಟರ್‌ಷೈರ್ ವಿರುದ್ಧದ ಅರ್ಹತಾ ಹಂತದ ಪಂದ್ಯದಲ್ಲಿ ಇವರು ಕ್ರಮವಾಗಿ 67 ಹಾಗೂ 62 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಇವರು ಮಿಂಚಿದರೆ ರೋಚಕ ಹೋರಾಟ  ನಿರೀಕ್ಷಿಸಬಹುದು.

ಕೇವಲ ಬೌಲಿಂಗ್ ಮೂಲಕವೇ ಸುದ್ದಿ ಮಾಡುತ್ತಿದ್ದ ಮುಂಬೈ ತಂಡದ ವೇಗಿ ಲಸಿತ್ ಮಾಲಿಂಗ್ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಇದರಿಂದ ಸಾಂದರ್ಭಿಕವಾಗಿ ತಂಡಕ್ಕೆ ನೆರವಾಗುವ ವಿಶ್ವಾಸ ಮೂಡಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಡೇವ್ ಜೇಕಬ್ಸ್ ಹಾಗೂ ಏಡನ್ ಬ್ಲಿಜಾರ್ಡ್ ಮೊದಲ ಪಂದ್ಯದಲ್ಲಿ ಉತ್ತಮ ಬುನಾದಿ ಹಾಕಿದ್ದರು. ಇದಕ್ಕೆ ಮಧ್ಯಮ ಕ್ರಮಾಂಕದ ಕೀರನ್ ಪೊಲಾರ್ಡ್ ಸಾಥ್ ನೀಡಿದ್ದರು. ಇವರ ಆಟ ಇಂದಿನ ಪಂದ್ಯದಲ್ಲಿಯೂ ಪುನರಾವರ್ತನೆಯಾದರೆ ಮುಂಬೈ ತಂಡಕ್ಕೆ ಗೆಲುವು ಕಷ್ಟವೇನಲ್ಲ.

ಇನ್ನೂ ಬೌಲಿಂಗ್ ವಿಭಾಗದಲ್ಲಿ ಮಾಲಿಂಗ ಹಾಗೂ ಅಬು ನಾಚಿಮ್ ಅಹ್ಮದ್ ಎದುರಾಳಿ ತಂಡದ ಮೇಲೆ ಒತ್ತಡ ಹೇರಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ನೀಡಿದ ಪ್ರದರ್ಶನವೇ ಸಾಕ್ಷಿ. ಲಯ ಕಳೆದುಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ನರು ಈ ಪಂದ್ಯದಲ್ಲಿ ಫಾರ್ಮ್‌ಗೆ ಮರಳಲಿದ್ದಾರೆ ಎನ್ನುವ ವಿಶ್ವಾಸ ಇಂಡಿಯನ್ಸ್ ತಂಡದ ನಾಯಕ ಹರಭಜನ್ ಸಿಂಗ್ ಅವರದ್ದು.

ಎರಡೂ ತಂಡಗಳ ಬಲಾಬಲಗಳನ್ನು ಹೋಲಿಸಿ ನೋಡಿದಾಗ ಉಭಯ ತಂಡಗಳ ಸಾಮರ್ಥ್ಯವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಮುಂಬೈ ಇಂಡಿಯ   ನ್ಸ್ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿದ್ದ ಸಚಿನ್ ತೆಂಡೂಲ್ಕರ್ ಈ ಟೂರ್ನಿಯಲ್ಲಿ ಆಡುತ್ತಿಲ್ಲ. ಇಂಗ್ಲೆಂಡ್ ಪ್ರವಾಸದ ವೇಳೆ ಅವರು ಗಾಯಗೊಂಡಿದ್ದಾರೆ. ಇದರ ಜೊತೆಗೆ ರೋಹಿತ್ ಶರ್ಮ ಹಾಗೂ ಮುನಾಫ್ ಪಟೇಲ್ ಅವರ ಅನುಪಸ್ಥಿತಿಯೂ ಕಾಡುತ್ತಿದೆ.

ಎರಡು ದಿನಗಳಿಂದ ಕೆರಿಬಿಯನ್ನರ ನಾಡಿನ ತಂಡವು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದೆ. ಭಾನುವಾರ ಉದ್ಯಾನ ನಗರಿಗೆ ಆಗಮಿಸಿದ ಮುಂಬೈ ತಂಡದ ಆಟಗಾರರು ಕೆಲ ಹೊತ್ತು ಅಭ್ಯಾಸ ಮಾಡಿದರು.

ತಂಡಗಳು
ಮುಂಬೈ ಇಂಡಿಯನ್ಸ್: ಹರಭಜನ್ ಸಿಂಗ್ (ನಾಯಕ), ಡೇವ್ ಜೇಕಬ್ಸ್, ಏಡನ್   ಬ್ಲಿಜಾರ್ಡ್, ಟಿ. ಸುಮನ್, ಅಂಬಟಿ ರಾಯುಡು, ಆ್ಯಂಡ್ರೂ ಸೈಮಂಡ್ಸ್, ಕೀರನ್ ಪೊಲಾರ್ಡ್, ಆರ್. ಸತೀಶ್, ಲಸಿತ್ ಮಾಲಿಂಗ, ಅಬು ನಾಚಿಮ್ ಅಹ್ಮದ್, ಯಜುವೇಂದ್ರ ಸಿಂಗ್ ಚಹಾಲ್.
ಟ್ರಿನಿಡಾಡ್ ಅಂಡ್ ಟೊಬಾಗೊ: ಡರೆನ್ ಗಂಗಾ (ನಾಯಕ), ಲೆಂಡ್ಲ್ ಸಿಮಾನ್ಸ್, ಅಡ್ರಿಯಾನ್ ಭರತ್, ಡರೆನ್ ಬ್ರಾವೊ, ದಿನೇಶ್ ರಾಮ್ದಿನ್, ಜೇಸನ್ ಮೊಹಮ್ಮದ್, ಶರ್ವಿನ್ ಗಂಗಾ, ಕೆವೊನ್ ಕೂಪರ್, ಸ್ಯಾಮುಯೆಲ್ ಬದ್ರಿ, ಸುನಿಲ್ ನರೇನ್, ರವಿ ರಾಂಪಾಲ್.
ಆರಂಭ: ರಾತ್ರಿ 8 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT