ADVERTISEMENT

ಡಿ.23ರಂದು ವಿಜೇಂದರ್‌–ಅಮುಜು ಪೈಪೋಟಿ

ಪಿಟಿಐ
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಡಿ.23ರಂದು ವಿಜೇಂದರ್‌–ಅಮುಜು ಪೈಪೋಟಿ
ಡಿ.23ರಂದು ವಿಜೇಂದರ್‌–ಅಮುಜು ಪೈಪೋಟಿ   

ನವದೆಹಲಿ: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್‌ ಡಿಸೆಂಬರ್‌ 23ರಂದು ಡಬ್ಲ್ಯುಬಿಒ ಓರಿಯಂಟಲ್ ಮತ್ತು ಏಷ್ಯಾ ಫೆಸಿಫಿಕ್‌ ಸೂಪರ್ ಮಿಡ್ಲ್‌ಮೇಟ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಘಾನಾದ ಎರ್ನೆಸ್ಟ್‌ ಅಮುಜು ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಭಾರತದ ಬಾಕ್ಸರ್‌ ವಿಜೇಂದರ್ ಅವರ ಹೋರಾಟಕ್ಕೆ ಜೈಪುರದಲ್ಲಿ ವೇದಿಕೆ ಸಜ್ಜುಗೊಂಡಿದೆ.

ಸತತ ಒಂಬತ್ತು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ವಿಜೇಂದರ್‌ ಆಗಸ್ಟ್‌ನಲ್ಲಿ ನಡೆದ ಹೋರಾಟದಲ್ಲಿ ಚೀನಾದ ಅಗ್ರಗಣ್ಯ ಬಾಕ್ಸರ್‌ ಜುಲ್ಫಿಕರ್ ಮೈಮಿತಾಲಿ ವಿರುದ್ಧ ಜಯದಾಖಲಿಸಿ ಡಬ್ಲ್ಯುಟಿಒ ಓರಿಯಂಟಲ್‌ ಪ್ರಶಸ್ತಿ ಎತ್ತಿಹಿಡಿದಿದ್ದರು.

ADVERTISEMENT

‘ಹತ್ತನೇ ಪೈಪೋಟಿಗಾಗಿ ಉತ್ಸಾಹದಿಂದ ತಯಾರಿ ನಡೆಸಿದ್ದೇನೆ. ಎರಡು ತಿಂಗಳಿನಿಂದ ರಿಂಗ್‌ನಲ್ಲಿ ಬೆವರು ಹರಿಸಿದ್ದೇನೆ. ಪಂದ್ಯಕ್ಕೆ ಮೂರು ವಾರಗಳು ಬಾಕಿ ಇದೆ. ಮೂರನೇ ಪ್ರಶಸ್ತಿ ಗೆದ್ದುಕೊಳ್ಳುವ ಪೂರ್ಣ ವಿಶ್ವಾಸವಿದೆ’ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ವಿಜೇಂದರ್ ಹೇಳಿದ್ದಾರೆ.

ಘಾನಾದ ಬಾಕ್ಸರ್‌ ವೃತ್ತಿಪರ ಬಾಕ್ಸಿಂಗ್‌ನಲ್ಲಿ 26ನೇ ಪೈಪೋಟಿ ನಡೆಸಲಿದ್ದಾರೆ. ಇದರಲ್ಲಿ 23 ಪಂದ್ಯಗಳನ್ನು ಅವರು ಗೆದ್ದುಕೊಂಡಿದ್ದಾರೆ. ವೃತ್ತಿಜೀವನದಲ್ಲಿ ಅವರು ಎರಡು ಪಂದ್ಯಗಳನ್ನು ಮಾತ್ರ ಸೋತಿದ್ದಾರೆ.

‘ವಿಜೇಂದರ್ ಇಲ್ಲಿಯವರೆಗೂ ನನ್ನಷ್ಟು ಕಠಿಣ ಎದುರಾಳಿಯೊಂದಿಗೆ ಆಡಿದ ಅನುಭವ ಹೊಂದಿಲ್ಲ. ನನ್ನ ಎದುರು ಪಂದ್ಯ ಆಡಿದ ಮೇಲೆ ಅವರಿಗೆ ವೃತ್ತಿಪರ ಬಾಕ್ಸಿಂಗ್ ಎಷ್ಟು ಕಷ್ಟ ಎಂಬ ಅರಿವು ಆಗಲಿದೆ’ ಎಂದು 34 ವರ್ಷದ ಎರ್ನೆಸ್ಟ್‌ ಸವಾಲು ಹಾಕಿದ್ದಾರೆ.

‘ವಿಜೇಂದರ್ ಅವರನ್ನು ಮಣಿಸಲು ತಯಾರಿ ನಡೆಸಿದ್ದೇನೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ನಾನು ಪ್ರಬಲ ಎದುರಾಳಿಗಳನ್ನು ಮಣಿಸಿದ್ದರಿಂದ ವಿಶ್ವಾಸ ಹೆಚ್ಚಿದೆ. ಮಧ್ಯಮ ವರ್ಗದವರೂ ಪಂದ್ಯ ನೋಡಬೇಕು. ಹಾಗಾಗಿ ಸಣ್ಣ ನಗರಗಳಲ್ಲಿ ಪೈಪೋಟಿ ನಡೆಸಲು ಇಷ್ಟಪಡುತ್ತೇನೆ. ಜೈಪುರದಂತಹ ನಗರಗಳು ನನ್ನ ನೆಚ್ಚಿನ ತಾಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.