ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿ ಕನಸು

ಪಿಟಿಐ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿ ಕನಸು
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌ಗೆ ಪ್ರಶಸ್ತಿ ಕನಸು   

ಒಡೆನ್ಸೆ (ಪಿಟಿಐ): ಭಾರತದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್‌ ಅವರು ಮಂಗಳವಾರದಿಂದ ನಡೆಯುವ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸರಣಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಟೂರ್ನಿ ಯಲ್ಲಿ ಪ್ರಶಸ್ತಿ ಜಯಿಸುವ ಛಲದೊಂದಿಗೆ ಕಣಕ್ಕಿಳಿಯಲಿದ್ದಾರೆ.

ರಿಯೊ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿ ಗೆದ್ದ ಹಿರಿಮೆ ಹೊಂದಿರುವ ಸಿಂಧು ಈ ವರ್ಷ ನಡೆದ ಇಂಡಿಯಾ ಮತ್ತು ಕೊರಿಯಾ ಓಪನ್‌ ಟೂರ್ನಿಗಳಲ್ಲೂ ಟ್ರೋಫಿಗೆ ಮುತ್ತಿಕ್ಕಿದ್ದರು. ಅಮೋಘ ಲಯದಲ್ಲಿರುವ ಅವರು ಡೆನ್ಮಾರ್ಕ್‌ ಓಪನ್‌ನಲ್ಲೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಸಿಂಧು, ಮೊದಲ ಸುತ್ತಿನಲ್ಲಿ ಚೀನಾದ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿರುವ ಚೆನ್‌ ಯೂಫಿ ವಿರುದ್ಧ ಆಡಲಿದ್ದಾರೆ.

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದ ಸೈನಾ ನೆಹ್ವಾಲ್‌ಗೆ ಆರಂಭಿಕ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. ಅವರು ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ವಿರುದ್ಧ ಸೆಣಸಬೇಕಿದೆ.

ಸೈನಾ ಮತ್ತು ಮರಿನ್‌ ಇದುವರೆಗೂ 8 ಬಾರಿ ಮುಖಾಮುಖಿಯಾಗಿದ್ದು ತಲಾ ನಾಲ್ಕರಲ್ಲಿ ಗೆದ್ದಿದ್ದಾರೆ. ಆದರೆ ಹಿಂದಿನ ಎರಡು ಮುಖಾಮುಖಿಯಲ್ಲಿ ಮರಿನ್‌ ಮೇಲುಗೈ ಸಾಧಿಸಿದ್ದಾರೆ. ಈ ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳಲು ಸೈನಾಗೆ ಈಗ ಉತ್ತಮ ಅವಕಾಶ ಲಭ್ಯವಾಗಿದೆ.

ಶ್ರೀಕಾಂತ್‌ ಮೇಲೆ ಭರವಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಶ್ರೀಕಾಂತ್‌ ಭಾರತದ ಭರವಸೆಯಾಗಿದ್ದಾರೆ.

ಇಂಡೊನೇಷ್ಯಾ ಮತ್ತು ಆಸ್ಟ್ರೇಲಿಯಾ ಓಪನ್ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದ ಅವರು ಇಲ್ಲಿಯೂ ಪ್ರಶಸ್ತಿಗೆ ಮುತ್ತಿಕ್ಕುವ ಛಲದಲ್ಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನ ಹೊಂದಿರುವ ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ ಅರ್ಹತಾ ಹಂತದಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಹೋರಾಡಲಿದ್ದಾರೆ.

ಬಿ.ಸಾಯಿಪ್ರಣೀತ್‌ ಮತ್ತು ಎಚ್‌.ಎಸ್‌.ಪ್ರಣಯ್‌ ಅವರೂ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿದ್ದಾರೆ.

ಸಿಂಗಪುರ ಓಪನ್‌ನ ಫೈನಲ್‌ನಲ್ಲಿ ಶ್ರೀಕಾಂತ್‌ ವಿರುದ್ಧ ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದ ಪ್ರಣೀತ್‌, ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ವಿರುದ್ಧ  ಆಡುವ ಮೂಲಕ ಅಭಿಯಾನ ಆರಂಭಿಸುವರು. ಪ್ರಣಯ್‌ಗೆ ಡೆನ್ಮಾರ್ಕ್‌ನ ಎಮಿಲ್‌ ಹಾಲಸ್ಟ್‌ ಸವಾಲು ಎದುರಾಗಲಿದೆ.

ಸೈಯದ್‌ ಮೋದಿ ಗ್ರ್ಯಾನ್ ‍ಪ್ರಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ಸಮೀರ್‌ ವರ್ಮಾ, ಅರ್ಹತಾ ಸುತ್ತಿನಲ್ಲಿ ಗೆದ್ದು ಬರುವ ಆಟಗಾರನ ವಿರುದ್ಧ ಸೆಣಸಲಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಪರು‍ಪಳ್ಳಿ ಕಶ್ಯಪ್‌, ಡೆನ್ಮಾರ್ಕ್‌ನ ವಿಕ್ಟರ್‌ ಸ್ವೆಂಡ್ಸ್‌ಸೆನ್‌ ವಿರುದ್ಧ ಆಡುವರು.

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಸಾಯಿರಾಜ್‌ ಅವರು ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಮಿಶ್ರ ಡಬಲ್ಸ್‌ ವಿಭಾಗದ ಮತ್ತೊಂದು ಜೋಡಿ ಪ್ರಣವ್‌ ಜೆರ‍್ರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಆರಂಭಿಕ ಸುತ್ತಿನಲ್ಲಿ ಐರ್ಲೆಂಡ್‌ನ ಸ್ಯಾಮ್‌ ಮಗೀ ಮತ್ತು ಚೊಲ್‌ ಮಗೀ ವಿರುದ್ಧ ಸೆಣಸುವರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅನುರಾ ಪ್ರಭುದೇಸಾಯಿ, ಡೆನ್ಮಾರ್ಕ್‌ನ  ಐರಿನಾ ಅಮೆಲಿ ಆ್ಯಂಡರ್‌ಸನ್‌ ಎದುರು ಆಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.