ADVERTISEMENT

ಡೆಲ್ ಪೊಟ್ರೊ ಚಾಂಪಿಯನ್‌, ಫೆಡರರ್‌ಗೆ ಆಘಾತ

ಇಂಡಿಯಾನ ವೇಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿ:

ಏಜೆನ್ಸೀಸ್
Published 19 ಮಾರ್ಚ್ 2018, 20:28 IST
Last Updated 19 ಮಾರ್ಚ್ 2018, 20:28 IST
ಟ್ರೋಫಿಯೊಂದಿಗೆ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ
ಟ್ರೋಫಿಯೊಂದಿಗೆ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ   

ಇಂಡಿಯಾನ ವೇಲ್ಸ್‌, ಅಮೆರಿಕ: ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್‌ ಫೆಡರರ್‌ಗೆ ಆಘಾತ ನೀಡುವ ಮೂಲಕ ಇಂಡಿಯಾನ ವೇಲ್ಸ್‌ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಡೆಲ್‌ ಪೊಟ್ರೊ ಇಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪೈಪೋಟಿಯಲ್ಲಿ ಅವರು 6–4, 6–7, 7–6ರಲ್ಲಿ ಫೆಡರರ್‌ಗೆ ಸೋಲುಣಿಸಿದರು.

ಮೊದಲ ಸೆಟ್‌ನಲ್ಲಿ ಫೆಡರರ್‌ ಅವರ ತಪ್ಪುಗಳಿಂದ ಪೊಟ್ರೊ ಪಾಯಿಂಟ್ಸ್ ಗಿಟ್ಟಿಸಿದರು. ಎರಡನೇ ಸೆಟ್‌ನಲ್ಲಿ ಅವರು ಅಪೂರ್ವ ಆಟ ಆಡಿದ್ದರು ಆದರೆ ಟೈ ಬ್ರೇಕರ್‌ನಲ್ಲಿ ಅವರಿಗೆ ಸೋಲು ಎದುರಾಯಿತು. ಮೂರನೇ ಸೆಟ್‌ ಕೂಡ ಜಿದ್ದಾಜಿದ್ದಿನಿಂದ ಕೂಡಿತ್ತು. ಪೊಟ್ರೊ ಚುರುಕಿನಿಂದ ಆಡುವ ಮೂಲಕ ಎದುರಾಳಿಯ ತಂತ್ರಗಳನ್ನು ಹಿಮ್ಮೆಟ್ಟಿಸಿದರು.

ADVERTISEMENT

ಅಕಾಪುಲ್ಕೊ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಕೂಡ ಪೊಟ್ರೊ ಪ್ರಶಸ್ತಿ ಗೆದ್ದಿದ್ದರು. ಈ ಮೂಲಕ 29 ವರ್ಷದ ಆಟಗಾರ ಸತತ 11 ಪಂದ್ಯಗಳ ಗೆಲುವಿನ ಓಟ ನಡೆಸಿದ್ದಾರೆ.

‘ನನಗೆ ಈಗಲೂ ಗೆಲುವಿನ ಸಂಭ್ರಮ ಆಚರಿಸಲು ಸಾಧ್ಯವಾಗುತ್ತಿಲ್ಲ. ಆಶ್ಚರ್ಯ ಹಾಗೂ ಖುಷಿ ಎರಡೂ ಒಟ್ಟಿಗೆ ಆಗುತ್ತಿದೆ. ಫೆಡರರ್‌ ಎದುರು ಗೆಲ್ಲುವುದನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಕನಸು ನನಸಾಗಿದೆ. ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ’ ಎಂದು ಪೊಟ್ರೊ ಹೇಳಿದ್ದಾರೆ.

‘ಫೆಡರರ್‌ ಅವರ ಮಟ್ಟಕ್ಕೆ ಆಡಲು ಸಾಧ್ಯವಾಗಿದ್ದು ಖುಷಿ ಕೊಟ್ಟಿದೆ. ಗಾಯದ ಸಮಸ್ಯೆಗಳಿಂದ ಹೊರಬಂದ ಮೇಲೆ ನಾನು ಉತ್ತಮ ಆಟ ಆಡುವ ಬಗ್ಗೆ ಗೊಂದಲಗಳಿದ್ದವು. ನನ್ನ ಮೇಲಿನ ವಿಶ್ವಾಸ ಈಗ ಇಮ್ಮಡಿಯಾಗಿದೆ’ ಎಂದು ಅವರು ಹೇಳಿದ್ದಾರೆ.

25 ವರ್ಷಗಳ ವೃತ್ತಿಜೀವನದಲ್ಲಿ ಡೆಲ್‌ ಪೊಟ್ರೊಗೆ ಫೆಡರರ್‌ ಎದುರು ಸಿಕ್ಕ ಏಳನೇ ಗೆಲುವು ಇದಾಗಿದೆ. 2009ರ ಅಮೆರಿಕ ಓಪನ್‌ ಫೈನಲ್‌ನಲ್ಲಿಯೂ ಫೆಡರರ್ ಅವರನ್ನು ಮಣಿಸಿ ಪೊಟ್ರೊ ಪ್ರಶಸ್ತಿ ಗೆದ್ದಿದ್ದರು.

ಆರನೇ ಸ್ಥಾನ: ಫೆಡರರ್ ಎದುರು ಗೆದ್ದ ಬಳಿಕ ಡೆಲ್ ಪೊಟ್ರೊ ಎಟಿಪಿ ರ‍್ಯಾಂಕಿಂಗ್‌ನಲ್ಲಿ 10ರೊಳಗಿನ ಸ್ಥಾನ  ಪಡೆದುಕೊಂಡಿದ್ದಾರೆ. 4,155 ಪಾಯಿಂಟ್ಸ್‌ಗಳಿಂದ ಅವರು ಆರನೇ ಸ್ಥಾನಕ್ಕೆ ಏರಿದ್ದಾರೆ.

ಫೆಡರರ್‌ 9,660 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಒಸಾಕಗೆ ಚೊಚ್ಚಲ ಪ್ರಶಸ್ತಿ: ಶ್ರೇಯಾಂಕ ರಹಿತ ಆಟಗಾರ್ತಿ ನವೊಮಿ ಒಸಾಕ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಇಲ್ಲಿ ಪ್ರಶಸ್ತಿ ಗೆದ್ದ ಜಪಾನ್‌ನ ಮೊದಲ ಆಟಗಾರ್ತಿ ಎಂಬ ಶ್ರೇಯ ಅವರದಾಗಿದೆ.

ಫೈನಲ್‌ನಲ್ಲಿ ಒಸಾಕ 6–3, 6–2ರಲ್ಲಿ ನೇರ ಸೆಟ್‌ಗಳಿಂದ ರಷ್ಯಾದ ಡರಿಯಾ ಕಸಟ್ಕಿನಾ ಅವರನ್ನು ಮಣಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಒಸಾಕ ನಾಲ್ಕು ಬಾರಿ ಎದುರಾಳಿಯ ಸರ್ವ್‌ ಮುರಿದರು. 70 ನಿಮಿಷಗಳಲ್ಲಿ ಪಂದ್ಯ ಗೆದ್ದರು.

(ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ನವೊಮಿ ಒಸಾಕ)

20 ವರ್ಷದ ಯುವ ಆಟಗಾರ್ತಿ ಡರಿಯಾ ಆರಂಭದಲ್ಲಿಯೇ ಒತ್ತಡಕ್ಕೆ ಒಳಗಾದರು. ಅನಗತ್ಯ ತಪ್ಪುಗಳಿಂದ ಪಾಯಿಂಟ್ಸ್ ಬಿಟ್ಟುಕೊಟ್ಟರು. ‘ಡರಿಯಾ ಎದುರು ಆಡಲು ನಾನು ಸಾಕಷ್ಟು ಸಿದ್ಧತೆ ನಡೆಸಿದ್ದೆ.

ಪ್ರತಿ ಪಾಯಿಂಟ್ಸ್‌ಗಳಿಗಾಗಿ ಅವರು ಪೈಪೋಟಿ ನಡೆಸುವ ನಿರೀಕ್ಷೆ ಇತ್ತು. ಆದರೆ ಒತ್ತಡಕ್ಕೆ ಒಳಗಾಗಿದ್ದರಿಂದ ಅವರು ಹಿಂದೆ ಉಳಿದರು’ ಎಂದು ಒಸಾಕ ಪಂದ್ಯದ ಬಳಿಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.