ADVERTISEMENT

ಡೆವಿಲ್ಸ್‌–ರಾಯಲ್ಸ್‌ ಇಂದು ಪೈಪೋಟಿ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST
ರಾಯಲ್ಸ್‌ ತಂಡದ ಸಲಹೆಗಾರ ರಾಹುಲ್‌ ದ್ರಾವಿಡ್‌ ಕಂಡಿದ್ದು ಹೀಗೆ...
ರಾಯಲ್ಸ್‌ ತಂಡದ ಸಲಹೆಗಾರ ರಾಹುಲ್‌ ದ್ರಾವಿಡ್‌ ಕಂಡಿದ್ದು ಹೀಗೆ...   

ನವದೆಹಲಿ (ಪಿಟಿಐ): ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆಲುವು ಪಡೆದಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಶನಿವಾರ ತವರಿನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಯುನೈಟೆಡ್‌ ಅರಬ್‌ ಏಮಿರೇಟ್ಸ್‌ನಲ್ಲಿ ಡೆವಿಲ್ಸ್‌ ಪಡೆ ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವು ಸಾಧಿಸಿತ್ತು. ನಾಲ್ಕು ಪಾಯಿಂಟ್‌ಗಳನ್ನು ಹೊಂದಿರುವ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಶೇನ್ ವಾಟ್ಸನ್‌ ಸಾರಥ್ಯದ ರಾಯಲ್ಸ್ ತಂಡ ಐದು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದೆ. ಹಿಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ‘ಸೂಪರ್‌ ಓವರ್‌’ನಲ್ಲಿ ಜಯ ಸಾಧಿಸಿ  ವಿಶ್ವಾಸ ಹೆಚ್ಚಿಸಿಕೊಂಡಿದೆ. ಡೆವಿಲ್ಸ್‌ ಕೂಡಾ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿತ್ತು.

ಕ್ವಿಂಟನ್‌ ಡಿ ಕಾಕ್‌, ಮುರಳಿ ವಿಜಯ್‌, ಜೇನ್ ಪಾಲ್‌ ಡುಮಿನಿ, ಕೆವಿನ್‌ ಪೀಟರ್‌ಸನ್ ಅವರು ಡೆವಿಲ್ಸ್‌ ತಂಡದ ಬ್ಯಾಟಿಂಗ್‌ ವಿಭಾಗದ ಶಕ್ತಿ ಎನಿಸಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ಕ್ವಿಂಟನ್‌ ಮತ್ತು ಪೀಟರ್‌ಸನ್‌ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ವೇಗಿ ಜಯದೇವ್‌ ಉನದ್ಕತ್‌ (ಆರು ವಿಕೆಟ್‌), ಹಾಗೂ ಸ್ಪಿನ್ನರ್‌ ಶಹಬಜ್‌ ನದೀಮ್‌ (ಮೂರು ವಿಕೆಟ್‌) ಪಡೆದಿದ್ದಾರೆ. ಇವರ ಜೊತೆಗೆ ಡುಮಿನಿ, ವೇಯ್ನ್‌ ಪಾರ್ನೆಲ್‌, ಮೊಹಮ್ಮದ್‌ ಶಮಿ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲ್‌ ಮಾಡಬೇಕಿದೆ.

ಹ್ಯಾಟ್ರಿಕ್‌ ಜಯದತ್ತ ಚಿತ್ತ: ಹಿಂದಿನ ಪಂದ್ಯಗಳಲ್ಲಿ ನೈಟ್‌ ರೈಡರ್ಸ್‌್ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರು ಗೆಲುವು ಸಾಧಿಸಿರುವ ರಾಜಸ್ತಾನ ತಂಡ ಹ್ಯಾಟ್ರಿಕ್‌ ಜಯದ ಮೇಲೆ ಕಣ್ಣು ಇಟ್ಟಿದೆ. ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್‌, ಶೇನ್‌ ವಾಟ್ಸನ್‌ ರಾಯಲ್ಸ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು. ಆದರೆ, ಯುವ ಆಟಗಾರ ಕರುಣ್‌ ನಾಯರ್‌ ಮತ್ತು ಅಭಿಷೇಕ್‌ ನಾಯರ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ರಜತ್‌ ಭಾಟಿಯಾ, ಪ್ರವೀಣ್‌ ತಾಂಬೆ, ಜೇಮ್ಸ್‌ ಫಾಕ್ನರ್ ಅವರ ಬೌಲಿಂಗ್‌ ಬಲ ಈ ತಂಡಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.