ADVERTISEMENT

ಡೆಸರ್ಟ್ ಸ್ಟಾರ್ಮ್: ಸಂತೋಷ್ ಚಾಂಪಿಯನ್

ಎಂಡ್ಯೂರ್ ವಿಭಾಗದಲ್ಲಿ ಮಂಗಳೂರು ದಂಪತಿಗೆ ಗೆಲುವು

ಪಿ.ಆರ್‌.ಹರ್ಷವರ್ಧನ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಜೈಪುರ, ರಾಜಸ್ತಾನ: ಬೆಂಗಳೂರಿನ ಚಿಂಚನಗುಪ್ಪೆ ಶಿವಶಂಕರ್  ಸಂತೋಷ್ ಹನ್ನೆರಡನೇ ಡೆಸರ್ಟ್ ಸ್ಟಾರ್ಮ್ ರ್‍್ಯಾಲಿಯ ದ್ವಿಚಕ್ರ ವಾಹನದ ಮೋಟೊ ಮತ್ತು ಕ್ವಾಡ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.

29ರ ಹರೆಯದ ಸಂತೋಷ್ ನಿಗದಿತ ದೂರವನ್ನು 9:57:09 ಗಂಟೆ ಅವಧಿಯಲ್ಲಿ ಕ್ರಮಿಸಿ, ಸಮೀಪದ ಸ್ಪರ್ಧಿ ಆಸ್ಟ್ರಿಯಾದ ಫ್ರೌವಾಲ್ನರ್ ಹೆಲಿ ಅವರಿಗಿಂತ (10:15:38 ಗಂಟೆ) 42: 29 ನಿಮಿಷಗಳ ಮುನ್ನಡೆ ಪಡೆದರು. ತೃತೀಯ ಸ್ಥಾನ ಸುರೇಶ್ ಬಾಬು ಜನಾರ್ದನ (11:31:45ಗಂಟೆ) ಪಾಲಾಯಿತು.

ನಾಲ್ಕು ಚಕ್ರ ವಾಹನದ ಎಕ್ಸ್ಟ್ರೀಮ್ ವಿಭಾಗದಲ್ಲಿ ಟೀಮ್ ಮಹೀಂದ್ರಾ ಅಡ್ವೆಂಚರ್‌ನ ಚಂಡಿಗಡದ ಸನ್ನಿ ಸಿಧು ಮತ್ತು ಬೆಂಗಳೂರಿನ ಇಂದಿರಾನಗರದ ಪಿ.ವಿ. ಶ್ರೀನಿವಾಸ ಮೂರ್ತಿ (12:47:42 ಗಂಟೆ) ಅವರು ಬೆಂಗಳೂರಿನ ಮೆಕ್ಯಾನಿಕ್ ಲೀಲಾಧರ್ ಸಿದ್ಧಗೊಳಿಸಿದ ಎಕ್ಸ್ಯುವಿ 500 ಅನ್ನು ಅತಿ ವೇಗದಲ್ಲಿ ಚಲಾಯಿಸಿ ಚಾಂಪಿಯನ್ ಆಗಿ ಮೂಡಿ ಬಂದರು. ಈ ವಿಭಾಗದ ಎರಡನೇ ಸ್ಥಾನವನ್ನು ಟೀಮ್ ಥಂಡರ್ ನ ಸಂದೀಪ್ ಶರ್ಮಾ ಮತ್ತು ಅರುಣ್ ದವೇಸ್ಸರ್ (13:08:20) ಹಾಗೂ ತೃತೀಯ ಸ್ಥಾನವನ್ನು ಇದೇ ತಂಡದ ಅಮರ್ತೇಜ್ ಪೌಲ್ ಮತ್ತು ನಕುಲ ಮೆಂದಿರಾಠೆ ಪಡೆದರು. ಮೈಸೂರಿನ ಲೋಹಿತ್ ಅರಸ್ ತಂಡವು ನಾಲ್ಕನೇ ಸ್ಥಾನ ಪಡೆಯಿತು.

ಎಂಡ್ಯೂರ್ ವಿಭಾಗದಲ್ಲಿ ಮಾರುತಿ ಸುಜುಕಿ ತಂಡದ ಮಂಗಳೂರಿನ ಗರೋಡಿಯ ಸವೇರಾ ಡಿಸೋಜಾ ಮತ್ತು ಕೊಚ್ಚಿ ಮೂಲದ ಬೆಂಗಳೂರು ನಿವಾಸಿ ಸತೀಶ್ ಗೋಪಾಲಕೃಷ್ಣನ್ ದಂಪತಿಯು ಗ್ರಾಂಡ್ ವಿಟಾರಾ ಚಲಾಯಿಸಿ ವಿಜಯಿಯಾದರು.ಫೆ.24ರಂದು ದೆಹಲಿಯಲ್ಲಿ ಹಸಿರು ನಿಶಾನೆ ಪಡೆದು ರಾಜಸ್ತಾನದ ಸರ್ದಾರ್ ಶೆಹರ್‌ನಲ್ಲಿ ಅಧಿಕೃತವಾಗಿ ಆರಂಭಗೊಂಡು ಬಿಕಾನೇರ್, ಸ್ಯಾಮ್ ಡ್ಯೂನ್ಸ್, ಜೈಸಲ್ಮೇರ್, ಪ್ರೋಖ್ರಾನ್ ಸಮೀಪದ ಬೋಧನಾ ಮತ್ತಿತರ ಪ್ರದೇ ಶಗಳಲ್ಲಿ ಹಾದು ಬಂದ ರ್‍್ಯಾಲಿಯು ಶನಿವಾರ ಜೈಪುರದಲ್ಲಿ ಅಂತ್ಯಗೊಂ ಡಿತು. ಸುಜುಕಿ ಆರ್ಎಂಎಕ್ಸ್ 450 ಬೈಕ್ನಲ್ಲಿ ಸವಾರಿ ಮಾಡಿದ ಸಂತೋಷ್ ಆರಂಭದಿಂದ ಕೊನೆ ದಿನ ತನಕವೂ ಮೊದಲ ಸ್ಥಾನ ಬಿಟ್ಟುಕೊಡಲಿಲ್ಲ.

‘ಶುಕ್ರವಾರ ಬೋಧನಾ ಮತ್ತಿತರ ಪ್ರದೇಶಗಳಲ್ಲಿ ಹಾದು ಹೋಗುವುದು ಸ್ವಲ್ಪ ಕಠಿಣವಾಗಿತ್ತು. ಆದರೆ ನಿರಂತರ ಅಭ್ಯಾಸ, ತರಬೇತಿ ಮತ್ತು ಬದ್ಧತೆ ಯಿಂದ ಯಶಸ್ಸು ಸಾಧ್ಯವಾಯಿತು. ಕೋಲಾರದಲ್ಲಿ ಬಿಗ್ ರಾಕ್ ಬೈಕ್‌ ಪಾರ್ಕ್‌ನಲ್ಲಿ ಅಭ್ಯಾಸ ಮಾಡುತ್ತೇನೆ’ ಎಂದು  ಸಂತೋಷ್ ನುಡಿದರು.

ಅಬುದಾಬಿಯಲ್ಲಿ ನಡೆದ ಡೆಸರ್ಟ್ ರ್‍್ಯಾಲಿಯಲ್ಲಿ ಗಂಭೀರ ಗಾಯಗೊಂಡಿದ್ದರೂ ಅವರು, ಛಲ ಬಿಡದೆ ಅಭ್ಯಾಸ ನಡೆಸಿದ ಬಳಿಕ ಎರಡು ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿದ್ದಾರೆ.  ‘ನಾನು ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿರುವಾಗ ಸೈಕಲ್ ಓಡಿಸುವ ಹುಚ್ಚಿತ್ತು. ಬಳಿಕ ಮೋಟೊಕ್ರಾಸ್‌ನಲ್ಲಿ ಪಾಲ್ಗೊಂಡೆ. ಈಗ ಕ್ರಾಸ್ ಕಂಟ್ರಿಯಲ್ಲಿ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಎನಿಸುತ್ತದೆ’ ಎಂದೂ ಅವರು ಪ್ರತಿಕ್ರಿಯಿಸಿದರು.

‘ಜಿಪಿಎಸ್ ವ್ಯವಸ್ಥೆ ಆಧರಿತ ಈ ರ್‍್ಯಾಲಿಯಲ್ಲಿ ಸಹಚಾಲಕರಾಗಿ ನ್ಯಾವಿಗೇಷನ್ (ಮಾರ್ಗದರ್ಶನ) ನೀಡುವುದು ಕಠಿಣ ಕಾರ್ಯ. ಆದರೆ ಮೊದಲ ದಿನದ ಯಶಸ್ಸು ನಮಗೆ ಗೆಲುವಿನ ಹುಮ್ಮಸು ಮೂಡಿಸಿತು. ಅದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಮುನ್ನಡೆದೆವು’ ಎಂದು ಎಕ್ಸ್‌ಟ್ರೀಮ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಸಹ ಚಾಲಕ  ಪಿ.ವಿ. ಶ್ರೀನಿವಾಸ ಮೂರ್ತಿ  ತಿಳಿಸಿದರು.

‘ನಾವು ದಂಪತಿ ಆಗಿದ್ದರೂ, ರ್‍್ಯಾಲಿ ಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊ ಳ್ಳುತ್ತೇವೆ. ಜೀವನದ ಹೊಂದಾಣಿಕೆಯು ಸ್ಪರ್ಧೆಯಲ್ಲೂ ಉತ್ತಮ ಸಮನ್ವಯತೆ ಕಾಯ್ದುಕೊಳ್ಳಲು ಪ್ರೇರಣೆಯಾಗಿದೆ’ ಎಂದು ಎಂಡ್ಯೂರ್ ಚಾಂಪಿಯನ್ ಸತೀಶ್ ಗೋಪಾಲಕೃಷ್ಣನ್ ನುಡಿದರೆ, ‘ಇವರ ಕಾರು ಚಾಲನೆ ಹವ್ಯಾಸವೇ ನನಗೆ ಪ್ರೇರಣೆ. ನಾವು ಮೊದಲು  ಪ್ರವಾಸ ಹೋಗುತ್ತಿದ್ದೆವು. ಆ ಅನುಭವದ ಮೇಲೆ ತರಬೇತಿಗೆ ಹೋಗಿ ರ್‍್ಯಾಲಿಯಲ್ಲಿ ಪಾಲ್ಗೊಳ್ಳಲು ಶುರು ಮಾಡಿದ್ದೇವೆ’ ಎಂದು ಪತ್ನಿ ಸವೇರಾ ಡಿಸೋಜಾ  ಧ್ವನಿಗೂಡಿಸಿದರು.

ಮೊದಲ ದಿನ ತಮ್ಮ ವಿಟಾರಾ ವಾಹನದ ದೋಷದಿಂದ ಭಾರಿ ಹಿನ್ನಡೆ ಅನುಭವಿಸಿದ್ದ ಕಳೆದ ವರ್ಷದ ಚಾಂಪಿ ಯನ್ ರಾಣಾ ಹಾಗೂ ಮಂಗಳೂರಿನ ಬಲ್ಮಠದ ಅಶ್ವಿನ್ ನಾಯಕ್ ನಿಗದಿತ ಅವಧಿಯಲ್ಲಿ ಸ್ಪರ್ಧೆಯನ್ನು ಪೂರ್ಣ ಗೊಳಿಸಿ ಕ್ರೀಡಾ ಮನೋಭಾವ ಮೆರೆದರು.  ‘ದಕ್ಷಿಣ ಭಾರತದಲ್ಲಿ ನಡೆಯುವ ರ್‍್ಯಾಲಿಗಿಂತ ಈ ಡೆಸರ್ಟ್ ಸ್ಟಾರ್ಮ್ ವಿಭಿನ್ನ. ವೇಗದ ಜೊತೆ ಮುಂದಾ ಲೋಚನೆ ಹಾಗೂ ನಿಯಂತ್ರಣವೂ ಅಗತ್ಯ ಎಂದು ಪ್ರಮುಖ ತೀರ್ಪುಗಾರ ಚಿಕ್ಕಮಗಳೂರಿನ ಫಾರೂಕ್ ಅಹ್ಮದ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.