ADVERTISEMENT

ಡೇವಿಸ್ ಕಪ್‌: ವಲಯಮಟ್ಟದ ಪಂದ್ಯದಲ್ಲಿ ನಿರಾಸೆ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಡೇವಿಸ್ ಕಪ್‌: ವಲಯಮಟ್ಟದ ಪಂದ್ಯದಲ್ಲಿ ನಿರಾಸೆ
ಡೇವಿಸ್ ಕಪ್‌: ವಲಯಮಟ್ಟದ ಪಂದ್ಯದಲ್ಲಿ ನಿರಾಸೆ   

ತೆಂಜಿನ್‌ (ಪಿಟಿಐ): ಭರವಸೆಯ ಆಟಗಾರರು ಕೈಚೆಲ್ಲಿದ ಕಾರಣ ಭಾರತ ತಂಡ ಡೇವಿಸ್‌ ಕಪ್‌ ವಲಯಮಟ್ಟದ ಪಂದ್ಯದ ಮೊದಲ ದಿನ ನಿರಾಸೆ ಅನುಭವಿಸಿತು. ಇಲ್ಲಿ ಶುಕ್ರವಾರ ನಡೆದ ಚೀನಾ ಎದುರಿನ ಪಂದ್ಯದಲ್ಲಿ ರಾಮಕುಮಾರ್ ರಾಮನಾಥನ್‌ ಮತ್ತು ಸುಮಿತ್ ನಗಾಲ್‌ ಸೋಲು ಕಂಡರು. ವಲಯ ಮಟ್ಟದ ಪಂದ್ಯದಲ್ಲಿ ಐದು ವರ್ಷಗಳಲ್ಲಿ ಭಾರತ ಅನುಭವಿಸಿದ ಮೊದಲ ಸೋಲು ಇದು.

ಕಿಬ್ಬೊಟ್ಟೆ ನೋವಿನಿಂದ ಬಳಲಿದ ಯೂಕಿ ಭಾಂಬ್ರಿ ಬದಲಿಗೆ ಕಣಕ್ಕೆ ಇಳಿದ ರಾಮಕುಮಾರ್ ರಾಮನಾಥನ್‌ ಮೊದಲ ಸಿಂಗಲ್ಸ್ ಪಂದ್ಯದಲ್ಲಿ
ಯುವ ಆಟಗಾರ ಯಿಬಿಂಗ್ ವೂ ಎದುರು 6–7 (4), 4–6ರಿಂದ ಸೋತರು.

18 ವರ್ಷದ ಯಿಬಿಂಗ್‌ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಅವರ ಸರ್ವ್ ಮುರಿದ ರಾಮನಾಥನ್‌ ಭಾರತಕ್ಕೆ ಜಯದ ಭರವಸೆ ಮೂಡಿಸಿದರು. ಆದರೆ ಸುಧಾರಿಸಿಕೊಂಡ ಯಿಬಿಂಗ್‌ ಅಮೋಘ ಆಟವಾಡಿದರು. ಪಟ್ಟು ಬಿಡದ ರಾಮಕುಮಾರ್‌ ಪ್ರಬಲ ಪೈಪೋಟಿ ನೀಡಿದರು.
ಆದರೆ ಟೈ ಬ್ರೇಕರ್ ಮೂಲಕ ಚೀನಾ ಆಟಗಾರ ಸೆಟ್‌ ತಮ್ಮದಾಗಿಸಿಕೊಂಡರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ ತಮಗಿಂತ 200 ಪಾಯಿಂಟ್‌ಗಳಿಂದ ಹಿಂದೆ ಇರುವ ಆಟಗಾರನ ವಿರುದ್ಧ ರಾಮಕುಮಾರ್‌ಗೆ ಎರಡನೇ ಸೆಟ್‌ನಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಭಾರತದ ಆಟಗಾರನಿಗೆ ಎರಡು ಬಾರಿ ಎದುರಾಳಿಯ ಸರ್ವ್ ಮುರಿಯುವ ಅವಕಾಶ ಲಭಿಸಿತ್ತು. ಆದರೆ ಇದರಲ್ಲಿ ವಿಫಲರಾದರು. ಇದರಿಂದಾಗಿ ಆತಿಥೇಯ ತಂಡ ಮುನ್ನಡೆ ಗಳಿಸಿತು.

ಸುಮಿತ್ ನಗಾಲ್‌ ಅವರಿಗೂ ಜಯ ತಂದುಕೊಡಲು ಆಗಲಿಲ್ಲ. 67 ನಿಮಿಷ ನಡೆದ ಹಣಾಹಣಿಯಲ್ಲಿ ಅವರು ಜೀ ಜಾಂಗ್ ಎದುರು 4–6, 1–6ರಿಂದ ಸೋತರು.

ಶನಿವಾರ ನಡೆಯಲಿರುವ ಡಬಲ್ಸ್‌ ಪಂದ್ಯದಲ್ಲಿ ರೋಹನ್‌ ಬೋ‍ಪಣ್ಣ ಮತ್ತು ಲಿಯಾಂಡರ್ ಪೇಸ್‌ ಕಣಕ್ಕೆ ಇಳಿಯಲಿದ್ದಾರೆ. ಅವರು ಮಾವೊ ಕ್ಸಿನ್‌ಗಾಂಗ್‌ ಮತ್ತು ಡಿ ವು ಜೋಡಿಯನ್ನು ಎದುರಿಸುವರು. ಇದು ಭಾರತದ ಪಾಲಿಗೆ ಮಾಡು ಇಲ್ಲ ಮಡಿ ಪಂದ್ಯ ಆಗಿದೆ.

ಶುಕ್ರವಾರದ ಸೋಲನ್ನು ‘ಆಘಾತಕಾರಿ’ ಎಂದು ಬಣ್ಣಿಸಿರುವ ಭಾರತ ತಂಡದ ನಾಯಕ ಮಹೇಶ್ ಭೂಪತಿ ‘ಇಬ್ಬರೂ ಕಳಪೆ ಆಟ ಆಡಿದರು. ಎರಡೂ ಪಂದ್ಯಗಳಲ್ಲಿ ಭಾರತದ ಆಟಗಾರರಿಗೆ ಗೆಲ್ಲುವ ಛಲ ಇರಲಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.