ADVERTISEMENT

ಡೇವಿಸ್ ಕಪ್: ವಿಶ್ವಗುಂಪಿನಿಂದ ಹೊರಬಿದ್ದ ಭಾರತ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST
ಡೇವಿಸ್ ಕಪ್: ವಿಶ್ವಗುಂಪಿನಿಂದ ಹೊರಬಿದ್ದ ಭಾರತ
ಡೇವಿಸ್ ಕಪ್: ವಿಶ್ವಗುಂಪಿನಿಂದ ಹೊರಬಿದ್ದ ಭಾರತ   

ಟೋಕಿಯೊ (ಐಎಎನ್‌ಎಸ್): ಭಾರತ ತಂಡದವರು ಇಲ್ಲಿ ನಡೆದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಸೋಲು ಕಂಡು ಏಷ್ಯಾ/ ಓಸೀನಿಯಾ ವಲಯಕ್ಕೆ ಹಿಂಬಡ್ತಿ ಪಡೆದರು. ಈ ಮೂಲಕ ವಿಶ್ವ ಗುಂಪಿನಿಂದ ಭಾರತ ಹೊರ ಬಿದ್ದಿತು.

ಭಾನುವಾರ ನಡೆದ ರಿವರ್ಸ್ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತದ ಆಟಗಾರರು ನಿರೀಕ್ಷಿತ ಪ್ರದರ್ಶನ      ನೀಡಲಿಲ್ಲ. ಭಾರತವನ್ನು ಮಣಿಸುವ ಮೂಲಕ   ಜಪಾನ್ ತಂಡ 1985ರ ಬಳಿಕ ಇದೇ ಮೊದಲ ಬಾರಿಗೆ 16    ರಾಷ್ಟ್ರಗಳ ವಿಶ್ವ ಗುಂಪಿಗೆ ಅರ್ಹತೆ ಪಡೆದುಕೊಂಡಿತು.

ರಿವರ್ಸ್ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಯುವ ಆಟಗಾರ ವಿಷ್ಣು ವರ್ಧನ್ ನಿರಾಸೆ ಮೂಡಿಸಿದರು. ಈ ಆಟಗಾರ 5-7, 3-6, 3-6ರಲ್ಲಿ ಕೈ ನಿಷಿಕೋರಿ ಎದುರು ಸೋಲು ಕಂಡರು. ಮೊದಲ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ತೋರಿದ್ದು ಮಾತ್ರ ಅವರ ಸಾಧನೆ.
 
ಈ ಹೋರಾಟ ಎರಡು ಗಂಟೆ ಹತ್ತು ನಿಮಿಷಗಳ ಕಾಲ ನಡೆಯಿತು. ಆದರೆ ಭಾರತದ ಆಟಗಾರ ಒತ್ತಡಕ್ಕೆ ಒಳಗಾದರು. ಇದರ ಪರಿಣಾಮ ಸೋಲು ಅನುಭವಿಸಿದರು. ಇದರಿಂದ ಜಪಾನ್ 3-1ರಲ್ಲಿ ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿಕೊಂಡಿತು.

ಭಾರತದ ಆಟಗಾರ ಮೊದಲ ಸೆಟ್‌ನಲ್ಲಿ 5-3ರಲ್ಲಿ ಹಾಗೂ ಎರಡನೇ ಸೆಟ್‌ನಲ್ಲಿ 2-0ರಲ್ಲಿ ಮುನ್ನಡೆ ಸಾಧಿಸಿದ್ದರು. ಈ ವೇಳೆ ಮರು ಹೋರಾಟ ನಡೆಸಿದ ನಿಷಿಕೋರಿ ಅವರು ವಿಷ್ಣುವರ್ಧನ್‌ಗೆ ಭಾರಿ ಪ್ರತಿರೋಧ ಒಡ್ಡಿ ಪಂದ್ಯ ಗೆದ್ದುಕೊಂಡರು.

ಭುಜದ ನೋವಿನಿಂದ ಬಳಲುತ್ತಿರುವ  ಸೋಮದೇವ್ ದೇವವರ್ಮನ್ ರಿವರ್ಸ್ ಸಿಂಗಲ್ಸ್ ಪಂದ್ಯಕ್ಕೆ ಅಂಗಳಕ್ಕಿಳಿಯಲಿಲ್ಲ.  ಮೊದಲ ದಿನದ ಸಿಂಗಲ್ಸ್‌ನ ಮೊದಲ ಸೆಟ್‌ನಲ್ಲಿ ಸರ್ವ್ ಮಾಡಲು ಅವರು ಕಷ್ಟ ಪಟ್ಟಿದ್ದರು. ಆಗ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸಿದ್ದರು.

ರೋಹನ್ ಬೋಪಣ್ಣ ಇನ್ನೊಂದು ರಿವರ್ಸ್ ಸಿಂಗಲ್ಸ್‌ನಲ್ಲಿ ಗೋ ಸೊಯೆದಾ ಎದುರು ಶರಣಾದರು. ಕಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಈ ಆಟಗಾರ ಅರ್ಧದಲ್ಲೇ ನಿವೃತ್ತಿ ಪ್ರಕಟಿಸಿದರು. ಈ ಮೂಲಕ ಆತಿಥೇಯ ಜಪಾನ್ ಮುನ್ನಡೆಯನ್ನು 4-1ಕ್ಕೆ ಹೆಚ್ಚಿಸಿಕೊಂಡಿತು.

ಹಿಂದಿನ 21 ಟೂರ್ನಿಗಳಲ್ಲಿ ಭಾರತ 18 ಬಾರಿ ಜಪಾನ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಗಾಯದ ಸಮಸ್ಯೆ ಈ ಬಾರಿ ಪ್ರವಾಸಿ ತಂಡವನ್ನು ಕಾಡಿತು. ಲಿಯಾಂಡರ್ ಪೇಸ್ ಸೇವೆ ಈ ಸಲ ತಂಡಕ್ಕೆ ಲಭಿಸಲಿಲ್ಲ. ಪೇಸ್ ಅಮೆರಿಕ ಓಪನ್ ಟೂರ್ನಿಯ ವೇಳೆ ಗಾಯಗೊಂಡಿದ್ದರು.

ಮೊದಲ ದಿನ ಸಿಂಗಲ್ಸ್‌ನಲ್ಲಿ ಸೋಮದೇವ್ ಹಾಗೂ ರೋಹನ್ ಬೋಪಣ್ಣ ಜಪಾನ್‌ನ ಎದುರಾಳಿಗಳ ಕೈಯಲ್ಲಿ ಸೋಲು ಕಂಡಿದ್ದರು. ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಮಹೇಶ್ ಭೂಪತಿ ಹಾಗೂ ಬೋಪಣ್ಣ ಜೋಡಿ ಗೆಲುವು ಸಾಧಿಸಿ ಭಾರತದ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ ಭಾನುವಾರ  ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. 

ವಿಶ್ವ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಸರ್ಬಿಯಾ ಎದುರು ಸೋಲು ಕಂಡಿತ್ತು. ಇದರಿಂದ ಮತ್ತೆ ವಿಶ್ವಗುಂಪಿನಲ್ಲಿ ಸ್ಥಾನ ಪಡೆಯಲು `ಪ್ಲೇ ಆಫ್~ನಲ್ಲಿ ಜಪಾನ್ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.