ನೋವಿ ಸಾದ್, ಸರ್ಬಿಯ (ಪಿಟಿಐ): ಡೇವಿಸ್ ಕಪ್ ಟೆನಿಸ್ ಟೂರ್ನಿಯ ಸರ್ಬಿಯ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತು. ಭಾನುವಾರ ನಡೆದ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಸೋಮ್‌ದೇವ್ ದೇವ್‌ವರ್ಮನ್ ಅವರು 4-6, 2-6, 5-7 ರಲ್ಲಿ ವಿಕ್ಟರ್ ಟ್ರಾಯ್ಕಿ ಎದುರು ಪರಾಭವಗೊಂಡರು.
ಇದರೊಂದಿಗೆ ಸರ್ಬಿಯ 3-1 ರಲ್ಲಿ ಮುನ್ನಡೆ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಭಾರತದ ಕನಸು ಭಗ್ನಗೊಂಡಿತು. ವಿಶ್ವಗುಂಪಿಗೆ ಅರ್ಹತೆ ಪಡೆಯಬೇಕಾದರೆ ಭಾರತ ಮತ್ತೆ ಪ್ಲೇ ಆಫ್ ಪಂದ್ಯಗಳಲ್ಲಿ ಆಡಬೇಕಿದೆ.
ಶನಿವಾರ ನಡೆದ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸೋಮ್‌ದೇವ್ ದೇವ್‌ವರ್ಮನ್ ಮತ್ತು ರೋಹನ್ ಬೋಪಣ್ಣ 6-4, 3-6, 4-6, 6-7 ರಲ್ಲಿ ನೆನಾದ್ ಜಿಮೊಂಜಿಕ್ ಹಾಗೂ ಎಲಿಜಾ ಬೊಜೊಲಾಕ್ ಎದುರು ಸೋಲು ಅನುಭವಿದ್ದರು. ಸ್ಪೆನ್ಸ್ ಸ್ಪೋರ್ಟ್ಸ್ ಸೆಂಟರ್ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಮೂರು ಗಂಟೆ 10 ನಿಮಿಷಗಳ ಹೋರಾಟದ ಬಳಿಕ ಭಾರತದ ಜೋಡಿ ಶರಣಾಗಿತ್ತು.
ಈ ಕಾರಣ ಭಾರತ ವಿಶ್ವಗುಂಪಿನ ಕ್ವಾರ್ಟರ್ ಫೈನಲ್ ಪ್ರವೇಶಿಸಬೆಕಾದರೆ ರಿವರ್ಸ್ ಸಿಂಗಲ್ಸ್‌ನ ಎರಡೂ ಪಂದ್ಯಗಳಲ್ಲಿ ಗೆಲುವುದು ಪಡೆಯಬೇಕಿತ್ತು. ಆದರೆ ಸೋಮ್‌ದೇವ್ ಸೋಲು ಅನುಭವಿಸಿದ ಕಾರಣ ಭಾರತದ ಸವಾಲಿಗೆ ತೆರೆಬಿದ್ದಿದೆ. ಇದರಿಂದ ರೋಹನ್ ಬೋಪಣ್ಣ ಮತ್ತು ಜಾಂಕೊ ತಿಪ್ಸರೆವಿಕ್ ನಡುವಿನ ಕೊನೆಯ ರಿವರ್ಸ್ ಸಿಂಗಲ್ಸ್ ಪಂದ್ಯ ತನ್ನ ಮಹತ್ವ ಕಳೆದುಕೊಂಡಿದೆ.
ಮೊದಲ ಸಿಂಗಲ್ಸ್ ಪಂದ್ಯಗಳಲ್ಲಿ ಸೋಮ್‌ದೇವ್ ಅವರು ತಿಪ್ಸರೆವಿಕ್ ವಿರುದ್ಧ ಗೆಲುವು ಪಡೆದಿದ್ದರೆ, ರೋಹನ್ ಅವರು ಟ್ರಾಯ್ಕಿ ಕೈಯಲ್ಲಿ ನಿರಾಸೆ ಅನುಭವಿಸಿದ್ದರು.
ಭಾರತ 1996 ರಲ್ಲಿ ಕೊನೆಯದಾಗಿ ವಿಶ್ವಗುಂಪಿನ ಕ್ವಾರ್ಟರ್ ಫೈನಲ್‌ನಲ್ಲಿ ಆಡಿತ್ತು. ಅಂದು ಎಂಟರಘಟ್ಟದ ಪಂದ್ಯದಲ್ಲಿ ಸ್ವೀಡನ್ ಕೈಯಲ್ಲಿ 0-5 ರಲ್ಲಿ ಸೋಲು ಅನುಭವಿಸಿತ್ತು. ಅನುಭವಿ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರು ಸರ್ಬಿಯ ವಿರುದ್ಧ ಆಡದೇ ಇರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.