ADVERTISEMENT

ಡ್ರಾ ಸಾಧಿಸಿದ ಐಸ್‌ಲ್ಯಾಂಡ್

ಫಲಿಸದ ಲಯೊನೆಲ್‌ ಮೆಸ್ಸಿ ತಂತ್ರ: ಮಿಂಚಿದ ಅಲ್ಫ್ರೆಡ್‌ ಫಿನ್‌ಬೊಗಾಸನ್

ಏಜೆನ್ಸೀಸ್
Published 16 ಜೂನ್ 2018, 20:04 IST
Last Updated 16 ಜೂನ್ 2018, 20:04 IST
ಬೇಸರದಲ್ಲಿ ಲಯೊನೆಲ್‌ ಮೆಸ್ಸಿ ಮತ್ತು ಅವರ ಹಿಂಬದಿಯಲ್ಲಿ ಸಂಭ್ರಮಿಸುತ್ತಿರುವ ಐಸ್‌ಲ್ಯಾಂಡ್ ಆಟಗಾರರು ಎಪಿ ಚಿತ್ರ
ಬೇಸರದಲ್ಲಿ ಲಯೊನೆಲ್‌ ಮೆಸ್ಸಿ ಮತ್ತು ಅವರ ಹಿಂಬದಿಯಲ್ಲಿ ಸಂಭ್ರಮಿಸುತ್ತಿರುವ ಐಸ್‌ಲ್ಯಾಂಡ್ ಆಟಗಾರರು ಎಪಿ ಚಿತ್ರ   

ಮಾಸ್ಕೋ (ಎಎಫ್‌ಪಿ): ಕೋಟ್ಯಂತರ ಫುಟ್‌ಬಾಲ್ ಪ್ರಿಯರ ಕಣ್ಮಣಿ ಲಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡುವ ಕನಸಿಗೆ ಐಸ್‌ಲ್ಯಾಂಡ್‌ನ ಅಲ್ಫ್ರೆಡ್ ಫಿನ್‌ಬೊಗಾಸನ್ ಅಡ್ಡಗಾಲು ಹಾಕಿದರು.

ಐಸ್‌ಲ್ಯಾಂಡ್ ತಂಡವು 1–1ರಿಂದ ಡ್ರಾ ದಾಖಲಿಸಿ ಇತಿಹಾಸ ಬರೆಯಿತು. ಈ ತಂಡಕ್ಕೆ ಇದು ಮೊದಲ ವಿಶ್ವಕಪ್‌.

ಶುಕ್ರವಾರ ಸ್ಪಾರ್ಟಕ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮುಂದೆ ನಡೆದ ಪಂದ್ಯದಲ್ಲಿ ಐಸ್‌ಲ್ಯಾಂಡ್ ತಂಡವು ಆರಂಭದಲ್ಲಿಯೇ ಒತ್ತಡದಲ್ಲಿತ್ತು. ಅದರ ಲಾಭ ಪಡೆದ ಅರ್ಜೆಂಟೀನಾದ ಸರ್ಗಿಯೊ ಅಗೇರೊ 19ನೇ ನಿಮಿಷದಲ್ಲಿ ಗೋಲು ಹೊಡೆದರು. 1–0 ಮುನ್ನಡೆಯ ಸಂತಸದಲ್ಲಿ ತಂಡವು ತೇಲಾಡಿತು. ಆದರೆ ಅದು ಬಹಳ ಹೊತ್ತು  ಇರಲಿಲ್ಲ.

ADVERTISEMENT

23ನೇ ನಿಮಿಷದಲ್ಲಿ ಅಲ್ಫ್ರೆಡ್ ಅವರು ಗೋಲು ಹೊಡೆಯುವ ಮೂಲಕ ಸಮಬಲ ಸಾಧಿಸಿದರು.

ಐಸ್‌ಲ್ಯಾಂಡ್ ತಂಡವು ಬಲಿಷ್ಠ ತಂಡಗಳಿಗೆ ಅಚ್ಚರಿ ನೀಡುವುದು ಇದು ಮೊದಲಲ್ಲ. 2016ರ ಯುರೋ ಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು.

ಮೆಸ್ಸಿಗೆ ಒಲಿಯದ ಗೋಲು: ಮೆಸ್ಸಿ ಅವರ ಗೋಲು ಗಳಿಸುವ ಎರಡು ಪ್ರಯತ್ನಗಳು ವಿಫಲವಾದವು. ಅದರಲ್ಲೂ 63ನೇ ನಿಮಿಷದಲ್ಲಿ ಲಭಿಸಿದ್ದ ಪೆನಾಲ್ಟಿಕಾರ್ನರ್‌ನಲ್ಲಿ ಮೆಸ್ಸಿ ಒದ್ದ ಚೆಂಡನ್ನು ಎದುರಾಳಿ ತಂಡದ ಗೋಲ್‌ಕೀಪರ್‌ ಹೆನ್ಸ್‌ ಹಾಲ್ಡರ್‌ಸನ್‌ ತಡೆದರು.

ಅದಕ್ಕೂ ಮುನ್ನ ಹೆನ್ಸ್‌ ಅವರ ಚುರುಕಾದ ಗೋಲ್‌ಕೀಪಿಂಗ್‌ನಿಂದಾಗಿ ಅರ್ಜೆಟೀನಾ ಆಟಗಾರರು ನಿರಾಶರಾಗಬೇಕಾಯಿತು.

ಅರ್ಜೆಂಟೀನಾದ ದಿಗ್ಗಜ ಆಟಗಾರ ಡೀಗೊ ಮರಡೋನಾ ಅವರು ತಮ್ಮ ದೇಶದ ತಂಡವನ್ನು ಹುರಿದುಂಬಿಸಿದರು. ಪಂದ್ಯದ ನಂತರ ಮೆಸ್ಸಿ ಬೇಸರದಿಂದ ನಿಂತುಕೊಂಡಾಗ ಇನ್ನೂ ಆಟ ಬಾಕಿ ಇದೆ. ನಿರಾಶರಾಗಬೇಡಿ ಎಂದು ಕೈ ಸನ್ನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.