ADVERTISEMENT

ತವರಿನಲ್ಲೇ ಸಚಿನ್‌ಗೆ 200ನೇ ಟೆಸ್ಟ್

ನವೆಂಬರ್‌ನಲ್ಲಿ ವಿಂಡೀಸ್ ವಿರುದ್ಧ ಸರಣಿ ನಡೆಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 19:59 IST
Last Updated 1 ಸೆಪ್ಟೆಂಬರ್ 2013, 19:59 IST
ತವರಿನಲ್ಲೇ ಸಚಿನ್‌ಗೆ 200ನೇ ಟೆಸ್ಟ್
ತವರಿನಲ್ಲೇ ಸಚಿನ್‌ಗೆ 200ನೇ ಟೆಸ್ಟ್   

ಕೋಲ್ಕತ್ತ (ಪಿಟಿಐ/ ಐಎಎನ್‌ಎಸ್): ಸಚಿನ್ ತೆಂಡೂಲ್ಕರ್ ತಮ್ಮ 200ನೇ ಟೆಸ್ಟ್ ಪಂದ್ಯವನ್ನು ತವರು ನೆಲದಲ್ಲೇ ಆಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವೆಸ್ಟ್ ಇಂಡೀಸ್ ತಂಡವನ್ನು ಭಾರತಕ್ಕೆ ಆಹ್ವಾನಿಸಲು ನಿರ್ಧರಿಸಿದೆ.

ನವೆಂಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಹಾಗೂ ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿ ನಡೆಸುವ ಪ್ರಸ್ತಾಪಕ್ಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಬಿಸಿಸಿಐನ ಅಚ್ಚರಿಯ ನಿರ್ಧಾರದ ಕಾರಣ ಸಚಿನ್‌ಗೆ ತಮ್ಮ 200ನೇ ಟೆಸ್ಟ್ ಭಾರತದಲ್ಲಿ ಆಡುವ ಅವಕಾಶ ಲಭಿಸಿದೆ. ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ. ಡಿಸೆಂಬರ್-ಜನವರಿ ತಿಂಗಳಲ್ಲಿ ಭಾರತ ತಂಡ ಟೆಸ್ಟ್ ಹಾಗೂ ಏಕದಿನ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಇವೆರಡು ಸರಣಿಗಳ ನಡುವೆ ವಿಂಡೀಸ್ ತಂಡವನ್ನು ಭಾರತಕ್ಕೆ ಆಹ್ವಾನಿಸಲು ಬಿಸಿಸಿಐ ತೀರ್ಮಾನಿಸಿದೆ.

198 ಟೆಸ್ಟ್‌ಗಳನ್ನಾಡಿರುವ ಸಚಿನ್ ತಮ್ಮ 200ನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ನೆಲದಲ್ಲಿ ಆಡುವರು ಎಂದು ಭಾವಿಸಲಾಗಿತ್ತು. ಆದರೆ ವಿಂಡೀಸ್ ವಿರುದ್ಧದ ಸರಣಿ ನಡೆಯಲಿರುವ ಕಾರಣ ತವರು ನೆಲದ ಪ್ರೇಕ್ಷಕರ ಸಮ್ಮುಖದಲ್ಲೇ ಈ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಈ ಎರಡು ಟೆಸ್ಟ್ ಪಂದ್ಯಗಳು ಕೋಲ್ಕತ್ತ ಹಾಗೂ ಮುಂಬೈನಲ್ಲಿ ನಡೆಯುವ ಸಾಧ್ಯತೆಯಿದೆ.

ವಿಂಡೀಸ್ ವಿರುದ್ಧದ ಸರಣಿಯ ಬಳಿಕ ಸಚಿನ್ ತಮ್ಮ 24 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದರೂ ಅಚ್ಚರಿಯಿಲ್ಲ. ಸಚಿನ್ ಏಕದಿನ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿಯಾಗಿದ್ದಾರೆ. ಮುಂಬೈನ ಚಾಂಪಿಯನ್ ಬ್ಯಾಟ್ಸ್‌ಮನ್ ಟೆಸ್ಟ್‌ನಲ್ಲಿ 53.86ರ ಸರಾಸರಿಯಲ್ಲಿ 15,837 ರನ್ ಕಲೆಹಾಕಿದ್ದಾರೆ.

ಭಾರತ ತಂಡ ಮುಂದಿನ ವರ್ಷದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಎಂಬುದನ್ನೂ ಸಭೆಯಲ್ಲಿ ಪ್ರಕಟಿಸಲಾಯಿತು. 2014 ಜನವರಿ/ ಫೆಬ್ರುವರಿ ಅವಧಿಯಲ್ಲಿ ಕಿವೀಸ್ ನೆಲದಲ್ಲಿ ಎರಡು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನಾಡಲಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಇಂಗ್ಲೆಂಡ್‌ನಲ್ಲಿ ಐದು ಟೆಸ್ಟ್, ಐದು ಏಕದಿನ ಪಂದ್ಯಗಳ ಸರಣಿ ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.