ADVERTISEMENT

ತಿರುಗೇಟು ನೀಡುವ ತವಕ

ಟ್ವೆಂಟಿ-20 ಕ್ರಿಕೆಟ್‌: ವಿಂಡೀಸ್‌ ‘ಎ’ಗೆ ಸವಾಲೊಡ್ಡಲು ಭಾರತ ‘ಎ’ ಸಜ್ಜು

ಮಹಮ್ಮದ್ ನೂಮಾನ್
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅನುಭವಿಸಿದ ಅನಿರೀಕ್ಷಿತ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ ಭಾರತ ‘ಎ’ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ವೆಸ್ಟ್‌ ಇಂಡೀಸ್‌ ‘ಎ’ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿದ್ದು, ಯುವರಾಜ್‌ ಸಿಂಗ್‌ ಬಳಗ ಮುಯ್ಯಿ ತೀರಿಸುವ ಲೆಕ್ಕಾಚಾರ ಹಾಕಿಕೊಂಡಿದೆ.

ವಿಂಡೀಸ್‌ ತಂಡ ಏಕದಿನ ಸರಣಿ ಯನ್ನು 2-1 ರಲ್ಲಿ ಗೆದ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ್ದ ಭಾರತ ಕೊನೆಯ ಎರಡೂ ಪಂದ್ಯ ಗಳಲ್ಲಿ ಮುಖಭಂಗ ಅನುಭವಿಸಿತ್ತು. ಈ ಅನಿರೀಕ್ಷಿತ ನಿರಾಸೆಯನ್ನು ಮರೆತು ಉತ್ತಮ ಪ್ರದರ್ಶನ ನೀಡುವ ಸವಾಲು ಆತಿಥೇಯ ಆಟಗಾರರ ಮುಂದಿದೆ.

ಏಕದಿನ ಸರಣಿಯಲ್ಲಿ ಉತ್ತಮ ಆಟ ತೋರಿದ ಯುವರಾಜ್‌ ಈ ಪಂದ್ಯದಲ್ಲೂ ಬ್ಯಾಟಿಂಗ್‌ನ ಪ್ರಮುಖ ಶಕ್ತಿ ಎನಿಸಿಕೊಂಡಿದ್ದಾರೆ. ಪಂಜಾಬ್‌ನ ಆಟಗಾರ ಮೂರು ಪಂದ್ಯಗಳಲ್ಲಿ ಕ್ರಮವಾಗಿ 123, 40 ಹಾಗೂ 61 ರನ್‌ ಗಳಿಸಿದ್ದರು. ಆದರೆ ಅವರಿಗೆ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ತಕ್ಕ ಸಾಥ್‌ ಲಭಿಸಿರಲಿಲ್ಲ.

ಆದ್ದರಿಂದ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಾಗಿದೆ. ಏಕದಿನ ಸರಣಿಯಲ್ಲಿ ಫಾರ್ಮ್‌ ಕಂಡುಕೊಳ್ಳುವಲ್ಲಿ ವಿಫಲ ರಾಗಿರುವ ರಾಬಿನ್‌ ಉತ್ತಪ್ಪ ಮಿಂಚುವರೇ ಎಂಬುದನ್ನು ನೋಡ ಬೇಕು. ಕೊಡಗಿನ ಬ್ಯಾಟ್ಸ್‌ಮನ್‌ ಏಕದಿನ ಸರಣಿಯಲ್ಲಿ ಕ್ರಮವಾಗಿ 23, 10 ಹಾಗೂ 27 ರನ್‌ ಪೇರಿಸಿದ್ದರು.

ಯೂಸುಫ್‌ ಪಠಾಣ್‌, ಬಾಬಾ ಅಪರಾಜಿತ್‌ ಮತ್ತು ಕೇದಾರ್‌ ಜಾಧವ್‌  ಪರಿಸ್ಥಿತಿಗೆ ತಕ್ಕಂತೆ ಆಡು ವುದು ಅಗತ್ಯ. ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಮನ್‌ದೀಪ್‌ ಸಿಂಗ್‌ ಈ ಪಂದ್ಯದಲ್ಲಿ ಆಡುತ್ತಿಲ್ಲ. ಆದ್ದರಿಂದ ಉನ್ಮುಕ್ತ್‌ ಚಾಂದ್‌ ಅಂತಿಮ ಇಲೆವೆನ್‌ನಲ್ಲಿ ಕಾಣಿ ಸಿಕೊಳ್ಳಬಹುದು. ಚಾಂದ್‌ ಗುರುವಾರ ನಡೆದ ಪಂದ್ಯದಲ್ಲಿ ಆಡಿರಲಿಲ್ಲ.

ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರೆ ಮಾತ್ರ ಗೆಲುವಿನ ಕನಸು ಕಾಣಲು ಸಾಧ್ಯ. ಆರ್‌. ವಿನಯ್‌ ಕುಮಾರ್‌ ಮತ್ತು ಜಯದೇವ್‌ ಉನದ್ಕತ್‌ ಅವರನ್ನು ಹೊರತುಪಡಿಸಿದರೆ ಇತರಯಾರಿಂದಲೂ  ಪ್ರಭಾವಿ ಬೌಲಿಂಗ್‌ ಕಂಡುಬಂದಿಲ್ಲ.

ಕೀರನ್‌ ಪೊವೆಲ್‌ ನೇತೃತ್ವದ ಪ್ರವಾಸಿ ತಂಡ ಈಗ ಆತ್ಮವಿಶ್ವಾಸದ ಖನಿ. ಏಕದಿನ ಸರಣಿ ಗೆದ್ದಿರುವ ಕಾರಣ ತಂಡದ ಎಲ್ಲ ಆಟಗಾರರು ಹೊಸ ಹುಮ್ಮಸ್ಸಿನಲ್ಲಿದ್ದಾರೆ. ಭಾರತ ಒಡ್ಡುವ ಯಾವುದೇ ಸವಾಲನ್ನು ಮೆಟ್ಟಿನಿಲ್ಲಲು ವಿಂಡೀಸ್‌ ಸಜ್ಜಾಗಿದೆ.

ಜೊನಾಥನ್‌ ಕಾರ್ಟರ್‌ ಮತ್ತು ಕರ್ಕ್‌ ಎಡ್ವರ್ಡ್ಸ್‌ ಏಕದಿನ ಸರಣಿಯಲ್ಲಿ ತೋರಿದ ಫಾರ್ಮ್ಅನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ನಾಯಕ ಪೊವೆಲ್‌ ಮತ್ತು ಆ್ಯಂಡ್ರೆ ರಸೆಲ್‌ ಕೂಡಾ ಭರ್ಜರಿ ಆಟವಾಡುವ ತಾಕತ್ತು ಹೊಂದಿದ್ದಾರೆ. ಹಲವು ಆಲ್‌ರೌಂಡರ್‌ಗಳನ್ನು ಹೊಂದಿರುವ ವಿಂಡೀಸ್‌ ಈ ಪಂದ್ಯದಲ್ಲೂ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವುದು ಖಚಿತ.

ಪಂದ್ಯದ ಆರಂಭ: ಮಧ್ಯಾಹ್ನ 12.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.