ADVERTISEMENT

ತೌಫಿಕ್‌ಗೆ ಆಘಾತ ನೀಡಿದ ಪ್ರಣಯ್

ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ಸಿಂಧು, ಸೈನಾಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

ನವದೆಹಲಿ: ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಯಾವ ರೀತಿ ಪ್ರಗತಿ ಸಾಧಿಸುತ್ತಿದೆ ಎಂಬುವುದಕ್ಕೆ ಮತ್ತೊಂದು ಅಚ್ಚರಿ ಪ್ರದರ್ಶನ ಸಾಕ್ಷಿಯಾಗಿದೆ. ಅಥೆನ್ಸ್ ಒಲಿಪಿಂಕ್ಸ್ ಚಿನ್ನದ ಪದಕ ವಿಜೇತ, ಮಾಜಿ ಅಗ್ರ ರ‍್ಯಾಂಕ್‌ನ ಆಟಗಾರ ಹಾಗೂ ಮಾಜಿ ವಿಶ್ವ ಚಾಂಪಿಯನ್ ಇಂಡೊನೇಷ್ಯಾದ ತೌಫಿಕ್ ಹಿದಾಯತ್‌ಗೆ ಭರವಸೆಯ ಆಟಗಾರ ಎಚ್.ಎಸ್.ಪ್ರಣಯ್ ನೀಡಿದ ಆಘಾತವೇ ಅದಕ್ಕೆ ಉದಾಹರಣೆ.

ಅದ್ಭುತ ಹಾಗೂ ಅಮೋಘ ಪ್ರದರ್ಶನ ತೋರಿದ ಭಾರತದ ಈ ಆಟಗಾರ ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಸಿರಿ ಪೋರ್ಟ್ ಕ್ರೀಡಾ ಸಮುಚ್ಚಯದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಪ್ರಣಯ್ 26-24, 21-9ರಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿರುವ ಹಿದಾಯತ್‌ಗೆ ಸೋಲುಣಿಸಿದರು. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಲಭಿಸಿದ ಮಹತ್ವದ ಗೆಲುವು ಇದು.

ಪಿ.ಕಶ್ಯಪ್ ಎದುರು ಗೆದ್ದಿದ್ದ ಹಿದಾಯತ್ ಕೇವಲ 40 ನಿಮಿಷಗಳಲ್ಲಿ ಪ್ರಣಯ್ ಅವರಿಗೆ ಶರಣಾದರು. ಮೊದಲ ಗೇಮ್ ತುಂಬಾ ಕುತೂಹಲಕ್ಕೆ ಕಾರಣವಾಗಿತ್ತು. ಇದರಲ್ಲಿ ಶ್ರೇಯಾಂಕ ರಹಿತ ಆಟಗಾರ ಪ್ರಣಯ್ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಒಂದು ಹಂತದಲ್ಲಿ ಈ ಗೇಮ್ 16-16, 23-23 ಪಾಯಿಂಟ್‌ಗಳಿಂದ ಸಮಬಲವಾಗಿತ್ತು. ಆ ಬಳಿಕ ಅಮೋಘ ಸ್ಮ್ಯಾಷ್‌ಗಳ ಮೂಲಕ ಮುನ್ನಡೆ ಸಾಧಿಸಿದರು.

ಆದರೆ ಎರಡನೇ ಗೇಮ್‌ನಲ್ಲಿ 20 ವರ್ಷ ವಯಸ್ಸಿನ ಪ್ರಣಯ್ ಅಚ್ಚರಿ ಪ್ರದರ್ಶನ ತೋರಿದರು. ಅನುಭವಿ ಆಟಗಾರನ ಮೇಲೆ ಒತ್ತಡ ಹೇರಿದ ಅವರು ಗೇಮ್ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದರು.

ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರು 19-21, 21-19, 21-15ರಲ್ಲಿ ಚೀನಾದ ಯು ಸನ್ ಅವರನ್ನು ಪರಾಭವಗೊಳಿಸಿದರು. 68 ನಿಮಿಷ ನಡೆದ ಈ ಹೋರಾಟದಲ್ಲಿ ಸಿಂಧು ಮೊದಲ ಗೇಮ್ ಸೋತರು. ಆದರೆ ಬಳಿಕ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಸಿಂಧು ಎಂಟರ ಘಟ್ಟದಲ್ಲಿ ಜಪಾನ್‌ನ ಯು ಹಶಿಮೊಟೊ ಎದುರು ಆಡಲಿದ್ದಾರೆ. 

ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಎರಡನೇ ಸುತ್ತಿನ ಪಂದ್ಯದಲ್ಲೇ ಆಘಾತ ಅನುಭವಿಸಿದರು. ವಿಶ್ವದ ಎರಡನೇ ‌ರ‍್ಯಾಂಕ್‌ನ ಸೈನಾ 21-13, 12-21, 20-22ರಲ್ಲಿ ಹಶಿಮೊಟೊ ಎದುರು ಸೋಲು ಕಂಡರು.

ನಿರ್ಣಾಯಕ ಗೇಮ್ ವಿವಾದಕ್ಕೆ ಕಾರಣವಾಯಿತು. ಸೈನಾ ಮುನ್ನಡೆ ಗಳಿಸಿದ್ದಾಗ ಅಂಪೈರ್ ನೀಡಿದ ತೀರ್ಪಿನಿಂದ ಅವರು ಕಂಗಾಲಾದರು. ಆ ನಂತರ ಎದುರಾಳಿ ಆಟಗಾರ್ತಿ ಆ ಗೇಮ್ ಜಯಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಸಾಯಿ ಪರಿಣಿತ್ 16-21, 29-27, 21-16ರಿಂದ ಮಲೇಷ್ಯಾದ ಇಸ್ಕಂದರ್ ಜುಲ್ಕರ್‌ನೈನ್ ವಿರುದ್ಧವೂ, ಆನಂದ್ ಪವಾರ್ 21-15, 15-21, 21-10ರಿಂದ ಹಾಂಗ್‌ಕಾಂಗ್‌ನ ಯುನ್ ಹು ಎದುರೂ, ಅಜಯ್ ಜಯರಾಮ್ 21-15, 21-12ರಲ್ಲಿ ಇಂಡೋನೇಷ್ಯಾದ ಡಯೋನಿಸಿಸ್ ಹಯೋಮ್ ಮೇಲೂ ಗೆದ್ದರು. ಆರ್.ಎಂ.ವಿ ಗುರು ಸಾಯಿದತ್ 21-12, 21-16ರಿಂದ ಭಾರತದವರೇ ಆದ ಕೆ.ಶ್ರೀಕಾಂತ್ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT