ADVERTISEMENT

ತ್ರಿಶೂಲ್ ಚಾಂಪಿಯನ್‌

ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:49 IST
Last Updated 6 ಸೆಪ್ಟೆಂಬರ್ 2013, 19:49 IST
ಅಮ್ಮ–ಮಗನ ಸಂಭ್ರಮ... ಬೆಂಗಳೂರಿನಲ್ಲಿ ಶುಕ್ರವಾರ ಕೊನೆಗೊಂಡ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸ್ಥಳೀಯ ಗಾಲ್ಫರ್‌ ತ್ರಿಶೂಲ್‌ ಚಿಣ್ಣಪ್ಪ ಅವರು ತಮ್ಮ ತಾಯಿ ಜೊತೆ ಸಂಭ್ರಮಿಸಿದ ಪರಿ	 –ಪ್ರಜಾವಾಣಿ ಚಿತ್ರ
ಅಮ್ಮ–ಮಗನ ಸಂಭ್ರಮ... ಬೆಂಗಳೂರಿನಲ್ಲಿ ಶುಕ್ರವಾರ ಕೊನೆಗೊಂಡ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ಸ್ಥಳೀಯ ಗಾಲ್ಫರ್‌ ತ್ರಿಶೂಲ್‌ ಚಿಣ್ಣಪ್ಪ ಅವರು ತಮ್ಮ ತಾಯಿ ಜೊತೆ ಸಂಭ್ರಮಿಸಿದ ಪರಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಸ್ಥಳೀಯ ಗಾಲ್ಫರ್‌ ತ್ರಿಶೂಲ್‌ ಚಿಣ್ಣಪ್ಪ ಟಾಟಾ ಸ್ಟೀಲ್‌ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆ ಕೋರ್ಸ್‌ನಲ್ಲಿ ಶುಕ್ರವಾರ 19ರ ಹರೆಯದ ತ್ರಿಶೂಲ್‌ ಅವರಿಂದ ಉತ್ತಮ ಪ್ರದರ್ಶನವೇನೂ ಮೂಡಿ ಬರಲಿಲ್ಲ. ಅವರು ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು 76 ಅವಕಾಶ ಬಳಸಿಕೊಂಡರು.

ಆದರೆ ಮೊದಲ ಮೂರು ಸುತ್ತುಗಳಲ್ಲಿ ತೋರಿದ ಪ್ರದರ್ಶನ ನೆರವಿಗೆ ಬಂತು. ಕೇವಲ ಒಂದು ಷಾಟ್ಸ್‌ನ ಮುನ್ನಡೆಯಿಂದ ತ್ರಿಶೂಲ್‌ ಮೊದಲ ಸ್ಥಾನ ಗಳಿಸಿದರು. ಅವರು ಒಟ್ಟು ನಾಲ್ಕು ಸುತ್ತುಗಳಿಂದ 284 (69, 72, 67, 76) ಸ್ಕೋರ್‌ಗ­ಳೊಂದಿಗೆ ಟ್ರೋಫಿ ಎತ್ತಿ ಹಿಡಿದರು. 

‘ಆರಂಭದಲ್ಲಿ  ಒತ್ತಡಕ್ಕೆ ಸಿಲುಕಿದ್ದೆ. ಕೊನೆಯ ಸುತ್ತಿನಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ ಎಂಬುದನ್ನು  ಒಪ್ಪಿಕೊಳ್ಳುತ್ತೇನೆ.    ಆದರೆ ಅಂತಿಮವಾಗಿ ಪ್ರಶಸ್ತಿ ಜಯಿಸಿರುವುದು ಖುಷಿ ನೀಡಿದೆ. ತವರಿನ   ಗಾಲ್ಫ್‌ ಕೋರ್ಸ್‌ನಲ್ಲಿ ಈ ಸಾಧನೆ ಮಾಡಿದ್ದೇನೆ’ ಎಂದು ತ್ರಿಶೂಲ್‌ ಪ್ರತಿಕ್ರಿಯಿಸಿದರು.

ತ್ರಿಶೂಲ್‌ಗೆ ಭಾರಿ ಪೈಪೋಟಿ ನೀಡಿದ ಅಂಕೂರ್‌ ಚಡ್ಡಾ ಎರಡನೇ ಸ್ಥಾನ ಪಡೆದರು. ಅವರು ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಗಮನಾರ್ಹ ಪ್ರದರ್ಶನ ತೋರಿದರು. ಈ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಅವರು ಕೇವಲ 68 ಅವಕಾಶ ಬಳಸಿಕೊಂಡರು. ಚಡ್ಡಾ ಅವರ ಒಟ್ಟು ಸ್ಕೋರ್‌ 285 (72, 76, 69, 68).

ಮೂರನೇ ದಿನದ ಅಂತ್ಯಕ್ಕೆ ಎರಡನೇ ಸ್ಥಾನದಲ್ಲಿದ್ದ ಉದಯನ್‌ ಮಾನೆ ಮೂರನೇ ಸ್ಥಾನ ಪಡೆದರು. ಅವರು ಕೊನೆಯ ದಿನದ ಸ್ಪರ್ಧೆ ಕೊನೆಗೊಳಿ­ಸಲು 77 ಅವಕಾಶ ತೆಗೆದುಕೊಂಡಿದ್ದು ಇದಕ್ಕೆ ಕಾರಣ.

ಗಾಲ್ಫರ್‌ ಗಳಿಸಿದ ಅಂತಿಮ ಸ್ಕೋರ್‌: ತ್ರಿಶೂಲ್‌ ಚಿನ್ನಪ್ಪ–284 (69, 72, 67, 76)–1, ಅಂಕೂರ್‌ ಚಡ್ಡಾ–285 (72, 76, 69, 68)–2. ಉದಯನ್‌ ಮಾನೆ–289 (71, 71, 70, 77)–3, ಅನೀಶ್‌ ಆಹ್ಲುವಾಲಿಯಾ–290 (72, 75, 69, 74)–4, ಜೈಬೀರ್‌ ಸಿಂಗ್‌–292 (74, 77, 67, 74)–5, ಮನು–292 (74, 77, 67, 74)–6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.