ADVERTISEMENT

ದಕ್ಷಿಣ ಅಮೆರಿಕಾಕ್ಕೆ ಈಜುಪಟು ಮೊಯಿನ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 19:38 IST
Last Updated 26 ಜುಲೈ 2013, 19:38 IST
ದಕ್ಷಿಣ ಅಮೆರಿಕಾದಲ್ಲಿ ನಡೆಯಲಿರುವ ಐಡಬ್ಲ್ಯುಎಎಸ್ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಬೆಳಗಾವಿಯ ಈಜುಪಟು ಮೊಯಿನ್ ಜುನ್ನೇದಿ ಅವರೊಂದಿಗೆ ತರಬೇತುದಾರ ಉಮೇಶ ಕಲಘಟಗಿ
ದಕ್ಷಿಣ ಅಮೆರಿಕಾದಲ್ಲಿ ನಡೆಯಲಿರುವ ಐಡಬ್ಲ್ಯುಎಎಸ್ ವಿಶ್ವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಬೆಳಗಾವಿಯ ಈಜುಪಟು ಮೊಯಿನ್ ಜುನ್ನೇದಿ ಅವರೊಂದಿಗೆ ತರಬೇತುದಾರ ಉಮೇಶ ಕಲಘಟಗಿ   

ಬೆಳಗಾವಿ: ದಕ್ಷಿಣ ಅಮೆರಿಕಾದಲ್ಲಿ ಆಗಸ್ಟ್ 6ರಿಂದ ನಡೆಯಲಿರುವ ಅಂತರರಾಷ್ಟ್ರೀಯ ವ್ಹೀಲ್‌ಚೇರ್ ಹಾಗೂ ಅಂಗವಿಚ್ಛೇದಿತರ ಕ್ರೀಡೆಯ (ಐಡಬ್ಲ್ಯುಎಎಸ್-2013) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಸದಸ್ಯ ಮೊಯಿನ್ ಜುನ್ನೇದಿ ಭಾರತದ ತಂಡವನ್ನು ಪ್ರತಿನಿಧಿಸಲಿದ್ದಾರೆ.

15 ವರ್ಷ ವಯಸ್ಸಿನ ಮೊಯಿನ್ ಜುನ್ನೇದಿ ಎಲುಬು ಸಂಬಂಧಿತ ರೋಗದಿಂದ ಬಳಲುತ್ತಿದ್ದು ಎಲುಬುಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕಡೆ ಮುರಿತವಿದೆ. ಇದುವರೆಗೆ ನಾಲ್ಕು ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಅವರು ಒಟ್ಟು 6 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಬೆಳಗಾವಿ ಸ್ವಿಮ್ಮರ್ಸ್‌ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ 2009ರಲ್ಲಿ ಅಂಗವಿಕಲರಿಗಾಗಿ ಈಜು ತರಬೇತಿ ಶಿಬಿರ ಹಮ್ಮಿಕೊಂಡಿದ್ದಾಗ ಮೊಯಿನ್ ಪಾಲ್ಗೊಂಡಿದ್ದರು. ಬಳಿಕ ನಿರಂತರ ತರಬೇತಿ ಪಡೆದುಕೊಂಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ರೋಟರಿ ಕಾರ್ಪೊರೇಶನ್ ಸ್ಪೋರ್ಟ್ಸ್ ಅಕಾಡೆಮಿಯ ಈಜುಗೊಳದಲ್ಲಿ ತರಬೇತುದಾರರಾದ ಉಮೇಶ ಕಲಘಟಗಿ, ಎಸ್.ಆರ್. ಸಿಂದ್ಯಾ, ಸುಧೀರ ಕುಸಾನೆ, ಪ್ರಸಾದ ತೆಂಡೋಲ್ಕರ್, ಆನಂದ ಪಾಟೀಲ, ಕಲ್ಲಪ್ಪ ಪಾಟೀಲ, ಅಜಿಂಕ್ಯ ಮೆಂಡಕೆ ಹಾಗೂ ಅಕ್ಷಯ ಶೆರೆಗಾರ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ್ದಾರೆ.

ಮುಸ್ತಾಕ್ ಅಹಮ್ಮದ್ ಹಾಗೂ ಕೌಸರ್‌ಬಾನು ದಂಪತಿಯ ಪುತ್ರನಾದ ಮೊಯಿನ್, ಮೂಲತಃ ರಾಯಬಾಗ ತಾಲ್ಲೂಕಿನ ಕುಡಚಿಯವರು. ಸದ್ಯ ಬೆಳಗಾವಿಯ ಟಿಳಕವಾಡಿಯ ಮರಾಠಾ ಕಾಲೊನಿಯಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.